ಹವಾಮಾನ ವಿಕೋಪ-ಪೈಲಟ್‌ಗೆ ತಾಪ
ದೆಹಲಿಯಿಂದ ಗೋವಾಗೆ ತೆರಳಬೇಕಾಗಿದ್ದ ಪ್ರಯಾಣಿಕನೊಬ್ಬ ಅನಿಶ್ಚಿತ ಪರಿಸ್ಥಿತಿಗೆ ಕಂಗೆಟ್ಟು ವಿಮಾನದ ಪೈಲಟ್‌ನ ಕಪಾಳಕ್ಕೆ ಬಾರಿಸಿರುವ ಘಟನೆಯಿಂದ ಕೇಂದ್ರ ಸರ್ಕಾರ ಹಾಗೂ ವಿಮಾನಯಾನ ಸಂಸ್ಥೆಗಳು ಎಚ್ಚೆತ್ತುಕೊಂಡಿವೆ.
ಹವಾಮಾನದ ವಿಕೋಪದ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ವಿಮಾನ ಹಾಗೂ ರೈಲುಗಳ ಸಂಚಾರ ಏರುಪೇರಾಗುತ್ತಿರುವ ಬೆಳವಣಿಗೆ ನಾನಾ ರೀತಿಯ ಕಂಟಕಗಳನ್ನು ಸೃಷ್ಟಿಸಿದೆ. ದೆಹಲಿ, ಚೆನೈ, ಬೆಂಗಳೂರು, ಮುಂಬೈ ಮೊದಲಾದ ಪಟ್ಟಣಗಳಲ್ಲಿ ಮುಂಜಾನೆ ಹಾಗೂ ಸಂಜೆ ಮಂಜಿನ ವಾತಾವರಣ ದಟ್ಟವಾಗಿರುವ ಕಾರಣ ಅನೇಕ ವಿಮಾನ ಹಾಗೂ ರೈಲುಗಳು ರದ್ದಾಗಿದ್ದರೆ, ಕೆಲವೆಡೆ ವಿಮಾನ ಸಂಚಾರವನ್ನೇ ಮುಂದೂಡಿರುವ ಬೆಳವಣಿಗೆಗಳು ಜರುಗಿವೆ. ಚಳಿಗಾಲ ಹಾಗೂ ಮಳೆಗಾಲದಲ್ಲಿ ಇಂತಹ ಬೆಳವಣಿಗೆ ಸರ್ವೇಸಾಮಾನ್ಯ. ಈ ಬಾರಿ ಹವಾಮಾನದ ಪ್ರಕೋಪ ಕೊಂಚ ಹೆಚ್ಚೆಂದೇ ಹೇಳಬೇಕು. ಸುಮಾರು ಹದಿನೈದು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಕರು ಕುಳಿತಿರಬೇಕಾದ ಘಟನೆಗಳು ಜರುಗಿವೆ. ದೆಹಲಿಯಿಂದ ಗೋವಾಗೆ ತೆರಳಬೇಕಾಗಿದ್ದ ಪ್ರಯಾಣಿಕನೊಬ್ಬ ಅನಿಶ್ಚಿತ ಪರಿಸ್ಥಿತಿಗೆ ಕಂಗೆಟ್ಟು ವಿಮಾನದ ಪೈಲಟ್‌ನ ಕಪಾಳಕ್ಕೆ ಬಾರಿಸಿರುವ ಘಟನೆಯಿಂದ ಕೇಂದ್ರ ಸರ್ಕಾರ ಹಾಗೂ ವಿಮಾನಯಾನ ಸಂಸ್ಥೆಗಳು ಎಚ್ಚೆತ್ತುಕೊಂಡಿವೆ. ಇದರ ಪರಿಣಾಮವಾಗಿ ವಿಮಾನ ಪ್ರಯಾಣ ಏರುಪೇರಾದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ಮಾಹಿತಿಯನ್ನು ಮುಂಚಿತವಾಗಿಯೇ ಒದಗಿಸುವ ಕ್ರಮವನ್ನು ಜಾರಿಗೊಳಿಸಲಾಗಿದೆ. ಮೂರು ಗಂಟೆಗಿಂತಲೂ ಹೆಚ್ಚಿನ ವಿಳಂಬ ಸಂಭವಿಸಿದರೆ ಅಂತಹ ವಿಮಾನ ಪ್ರಯಾಣವನ್ನೇ ರದ್ದುಪಡಿಸುವ ಅವಕಾಶವನ್ನೂ ಕೇಂದ್ರ ಸರ್ಕಾರ ವಿಮಾನ ಸಂಸ್ಥೆಗಳಿಗೆ ನೀಡಿದೆ.
ಹವಾಮಾನ ವಿಕೋಪದ ಪರಿಸ್ಥಿತಿಗೆ ಯಾರನ್ನೂ ದೂರುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಮಾನ ಹಾಗೂ ರೈಲು ಪ್ರಯಾಣ ಆರಂಭಿಸುವುದು ದುರಂತಕ್ಕೆ ಆಹ್ವಾನ ಕೊಟ್ಟಂತೆಯೇ ಸರಿ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಾತಾವರಣ ಸರಿ ಹೋಗುವವರೆಗೆ ಪ್ರಯಾಣವನ್ನು ಮುಂದೂಡುವುದು ಅನಿವಾರ್ಯವೇ. ಇಂತಹ ಪರಿಸ್ಥಿತಿಗೆ ವಿಮಾನ ಹಾಗೂ ರೈಲ್ವೆ ಆಡಳಿತ ವರ್ಗವನ್ನು ಸಾರ್ವಜನಿಕರು ಆಕ್ಷೇಪಿಸುವಂತಿಲ್ಲ. ಆದರೆ, ಗೋವಾಗೆ ಹೊರಟಿದ್ದ ಪ್ರಯಾಣಿಕ ವಿಳಂಬದಿಂದ ಸಿಟ್ಟಿಗೆದ್ದು ಪೈಲಟ್ ಮೇಲೆ ಹಲ್ಲೆ ಮಾಡಿರುವ ಕ್ರಮ ಯಾವ ದೃಷ್ಟಿಕೋನದಿಂದ ಸರಿಯಲ್ಲ. ಇಂತಹ ಸಂದೇಶವನ್ನು ಪ್ರಯಾಣಿಕರಿಗೆ ಮುಟ್ಟಿಸುವ ಸಲುವಾಗಿ ಹದ್ದುಮೀರಿದ ಪ್ರಯಾಣಿಕನ ವಿರುದ್ಧ ಕ್ರಮ ಜರುಗಿಸಿರುವ ಬೆಳವಣಿಗೆಗೆ ಸಾಕಷ್ಟು ಪ್ರಚಾರ ನೀಡಿರುವುದು ಒಳ್ಳೆಯ ಮಾರ್ಗವೇ. ಇದೇ ಹೊತ್ತಿಗೆ, ವಿಮಾನಯಾನ ಸಂಸ್ಥೆಗಳೂ ಕೂಡಾ ಪ್ರಯಾಣಿಕರಿಗೆ ವಿಮಾನ ಸಂಚಾರ ವಿಳಂಬವಾಗುವ ಸಂದರ್ಭದಲ್ಲಿ ಊಟೋಪಚಾರ ಹಾಗೂ ವಿಳಂಬಕ್ಕೆ ಕಾರಣಗಳನ್ನು ತಿಳಿಸಿಹೇಳುವುದು ಅಗತ್ಯ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪ್ರಯಾಣಿಕರಿಗೆ ಊಟೋಪಚಾರವಿಲ್ಲದೆ ಸುಮಾರು ಹನ್ನೆರಡು ಗಂಟೆಗಳ ಕಾಲ ವಿಮಾನದಲ್ಲಿಯೇ ಕುಳಿತಿರಬೇಕಾದ ಪ್ರಸಂಗಗಳು ಜರುಗಿವೆ. ಹಾಗೆಯೇ, ವಿಮಾನದ ವಿಳಂಬಕ್ಕೆ ಕಾರಣ ಏನು ಹಾಗೂ ಯಾವಾಗ ಸಂಚಾರ ಆರಂಭಿಸುತ್ತದೆ ಎಂಬ ವಿವರಗಳೂ ಕೂಡಾ ಪ್ರಯಾಣಿಕರಿಗೆ ಸಿಗದೆ ಅನಿಶ್ಚಿತ ಪರಿಸ್ಥಿತಿ ಉಂಟಾಗಿರುವ ಘಟನೆಗಳೂ ಜರುಗಿವೆ. ಈ ಸಂಬಂಧದಲ್ಲಿ ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಬಿಕ್ಕಟ್ಟಿಗೆ ಪರಿಹಾರ ರೂಪಿಸಲು ಮಧ್ಯಪ್ರವೇಶಿಸಿ ಪ್ರಯಾಣಿಕರು ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಚೆನೈನಲ್ಲಿ ರೈಲು ಹಾಗೂ ವಿಮಾನ ಸಂಚಾರದ ವಿಳಂಬಕ್ಕೆ ಇರುವ ಕಾರಣವೇ ಬೇರೆ. ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆಯುವ ಭೋಗಿ ಆಚರಣೆಯಲ್ಲಿ ದಟ್ಟವಾದ ಹೊಗೆ ವಿಮಾನ ನಿಲ್ದಾಣದ ಸುತ್ತಮುತ್ತ ಹಬ್ಬಿದ್ದು ಇದಕ್ಕೆ ಕಾರಣ. ಬೆಂಗಳೂರಿನಲ್ಲಿ ಅನೇಕ ಅಂತಾರರಾಷ್ಟ್ರೀಯ ವಿಮಾನಗಳು ಇಳಿಯಲು ಹಾಗೂ ಹೊರಡಲು ಸಾಧ್ಯವಾಗದೇ ಬೇರೆ ವಿಮಾನ ನಿಲ್ದಾಣಗಳನ್ನು ಆಶ್ರಯಿಸಿರುವ ಘಟನೆಗಳು ಜರುಗಿವೆ. ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಸಂಚಾರ ಗಮನಾರ್ಹವಾಗಿಯೇ ಹೆಚ್ಚಿರುತ್ತದೆ. ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ಮುಹೂರ್ತ ಸಮೀಪಿಸುತ್ತಿರುವ ಸಂದರ್ಭದಲ್ಲಿ ಎಲ್ಲ ನಿಲ್ದಾಣಗಳಿಂದಲೂ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ. ಈಗಿನ ಹವಾಮಾನದ ಬಿಕ್ಕಟ್ಟಿನಲ್ಲಿ ತೊಂದರೆಗೆ ಒಳಗಾಗಿರುವುದು ಇಂಡಿಗೋ ವಿಮಾನ ಸಂಸ್ಥೆ. ಭಾರತದಲ್ಲಿ ಇಂಡಿಗೋ ವಿಮಾನ ಸಂಸ್ಥೆ ಹೆಚ್ಚು ಪ್ರಯಾಣಿಕರಿಗೆ ಸೌಲಭ್ಯ ಒದಗಿಸುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಗೆ ಸೇರಿದ ಹೆಚ್ಚಿನ ವಿಮಾನಗಳ ಸಂಚಾರ ವಿಳಂಬವಾಗಿರುವುದರಿಂದ ಅದರ ಪ್ರತಿಷ್ಠೆಗೆ ಕೊಂಚ ಮುಕ್ಕಾದಂತಾಗಿದೆ. ಆದರೆ, ಹವಾಮಾನದ ವಿಕೋಪದ ಮುಂದೆ ಈ ಅಂತಸ್ತು ಪ್ರತಿಷ್ಠೆ ಗಣನೆಗೆ ಬರಲಾರದು.