For the best experience, open
https://m.samyuktakarnataka.in
on your mobile browser.

ಹಸೀನಾ, ಬಾಂಗ್ಲಾದೊಡನೆ ಸಂಬಂಧ: ಭಾರತದ ಸಂದಿಗ್ಧ

03:26 AM Sep 14, 2024 IST | Samyukta Karnataka
ಹಸೀನಾ  ಬಾಂಗ್ಲಾದೊಡನೆ ಸಂಬಂಧ  ಭಾರತದ ಸಂದಿಗ್ಧ

ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ವಾರಗಳ ಕಾಲ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಉಗ್ರ ಪ್ರತಿಭಟನೆಗಳ ಪರಿಣಾಮವಾಗಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದು, ದೀರ್ಘಕಾಲೀನ ಮಿತ್ರರಾಷ್ಟ್ರವಾದ ಭಾರತಕ್ಕೆ ಹೆಲಿಕಾಪ್ಟರ್ ಮೂಲಕ ಆಗಸ್ಟ್ ೫ರಂದು ಪರಾರಿಯಾದರು. ಆ ಮೂಲಕ ಶೇಖ್ ಹಸೀನಾ ಅವರ ೧೫ ವರ್ಷಗಳ ಕಟ್ಟುನಿಟ್ಟಿನ ಆಡಳಿತ ಕೊನೆಗೊಂಡಿತು.
ಬಾಂಗ್ಲಾದೇಶದ ಇಂಟರ್ನ್ಯಾಷನಲ್ ಕ್ರೈಮ್ಸ್ ಟ್ರಿಬ್ಯುನಲ್(ಐಸಿಟಿ) ನೂತನ ಮುಖ್ಯ ಪ್ರಾಸಿಕ್ಯೂಟರ್ ಆಗಿ ಮೊಹಮ್ಮದ್ ತೈಜುಲ್ ಇಸ್ಲಾಂ ನೇಮಕಗೊಂಡಿದ್ದಾರೆ. ಸೆಪ್ಟೆಂಬರ್ ೮ ಭಾನುವಾರದಂದು ಮಾತನಾಡಿದ ಅವರು, ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾರನ್ನು ಬಾಂಗ್ಲಾದೇಶಕ್ಕೆ ಮರಳಿ ಕರೆತರಲು ಅಗತ್ಯ ಕ್ರಮಗಳನ್ನು ದೇಶ ಕೈಗೊಳ್ಳಲಿದೆ ಎಂದಿದ್ದರು.
ಭಾರತದ ಜೊತೆ ಬಾಂಗ್ಲಾದೇಶ ಹಸ್ತಾಂತರ ಒಪ್ಪಂದ ಮಾಡಿಕೊಂಡಿದ್ದು, ಅದರಡಿಯಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನು ಬಾಂಗ್ಲಾದೇಶಕ್ಕೆ ಕರೆತಂದು, ವಿಚಾರಣೆಗೆ ಒಳಪಡಿಸುವ ಕುರಿತು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬಾಂಗ್ಲಾದೇಶಿ ಅಧಿಕಾರಿಗಳು ಹೇಳಿದ್ದಾರೆ. ಶೇಖ್ ಹಸೀನಾ ವಿರುದ್ಧ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಸಮೂಹ ಹತ್ಯೆಗೆ ಆದೇಶಿಸಿದ ಆರೋಪವಿದೆ.
ಇಂಟರ್ನ್ಯಾಷನಲ್ ಕ್ರೈಮ್ಸ್ ಟ್ರಿಬ್ಯುನಲ್ ಬಾಂಗ್ಲಾದೇಶದ ವಿಶೇಷ ನ್ಯಾಯಾಲಯವಾಗಿದ್ದು, ಯುದ್ಧಾಪರಾಧ, ನರಮೇಧ, ಮತ್ತು ಮಾನವೀಯತೆಯ ಮೇಲೆ ನಡೆಸಿದ ದಾಳಿಗಳ, ಅದರಲ್ಲೂ ೧೯೭೧ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದಲ್ಲಿ ನಡೆದ ಅಪರಾಧಗಳ ವಿಚಾರಣೆಗೆ ಸ್ಥಾಪಿಸಲಾಗಿತ್ತು. ಢಾಕಾದ ಟ್ರಿಬ್ಯೂನಲ್ ಕಚೇರಿಯಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ಇಸ್ಲಾಂ, ಈಗಾಗಲೇ ಪರಾರಿಯಾಗಿರುವ ಶೇಖ್ ಹಸೀನಾ ಮತ್ತು ಇತರ ಆರೋಪಗಳನ್ನು ಬಂಧಿಸಲು ವಾರಂಟ್ ನೀಡಲು ಅರ್ಜಿ ಸಲ್ಲಿಸಲಾಗುವುದು ಎಂದಿದ್ದರು.
ಆರೋಪಿಗಳ ವಿರುದ್ಧ ಅವಶ್ಯಕ ಮಾಹಿತಿಗಳು, ದಾಖಲೆಗಳು ಮತ್ತು ಸಾಕ್ಷಿಗಳನ್ನು ದೇಶದ ವಿವಿಧ ಭಾಗಗಳಿಂದ ಕಲೆಹಾಕುವುದು ಕಷ್ಟಕರವಾದ, ಬೃಹತ್ತಾದ ಕೆಲಸವಾಗಿದೆ ಎಂದು ಇಸ್ಲಾಂ ಹೇಳಿದ್ದಾರೆ. ಇವೆಲ್ಲವನ್ನೂ ಜಾಗರೂಕವಾಗಿ ಕಲೆಹಾಕಿ, ಪರಿಶೀಲಿಸಿ, ಬಳಿಕ ಟ್ರಿಬ್ಯುನಲ್ ಮುಂದೆ ಇಡಬೇಕಾಗುತ್ತದೆ. ಈಗಾಗಲೇ ಜಾರಿಯಲ್ಲಿರುವ ಐಸಿಟಿ ಕಾಯ್ದೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಬಾಂಗ್ಲಾದೇಶದ ನೂತನ ಮಧ್ಯಂತರ ಸರ್ಕಾರವನ್ನು ಸಂಪರ್ಕಿಸಲಾಗುವುದು. ಆ ಮೂಲಕ, ನೂತನ ಪ್ರಕರಣಗಳನ್ನು ಐಸಿಟಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಸ್ಲಾಂ ತಿಳಿಸಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಅವರ ನೇತೃತ್ವದಲ್ಲಿ ನೂತನ ಮಧ್ಯಂತರ ಸರ್ಕಾರ ಜಾರಿಗೆ ಬಂದ ಬಳಿಕ ಹಿಂದಿನ ನ್ಯಾಯಾಧೀಶರು, ಪ್ರಾಸಿಕ್ಯೂಟರ್‌ಗಳು ಮತ್ತು ತನಿಖಾಧಿಕಾರಿಗಳು ರಾಜೀನಾಮೆ ನೀಡಿದ್ದು, ಹೊಸದಾಗಿ ನೇಮಕಾತಿ ನಡೆಸಿ, ಐಸಿಟಿಯನ್ನು ಮರು ರೂಪಿಸಬೇಕಿದೆ. ಮಧ್ಯಂತರ ಸರ್ಕಾರದ ಆರೋಗ್ಯ ಸಲಹೆಗಾರರಾದ ನೂರ್‌ಜಹಾನ್ ಬೇಗಂ ಅವರು ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ೧,೦೦೦ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದಿದ್ದಾರೆ.
ಹಸೀನಾ ಕುರಿತು ಭಾರತದ ರಾಜತಾಂತ್ರಿಕ ಸಂದಿಗ್ಧ
ಬಾಂಗ್ಲಾದೇಶದ ರಾಜಕೀಯ ಅಶಾಂತಿ ಶೇಖ್ ಹಸೀನಾ ಕೇಂದ್ರಿತವಾಗಿತ್ತು. ಬಾಂಗ್ಲಾದೇಶದಲ್ಲಿ ಮಾತ್ರವಲ್ಲದೆ, ಭಾರತದಲ್ಲೂ ಹಸೀನಾ ಚರ್ಚೆಯ ವಿಷಯವಾಗಿದ್ದರು. ಹಸೀನಾರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಬೇಕೆಂಬ ಕೂಗು ಭಾರತವನ್ನು ರಾಜತಾಂತ್ರಿಕವಾಗಿ ಕಷ್ಟಕರ ಸ್ಥಿತಿಗೆ ತಳ್ಳುವ ಸಾಧ್ಯತೆಗಳಿದ್ದು, ಬಾಂಗ್ಲಾದೇಶದೊಡನೆ ಸಂಬಂಧ ಹದಗೆಡುವ ಅಪಾಯಗಳಿವೆ.
ಬಾಂಗ್ಲಾದೇಶದ ಜನತೆಯೂ ಹಸೀನಾರನ್ನು ಮರಳಿಸುವಂತೆ ವ್ಯಾಪಕವಾಗಿ ಆಗ್ರಹಿಸತೊಡಗಿದ್ದು, ಇದರಿಂದ ಭಾರತದ ಮುಂದೆ ಎರಡು ಸವಾಲುಗಳು ಮೂಡಿವೆ.
ಅವೆಂದರೆ: ಭಾರತ ಶೇಖ್ ಹಸೀನಾಗಾಗಿ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಅಧಿಕೃತ ಗಡೀಪಾರು ಮನವಿಯನ್ನು ತಿರಸ್ಕರಿಸಬಹುದೇ?
ಈ ಪ್ರಕ್ರಿಯೆಯಲ್ಲಿ ಭಾರತ-ಬಾಂಗ್ಲಾದೇಶ ಹಸ್ತಾಂತರ ಒಪ್ಪಂದದ ಪಾತ್ರವೇನು?
ಸ್ವದೇಶ ಬಾಂಗ್ಲಾದೇಶದಿಂದ ಪರಾರಿಯಾದ ಬಳಿಕ ಶೇಖ್ ಹಸೀನಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹಸೀನಾರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಬಾಂಗ್ಲಾದೇಶ ರದ್ದುಪಡಿಸಿದ್ದು, ಆಕೆ ಭಾರತದಲ್ಲಿ ಉಳಿದುಕೊಂಡಿರುವುದು ಬಾಂಗ್ಲಾದ ಕೋಪಕ್ಕೆ ಕಾರಣವಾಗಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಒಂದು ಹಸ್ತಾಂತರ ಒಪ್ಪಂದವಿದ್ದು, ಅದರಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಲು ಹಸೀನಾರನ್ನು ಬಾಂಗ್ಲಾದೇಶಕ್ಕೆ ಮರಳಿಸಬಹುದು. ಈ ಹಸ್ತಾಂತರ ಒಪ್ಪಂದವನ್ನು ೨೦೧೩ರಲ್ಲಿ ರಚಿಸಲಾಗಿದ್ದು, ೨೦೧೬ರಲ್ಲಿ ಪರಿಷ್ಕರಿಸಲಾಗಿತ್ತು. ಈ ಒಪ್ಪಂದ ಉಭಯ ದೇಶಗಳ ನಡುವೆ ಗಡಿ ನುಸುಳುವಿಕೆ ಮತ್ತು ಭಯೋತ್ಪಾದನೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಈ ಒಪ್ಪಂದದ ಮೂಲ ಉದ್ದೇಶ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಲ್ಲ ಅಪರಾಧಿಗಳ ಹಸ್ತಾಂತರವನ್ನು ಸರಳವಾಗಿಸುವುದಾಗಿತ್ತು. ಬಾಂಗ್ಲಾದೇಶದಲ್ಲಿ ಅವಿತಿರುವ ಭಾರತೀಯ ಗಲಭೆಕೋರರು ಮತ್ತು ಭಾರತದಿಂದ ಕಾರ್ಯಾಚರಿಸುವ ಬಾಂಗ್ಲಾದೇಶಿ ಉಗ್ರರನ್ನು ನಿಯಂತ್ರಿಸಲು ಈ ಒಪ್ಪಂದ ನಡೆಸಲಾಗಿತ್ತು. ಈ ಒಪ್ಪಂದ ಕೆಲವು ಪ್ರಮುಖ ನಿಯಮಗಳನ್ನು ಒಳಗೊಂಡಿದ್ದು, ಕನಿಷ್ಠ ಒಂದು ವರ್ಷವಾದರೂ ಜೈಲು ಶಿಕ್ಷೆಗೆ ಗುರಿಯಾಗುವಂತಹ ಅಪರಾಧ ನಡೆಸಿದವರನ್ನು ಇದರಡಿಯಲ್ಲಿ ಹಸ್ತಾಂತರಿಸಲಾಗುತ್ತಿತ್ತು.
ಈ ಒಪ್ಪಂದದ ಒಂದು ಪ್ರಮುಖ ಅಂಶವೆಂದರೆ, ಪ್ರಿನ್ಸಿಪಲ್ ಆಫ್ ಡ್ಯುವಲ್ ಕ್ರಿಮಿನಾಲಿಟಿ, ಅಂದರೆ, ಯಾವ ಅಪರಾಧಕ್ಕಾಗಿ ವ್ಯಕ್ತಿಯ ಹಸ್ತಾಂತರಕ್ಕೆ ಮನವಿ ಸಲ್ಲಿಸಲಾಗಿದೆ ಎನ್ನುವುದು. ಈ ತತ್ವದಡಿ, ವ್ಯಕ್ತಿಯ ಹಸ್ತಾಂತರ ನಡೆಸಲು ಆತನ ತಪ್ಪನ್ನು ಉಭಯ ದೇಶಗಳು ಅಪರಾಧ ಎಂದು ಪರಿಗಣಿಸಬೇಕು. ಅದರೊಡನೆ, ಈ ಒಪ್ಪಂದ ಅಪರಾಧ ಪ್ರಯತ್ನ, ಅಪರಾಧ ಮಾಡಲು ಬೆಂಬಲಿಸುವುದು, ನೆರವಾಗುವುದು ಮತ್ತು ಅಪರಾಧ ಕೃತ್ಯದಲ್ಲಿ ಸಹಭಾಗಿಯಾಗಿರುವವರ ಹಸ್ತಾಂತರವನ್ನೂ ಒಳಗೊಂಡಿದೆ. ಶೇಖ್ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವೆಂದರೆ:
ಕೊಲೆ ಬಲವಂತದ ಕಣ್ಮರೆ: ಓರ್ವ ವ್ಯಕ್ತಿಯನ್ನು ಸರ್ಕಾರ ರಹಸ್ಯವಾಗಿ ವಶಪಡಿಸಿಕೊಂಡು ಅಥವಾ ಸೆರೆಮನೆಗೆ ತಳ್ಳಿ, ಆ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ನೀಡಲು ನಿರಾಕರಿಸಿ, ಅವರಿಗೆ ಕಾನೂನಿನ ಭದ್ರತೆ ಲಭಿಸದಂತೆ ಮಾಡುವುದು.
ನರಮೇಧ: ಒಂದು ದೊಡ್ಡ ಗುಂಪು ಅಥವಾ ಅಪಾರ ಸಂಖ್ಯೆಯ ಜನರನ್ನು ಅವರ ಜನಾಂಗ, ರಾಷ್ಟ್ರೀಯತೆ, ಅಥವಾ ಧರ್ಮದ ಆಧಾರದಲ್ಲಿ ಹತ್ಯೆ ಮಾಡುವುದನ್ನು ನರಮೇಧ ಎನ್ನಲಾಗುತ್ತದೆ. ಇಂತಹ ಗುರುತರ ಆರೋಪಗಳನ್ನು ಎದುರಿಸುತ್ತಿರುವುದು ಶೇಖ್ ಹಸೀನಾಗೆ ಸಂಕಷ್ಟ ತಂದಿದೆ.
ಹಸೀನಾರ ಪುತ್ರ, ಸಜೀಬ್ ವಾಜಿದ್ ಜಾಯ್ ಅವರು ತನ್ನ ತಾಯಿ ಭಾರತದ ಆಶ್ರಯ ಕೋರಿಲ್ಲ ಎಂದಿದ್ದು, ಅವರು ಬಾಂಗ್ಲಾದೇಶಕ್ಕೆ ಮರಳುವ ಉದ್ದೇಶ ಹೊಂದಿದ್ದಾರೆ ಎಂದಿದ್ದರು. "ನನ್ನ ತಾಯಿ ಯುಕೆ, ಅಮೆರಿಕಾ ಅಥವಾ ಫಿನ್ಲೆಂಡ್‌ಗೆ ಆಶ್ರಯ ಕೋರಿ ಮನವಿ ಸಲ್ಲಿಸಿಲ್ಲ. ಅವರು ಶೀಘ್ರವಾಗಿ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ" ಎಂದು ಸಜೀಬ್ ಹೇಳಿದ್ದಾರೆ.
ಆದರೆ, ಹಸ್ತಾಂತರ ಕಾಯ್ದೆಯ ೨೦೧೬ರ ತಿದ್ದುಪಡಿ ಬಹಳಷ್ಟು ಬದಲಾವಣೆಗಳನ್ನು ತಂದಿತ್ತು. ಅದು ಹಸ್ತಾಂತರ ಪ್ರಕ್ರಿಯೆಯ ಅವಶ್ಯಕತೆಗಳನ್ನು ಕನಿಷ್ಠಗೊಳಿಸಿ, ಮನವಿ ಸಲ್ಲಿಸುವ ದೇಶದ ಯಾವುದಾದರೂ ಸೂಕ್ತ ನ್ಯಾಯಾಲಯದ ವಾರಂಟ್ ಇದ್ದರೆ ಸಾಕು ಎಂಬ ತಿದ್ದುಪಡಿ ತಂದಿತ್ತು. ಪ್ರಸ್ತುತ ಸನ್ನಿವೇಶದಲ್ಲಿ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹಸೀನಾರನ್ನು ಹಸ್ತಾಂತರಗೊಳಿಸುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿದರೆ, ಆಗ ಅದನ್ನು ತಿರಸ್ಕರಿಸಲು ಯಾವುದಾದರೂ ಗಂಭೀರ ಕಾರಣಗಳು ಇಲ್ಲದಿದ್ದರೆ, ಭಾರತ ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ.
ಹಸ್ತಾಂತರ ಕಾಯ್ದೆಯ ೬ನೇ ವಿಧಿ ರಾಜಕೀಯ ಅಪರಾಧಗಳನ್ನು ಹಸ್ತಾಂತರ ಪ್ರಕ್ರಿಯೆಯಿಂದ ಹೊರತಾಗಿಸಿದೆ. ಒಂದು ವೇಳೆ, ಅಪರಾಧ ರಾಜಕೀಯವಾದುದು ಎಂದು ಕಂಡುಬಂದರೆ, ಆಗ ಹಸ್ತಾಂತರ ಮಾಡುವುದನ್ನು ನಿರಾಕರಿಸಬಹುದು. ಆದರೆ, ಇದಕ್ಕೂ ಒಂದಷ್ಟು ಕಟ್ಟುನಿಟ್ಟಿನ ಇತಿಮಿತಿಗಳಿವೆ. ಕೊಲೆ, ಭಯೋತ್ಪಾದನಾ ಸಂಬಂಧಿ ನಡೆ, ಅಪಹರಣಗಳಂತಹ ಅಪರಾಧಗಳನ್ನು ರಾಜಕೀಯ ಅಪರಾಧ ಎಂದು ಪರಿಗಣಿಸುವಂತಿಲ್ಲ. ಹಸೀನಾ ವಿರುದ್ಧದ ಗಂಭೀರ ಆರೋಪಗಳನ್ನು ಗಮನಿಸಿದರೆ, ಭಾರತ ಈ ಆರೋಪಗಳನ್ನು ರಾಜಕೀಯ ಅಪರಾಧ ಎಂದು ಪರಿಗಣಿಸಿ ಹಸ್ತಾಂತರ ಮನವಿಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ಇನ್ನು ಕಾಯ್ದೆಯ ೮ನೇ ವಿಧಿ ಹಸ್ತಾಂತರವನ್ನು ನಿರಾಕರಿಸಲು ಇನ್ನೊಂದು ಕಾರಣ ಒದಗಿಸುತ್ತದೆ. ಒಂದು ವೇಳೆ ಆರೋಪವನ್ನು ನ್ಯಾಯದ ಉದ್ದೇಶದಿಂದ ಮಾಡದೆ, ದುರುದ್ದೇಶ ಇಟ್ಟುಕೊಂಡು ಮಾಡಿದ್ದರೆ, ಅಥವಾ ಅಪರಾಧ ಮಿಲಿಟರಿ ಅಪರಾಧವಾಗಿದ್ದು ದೈನಂದಿನ ಕ್ರಿಮಿನಲ್ ಕಾನೂನಿನಡಿ ಬರದಿದ್ದರೆ, ಆಗ ಹಸ್ತಾಂತರವನ್ನು ನಿರಾಕರಿಸಬಹುದು. ಭಾರತ ಶೇಖ್ ಹಸೀನಾ ವಿರುದ್ಧದ ಆರೋಪಗಳು ಸರಿಯಾದ ಉದ್ದೇಶದ್ದಲ್ಲ ಎಂಬ ಕಾರಣ ನೀಡಿ ಹಸ್ತಾಂತರದ ವಿರುದ್ಧ ವಾದಿಸಲು ಅವಕಾಶವಿದೆ. ಇದಕ್ಕೆ ಶೇಖ್ ಹಸೀನಾ ಭಾರತದ ಜೊತೆಗೆ ಹೊಂದಿರುವ ಘನಿಷ್ಠ ಸಂಬಂಧ ಮತ್ತು ಬಾಂಗ್ಲಾದೇಶದ ಜೊತೆಗೆ ಉತ್ತಮ ಸಂಬಂಧದ ಅನಿವಾರ್ಯತೆಗಳು ಬೆಂಬಲವಾಗಬಹುದು.
ಆದರೆ, ಶೇಖ್ ಹಸೀನಾರ ಹಸ್ತಾಂತರವನ್ನು ನಿರಾಕರಿಸುವುದು ನವದೆಹಲಿ ಮತ್ತು ಢಾಕಾದ ನೂತನ ಸರ್ಕಾರಗಳ ಮಧ್ಯೆ ಅಸಮಾಧಾನ ಸೃಷ್ಟಿಸಬಹುದು. ಇನ್ನೊಂದೆಡೆ, ಹಸೀನಾರನ್ನು ಹಿಂದಕ್ಕೆ ಕಳುಹಿಸಿದರೆ, ಆಗ ಬಾಂಗ್ಲಾದೇಶದ ವಿವಿಧ ರಾಜಕೀಯ ಗುಂಪುಗಳ ಜೊತೆಗಿನ ಭಾರತದ ಸಂಬಂಧ ಹಾನಿಗೊಳಗಾಗಬಹುದು. ಅವರೇನಾದರೂ ಭಾರತ ತನ್ನ ಸುದೀರ್ಘ ಸಹಯೋಗಿಯ ಕೈಹಿಡಿದಿಲ್ಲ ಎಂದು ಭಾವಿಸಿದರೆ ಅದು ಇನ್ನಷ್ಟು ತೊಂದರೆದಾಯಕವಾಗಲಿದೆ. ಭಾರತದ ಪರಿಸ್ಥಿತಿ ಈಗ ಬಹಳ ನಾಜೂಕಿನದಾಗಿದ್ದು, ಒಪ್ಪಂದವನ್ನು ಗೌರವಿಸುವ ಮತ್ತು ರಾಜಕೀಯ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವ ಸವಾಲು ಭಾರತದ ಮುಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಕಾನೂನು ನಿಯಮಾವಳಿಗಳಿಂದಲೂ ರಾಷ್ಟ್ರೀಯ ಹಿತಾಸಕ್ತಿಗಳು ಮುಖ್ಯವಾಗುತ್ತವೆ.
ಕಾನೂನು ಅಂಶಗಳ ಹೊರತಾಗಿಯೂ ಭಾರತ ಶೇಖ್ ಹಸೀನಾರನ್ನು ಹಸ್ತಾಂತರ ಮಾಡಲು ನಿರಾಕರಿಸಿದರೆ, ಅದು ಬಾಂಗ್ಲಾದೇಶದ ನೂತನ ಮಧ್ಯಂತರ ಸರ್ಕಾರಕ್ಕೆ ಮಾಡುವ ಅವಮಾನ ಎಂದು ಪರಿಗಣಿಸುವ ಅಪಾಯಗಳಿವೆ. ಹಾಗಾದರೆ ಉಭಯ ದೇಶಗಳ ಸಂಬಂಧ ಇನ್ನಷ್ಟು ಬಿಗಡಾಯಿಸಬಹುದು. ಇನ್ನೊಂದೆಡೆ, ಭಾರತದ ಸುದೀರ್ಘ ಸಹಯೋಗಿಯಾಗಿದ್ದ ಶೇಖ್ ಹಸೀನಾರನ್ನು ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದರೆ, ಭಾರತ ಮತ್ತು ಬಾಂಗ್ಲಾದೇಶ ಎರಡೂ ಕಡೆಯ ರಾಜಕೀಯ ಗುಂಪುಗಳು ಅಸಮಾಧಾನಗೊಳ್ಳಬಹುದು.
ಹಸೀನಾ ವಿರುದ್ಧದ ಪ್ರಕರಣ ಮುಂದುವರಿದಂತೆ, ಭಾರತ ಜನಾಭಿಪ್ರಾಯ, ರಾಜತಾಂತ್ರಿಕ ಸಂಬಂಧ ಮತ್ತು ಹಸ್ತಾಂತರ ಕಾಯ್ದೆಯಡಿ ತನ್ನ ಕಾನೂನು ಬಾಧ್ಯತೆಗಳನ್ನು ಜಾಗರೂಕವಾಗಿ ನಿಭಾಯಿಸಬೇಕು. ಹಸ್ತಾಂತರ ಮತ್ತು ನಿರಾಕರಣೆಗಳಿಗೆ ಸಂಬಂಧಿಸಿದಂತೆ, ಹಸ್ತಾಂತರ ಒಪ್ಪಂದ ನಿಯಮಗಳನ್ನು ಸ್ಪಷ್ಟವಾಗಿ ನಮೂದಿಸಿದ್ದರೂ, ಭಾರತ ಯಾವುದೇ ನಿರ್ಧಾರ ಕೈಗೊಂಡರೂ ಅದರ ಪರಿಣಾಮಗಳು ಕಾನೂನು ದೃಷ್ಟಿಯನ್ನು ಮೀರಿದ ಪರಿಣಾಮಗಳನ್ನು ಉಂಟುಮಾಡಲಿವೆ.