For the best experience, open
https://m.samyuktakarnataka.in
on your mobile browser.

ಹಳ್ಳಿಕಾರ ಸಮುದಾಯ: ಪ್ರವರ್ಗ 3ಎ ಸೇರಿಸಿದ್ದು ಸರಿಯಲ್ಲ

02:36 PM Oct 27, 2024 IST | Samyukta Karnataka
ಹಳ್ಳಿಕಾರ ಸಮುದಾಯ  ಪ್ರವರ್ಗ 3ಎ ಸೇರಿಸಿದ್ದು ಸರಿಯಲ್ಲ

ಬೆಂಗಳೂರು: ನನಗೆ ಹಳ್ಳಿಕಾರ ಸಮುದಾಯದ ಬಗ್ಗೆ ಸಹಾನುಭೂತಿ ಇದೆ. ಖಂಡಿತಾ ಸಹಾಯ ಮಾಡುತ್ತೇನೆ. ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3ಎ ಸೇರಿಸಿದ್ದು ಸರಿಯಲ್ಲ. ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಬಗ್ಗೆ ವರದಿ ತರಿಸಿಕೊಂಡು ನಂತರ ಸೂಕ್ತ ತೀರ್ಮಾನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಳ್ಳಿಕಾರ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3A ಯಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಸಮಾಜದಲ್ಲಿ ಯಾವ್ಯಾವ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಜಾತಿ ಸಮೀಕ್ಷಾ ವರದಿಗಳು ಮುಖ್ಯ. 2011 ರ ಜನಗಣತಿಯೇ ಕೊನೆ ಗಣತಿ. ಈಗ ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ. ಕೇಂದ್ರದ ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡಿದೆ. ಈ ವ್ಯಾಪ್ತಿಯೊಳಗೆ ಹಳ್ಳಿಕಾರ ಸಮುದಾಯ ಬರುತ್ತದೆಯಾ ಎನ್ನುವುದು ಪರಿಶೀಲಿಸಬೇಕಿದೆ. ಈ ಸಮುದಾಯವನ್ನು ಪ್ರವರ್ಗ 3ಎ ಗೆ ಸೇರಿಸಿರುವುದು ಸರಿಯಲ್ಲ. ಆದ್ದರಿಂದ ಶಾಶ್ವತ ಹಿಂದುಳಿದ ಆಯೋಗಕ್ಕೆ ನಿಮ್ಮ ಬೇಡಿಕೆ ಕಳುಹಿಸಿ ಅಧ್ಯಯನ ಮಾಡಿಸಿ ವರದಿ ಪಡೆಯಲಾಗುವುದು. ಆ ಬಳಿಕ ಸಮುದಾಯಕ್ಕೆ ನ್ಯಾಯಯುತವಾಗಿ ಏನು ಸಲ್ಲಬೇಕು ಎನ್ನುವುದನ್ನು ಪರಿಶೀಲಿಸಲಾಗುವುದು ಎಂದರು.