For the best experience, open
https://m.samyuktakarnataka.in
on your mobile browser.

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್

12:12 PM Sep 29, 2023 IST | Samyukta Karnataka
ಹಸಿರು ಕ್ರಾಂತಿಯ ಹರಿಕಾರ ಎಂ ಎಸ್ ಸ್ವಾಮಿನಾಥನ್

ಸ್ವಾಮಿನಾಥನ್ ಅವರ ಬದುಕು ಕಠಿಣ ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿದೆ.
ಡಾ.ಎಂ.ಎಸ್.ಸ್ವಾಮಿನಾಥನ್, ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ. ಅವರು ಜನಿಸಿದ ದಿನ ಆಗಸ್ಟ್ ೭. ೧೯೨೫. ಸ್ವಾಮಿನಾಥನ್ ಅವರ ತಂದೆ ವೈದ್ಯರಾಗಿದ್ದು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾಗಿದ್ದರು. ತಮ್ಮ ಪ್ರಾರಂಭಿಕ ಶಿಕ್ಷಣದ ನಂತರದಲ್ಲಿ ಅವರು ಕೃಷಿ ಪದವಿಗಾಗಿ ಓದಿದರು. ೧೯೪೯ರ ವರ್ಷದಲ್ಲಿ ಅವರಿಗೆ ಜೈವಿಕ ತಂತ್ರಜ್ಞಾನದಲ್ಲಿನ ಅಧ್ಯಯನಕ್ಕಾಗಿ ನೆದೆರ್ ಲ್ಯಾಂಡ್ ದೇಶದ ವಿದ್ಯಾರ್ಥಿವೇತನ ದೊರಕಿತು. ಮುಂದೆ ಅವರು ಅಮೆರಿಕಾದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿ.ಎಚ್.ಡಿ ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಲ್ಲಿ ಉಚ್ಚತಮ ಶಿಕ್ಷಣವನ್ನು ಗಳಿಸಿದರು.
ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದೆಂದರೆ ವಿದೇಶೀ ರೈತರನ್ನು ಶ್ರೀಮಂತರನ್ನಾಗಿಸುವ ಕೈಂಕರ್ಯ ಎಂಬುದು ಅವರ ಬಲವಾದ ಅಭಿಪ್ರಾಯವಾಗಿತ್ತು. ಆದ್ದರಿಂದ ಭಾರತ ದೇಶವನ್ನು ಎಲ್ಲ ರೀತಿಯ ಆಹಾರ ಧಾನ್ಯಗಳ ಆಮದುಗಳಿಂದ ಮುಕ್ತವಾಗಿಸಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ೧೯೬೬ರ ವರ್ಷದಲ್ಲಿ ಅವರು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಕೆಂದ್ರದ(ಐಸಿಎಆರ್) ನಿರ್ದೇಶಕರಾಗಿ ನೇಮಕಗೊಂಡರು. ಭಾರತೀಯ ಕೃಷಿಕರ ಮೂಲ ಅವಶ್ಯಕತೆಗಳ ಕುರಿತಾಗಿ ನೇರವಾದ ಅನುಭವ ಪಡೆಯುವ ನಿಟ್ಟಿನಲ್ಲಿ ಸ್ವಾಮಿನಾಥನ್ ಅವರು, ಮಣ್ಣಿನ ಮಕ್ಕಳಾದ ರೈತರೊಂದಿಗೆ ತಾವೂ ಬೆರೆತು ಕೈಕೆಸರು ಮಾಡಿಕೊಂಡು ಅಹರ್ನಿಶಿ ದುಡಿದರು. ಅವರು ಸಿದ್ಧಪಡಿಸಿದ ವರದಿಯನ್ನು ಮೆಚ್ಚಿದ ರಾಕ್ ಫೆಲ್ಲರ್ ಪ್ರತಿಷ್ಠಾನ ಅವರಿಗೆ ಆರ್ಥಿಕ ಸಹಾಯ ನೀಡಲು ಮುಂದೆ ಬಂದದ್ದರ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಮಿಶ್ರತಳಿ ಗೋಧಿ ಬೀಜಗಳನ್ನು ಅಭಿವೃದ್ಧಿಪಡಿಸಿದರು. ಇದರ ಬಳಕೆಯ ದೆಸೆಯಿಂದಾಗಿ ಗೋಧಿ ಉತ್ಪನ್ನದಲ್ಲಿನ ಇಳುವರಿ ಹಲವು ಪಟ್ಟು ಹಿರಿದಾಗಿತ್ತು. ಈ ತೆರನಾದ ಗೋಧಿ ಬೀಜಗಳು ರೈತರಲ್ಲಿ ಸಂತಸ ಸಂಭ್ರಮೋತ್ಸಾಹಗಳನ್ನು ಮೂಡಿಸಿ ಬಹಳಷ್ಟು ರೈತರು ಪ್ರಯೋಜನ ಪಡೆಯಲಾರಂಭಿಸಿದರು. ಆಧುನಿಕ ಬೇಸಾಯ ಪದ್ಧತಿಗಳ ಅಳವಡಿಕೆಯಿಂದಾಗುವ ಪ್ರಯೋಜನಗಳನ್ನು ರೈತಾಪಿ ಜನರಿಗೆ ಮನನ ಮಾಡಿಕೊಡುವುದಕ್ಕಾಗಿ ಡಾ. ಸ್ವಾಮಿನಾಥನ್ ಅವರು ದೆಹಲಿಯ ಆಸುಪಾಸಿನಲ್ಲಿ ಸುಮಾರು ೨೦೦೦ ಪ್ರಾತಿನಿಧಿಕ ತೋಟಗಳನ್ನು ನಿರ್ಮಿಸಿದರು. ತಮ್ಮ ಅಭಿವೃದ್ಧಿಶೀಲ ಕಾಯಕದ ಪ್ರಥಮ ಹಂತದಲ್ಲಿ, ೧೮೦೦೦ ಟನ್‌ಗಳ ಮೆಕ್ಸಿಕನ್ ಗೊಧಿಯ ಬೀಜಗಳನ್ನು ಆಮದು ಮಾಡಿಕೊಳ್ಳುವ ಪ್ರಸ್ತಾಪವನ್ನು ಸರ್ಕಾರದ ಮುಂದಿರಿಸಿದರು. ಸ್ವಾಮಿನಾಥನ್ ಅವರ ಕಾರ್ಯವೈಖರಿಯಲ್ಲಿದ್ದ ಹುಮ್ಮಸ್ಸು ಮತ್ತು ಸಾಧ್ಯತೆಗಳನ್ನು ಮನಗಂಡ ಸರ್ಕಾರ ಅವರಿಗೆ ಬೆಂಬಲ ನೀಡಿತು. ಈ ಎಲ್ಲ ಕಾರಣಗಳ ದಿಸೆಯಿಂದಾಗಿ ೧೯೬೦ರ ವರ್ಷದಲ್ಲಿ ಕೇವಲ ೧.೨ಕೋಟಿ ಟನ್‌ಗಳ ಗೋಧಿ ಉತ್ಪಾದಿಸುತ್ತಿದ್ದ ದೇಶ ಮುಂದಿನ ದಶಕಗಳಲ್ಲಿ ೭ಕೋಟಿ ಟನ್‌ಗಳಿಗೂ ಮೀರಿದ ಉತ್ಪಾದನಾ ಸಾಮರ್ಥ್ಯಗಳಿಸಿ ಆಹಾರ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತ ನಡೆಯಿತು. ಹೀಗೆ ತಮ್ಮನ್ನು ನಿತ್ಯ ಅಭಿವೃದ್ಧಿಶೀಲ ಪ್ರಯೋಗಶೀಲತೆಯಲ್ಲಿ ತೊಡಗಿಸಿಕೊಂಡ ಸ್ವಾಮಿನಾಥನ್ ಅವರು ವೈಜ್ಞಾನಿಕ ತಳಹದಿಯ ಬೇಸಾಯ ಪದ್ಧತಿಗಳ ಅನುಷ್ಠಾನದಲ್ಲಿ ತಮ್ಮ ಗಮನವನ್ನು ಕೆಂದ್ರೀಕರಿಸಿದರು. ಇದೇ ಹಸಿರು ಕ್ರಾಂತಿ ಎಂದು ಹೆಸರು ಪಡೆಯಿತು. ತಮ್ಮ ಈ ಸಾಧನೆಗಾಗಿ ಡಾ. ಸ್ವಾಮಿನಾಥನ್ ಅವರು ಭಾರತದ ಹಸಿರುಕ್ರಾಂತಿಯ ಪಿತಾಮಹ ಎಂದು ಮನೆಮಾತಾದರು. ಭಾರತದ ಕೃಷಿ ವರುಣನ ಕೃಪೆ ಇಲ್ಲವೇ ಅವಕೃಪೆಗೆ ಸಿಲುಕಿ ಡೋಲಾಯಮಾನವಾದ ಸ್ಥಿತಿ ಅನುಭವಿಸುವುದನ್ನು ಕಂಡ ಸ್ವಾಮಿನಾಥನ್sustainable water security system for India' ಎಂಬ ವಿಷಯದಲ್ಲಿ ತೀವ್ರವಾದ ಚಿಂತನೆಯನ್ನು ನಡೆಸಿದರು. ಕೃಷಿ ಕ್ಷೇತ್ರದಲ್ಲಿ ಟ್ರ್ಯಾಕ್ಟರ್ ಮತ್ತಿತರ ಉಳುಮೆ ಮತ್ತು ಸಾಗುವಳಿ ಯಂತ್ರಗಳ ಬಳಕೆ, ಕಳೆ ಕೀಳುವ ಯಂತ್ರಗಳ ಬಳಕೆ, ಬೆಳೆ ತೆಗೆಯುವುದಕ್ಕೂ ಯಂತ್ರಗಳ ಉತ್ಪಾದನೆ ಇವೇ ಮುಂತಾಗಿ ಹಲವು ನಿಟ್ಟಿನಲ್ಲಿ ಅವರು ಅಭಿವೃದ್ಧಿ ಪಡಿಸಿದ ವಿಶಿಷ್ಟ ತಂತ್ರಗಳು, ಕೃಷಿ ಕ್ಷೇತ್ರದಲ್ಲಿನ ಮಹತ್ವದ ಕ್ರಾಂತಿಗೆ ಪೂರಕವಾಗಿದ್ದವು.
೧೯೯೦ರ ವರ್ಷದಲ್ಲಿ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಸಂಸ್ಥೆಯನ್ನು ಚೆನೈನಲ್ಲಿ ಸ್ಥಾಪಿಸಿ ಕೃಷಿಕ್ಷೇತ್ರದಲ್ಲಿನ ತಮ್ಮ ಕೊಡುಗೆಯನ್ನು ನಿರಂತರವಾಗಿ ಮುಂದುವರಿಸಿದರು. ಈ ಸಂಸ್ಥೆ ಭಾರತೀಯ ಹಳ್ಳಿಗರ ಆರ್ಥಿಕ ಸ್ವಾವಲಂಬನೆಗಾಗಿ ಮಹತ್ವದ ಕಾಯಕ ನಡೆಸುತ್ತಿದೆ. ಸ್ವಾಮಿನಾಥನ್ ಅವರಿಗೆ ಸಂದಿರುವ ವಿಶ್ವದಾದ್ಯಂತದ ಗೌರವಗಳು ಅನೇಕ. ೧೯೭೧ರಲ್ಲಿ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತು. ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕಾರದಂತಹ ಮಹತ್ವದ ಪ್ರಶಸ್ತಿಗಳೆಲ್ಲವೂ ಅವರಿಗೆ ಸಂದಿವೆ. ೧೯೮೬ರ ವರ್ಷದಲ್ಲಿ ಅವರಿಗೆ ಆಲ್ಬರ್ಟ್ ಐನ್‌ಸ್ಟೀನ್ ಪ್ರಶಸ್ತಿ ಮತ್ತು ೧೯೮೭ರಲ್ಲಿ ಪ್ರಥಮ ವಿಶ್ವ ಆಹಾರ ಪ್ರಶಸ್ತಿಗಳ ಗೌರವ ಕೂಡಾ ಸಂದಿತು. ೧೯೯೧ರಲ್ಲಿ ಅವರಿಗೆ ಅಮೆರಿಕದ ಟೈಲರ್ ಪುರಸ್ಕಾರ ಹಾಗೂ ೧೯೯೯ರ ವರ್ಷದಲ್ಲಿ ಯುನೆಸ್ಕೋದ ಗಾಂಧಿ ಸ್ವರ್ಣ ಪುರಸ್ಕಾರಗಳು ಸಂದವು. ಟೈಮ್ಸ್ ಪತ್ರಿಕೆ ೧೯೯೯ರ ವರ್ಷದಲ್ಲಿ ಸ್ವಾಮಿನಾಥನ್ ಅವರನ್ನು ೨೦ನೇ ಶತಮಾನದ ೨೦ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಿ ಭಾರತಕ್ಕೆ ಗೌರವ ಸಲ್ಲಿಸಿತು.
ಸ್ವಾಮಿನಾಥನ್ ಅವರ ಬದುಕು ಕಠಿಣ ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿದೆ. ಸ್ವಾಮಿನಾಥನ್ ಅವರ ಪುತ್ರಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀಫ್ ಸೈಂಟಿಸ್ಟ್ ಪದವಿಯ ಅಲಂಕೃತರು.