ಹಸುಗಳ ಕೆಚ್ಚಲು ಕತ್ತರಿಸಿರುವ ಅಮಾನೀಯ ಕೃತ್ಯ ಖಂಡನೀಯ
ಬೆಂಗಳೂರು: ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ದುರುಳರ ಕೃತ್ಯ ಅತ್ಯಂತ ಅಮಾನೀಯವಾಗಿದ್ದು, ಈ ಹೀನ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಗೋಮಾತೆಯನ್ನು ತಾಯಿಯಂತೆ ಪೂಜಿಸುವ ನಮಗೆಲ್ಲ ಈ ಕೃತ್ಯ ಅತ್ಯಂತ ಘಾಸಿಯುಂಟು ಮಾಡಿದೆ. ಸುಗ್ಗಿಯ ಹಬ್ಬ ಮಕರ ಸಂಕ್ರಾತಿಯ ಸಂದರ್ಭದಲ್ಲಿ ರಾಜ್ಯದ ರಾಜ್ಯಧಾನಿಯಲ್ಲಿಯೇ ಇಂತಹ ಅಮಾನವೀಯ ಕೆಲಸ ಮಾಡಿರುವ ಪುಂಡರಿಗೆ ಈ ಸರ್ಕಾರದಲ್ಲಿ ಯಾವುದೇ ಭಯ ಇಲ್ಲದಂತೆ ಕಾಣಿಸುತ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಗೋವುಗಳಿಗೆ ಸರಿಯಾದ ರಕ್ಷಣೆ ನೀಡದಿರುವುದು, ಗೋಶಾಲೆಗಳಿಗೆ ಸರಿಯಾದ ಅನುದಾನ ನೀಡದೇ ನಿರ್ಲಕ್ಷ್ಯ ಮಾಡಿರುವುದರ ಪರಿಣಾಮ, ಇಂತಹ ಹೃದಯ ಹೀನ ಕೃತ್ಯಗಳು ನಡೆಯಲು ಪ್ರೇರಣೆ ನೀಡಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೂಕ ಪ್ರಾಣಿಗಳ ಮೇಲೆ ಮಾಡಿರುವ ಇಂತಹ ಕೃತ್ಯವನ್ನು ಅಂತಃಕರಣ ಇರುವವರು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಈ ಸರ್ಕಾರಕ್ಕೆ ಗೋಮಾತೆಯ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ಇಂತಹ ಹೇಯ ಕೃತ್ಯ ಮಾಡಿರುವ ಪುಂಡರನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗಾಯಗೊಂಡಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.