ಹಾಲಿನ ದರ ಏರಿಕೆಗೆ ತಾತ್ಕಾಲಿಕ ಕಡಿವಾಣ
ಬೆಂಗಳೂರು: ಹಾಲಿನ ದರ ಏರಿಕೆ ಭೀತಿಯಲ್ಲಿದ್ದ ಜನತೆಗೆ ಸದ್ಯಕ್ಕೆ ಆ ಚಿಂತೆ ದೂರವಾಗುವ ಸಾಧ್ಯತೆ ಇದೆ. ಸರ್ಕಾರ ತಾತ್ಕಾಲಿಕವಾಗಿ ಕಡಿವಾಣ ಹಾಕುವ ಸಾಧ್ಯತೆ ಇದ್ದು, ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಂತಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಸಮಾವೇಶವೊಂದರಲ್ಲಿ ಮುಖ್ಯಮಂತ್ರಿಗಳೇ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನು ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು. ಆ ಬೆನ್ನಲ್ಲೆ ಕೆಎಂಎಫ್ ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಂತಿದ್ದು, ಈ ವರ್ಷ ಬಹುತೇಕ ಈ ಬಗ್ಗೆ ಯೋಚನೆ ಬೇಡ ಎಂಬ ತೀರ್ಮಾನ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದೇ ವರ್ಷ ಈಗಾಗಲೇ ಹಾಲಿನ ಪ್ರಮಾಣ ಹೆಚ್ಚಿಸಿ ದರವನ್ನೂ ಎರಡು ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ದರ ಏರಿಕೆ ಮಾಡಿದಲ್ಲಿ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಮನಗಂಡಿರುವ ಸರ್ಕಾರ ತಾತ್ಕಾಲಿಕವಾಗಿ ದರ ಏರಿಕೆಯಿಂದ ಹಿಂದೆ ಸರಿದಿದೆ.