ಹಿಂದಿ ಬೆಲ್ಟ್‌ನಲ್ಲಿ ಹಿಂದುತ್ವದ ಅಲೆ
ಶೇಕಡಾವಾರು ಫಲಿತಾಂಶ
ಛತ್ತೀಸಗಢ ಬಿಜೆಪಿ ಶೇ. ೪೬.೧೯ ಕಾಂಗ್ರೆಸ್ ೪೨.೨೩
ಮಧ್ಯಪ್ರದೇಶ ಬಿಜೆಪಿ ಶೇ. ೪೮.೫೫ ಕಾಂಗ್ರೆಸ್ ೪೦.೪೦
ರಾಜಸ್ಥಾನ ಬಿಜೆಪಿ ಶೇ. ೪೧.೬೯ ಕಾಂಗ್ರೆಸ್ ೩೯.೫೩
ತೆಲಂಗಾಣ ಬಿಆರ್‌ಎಸ್ ಶೇ. ೧೩.೯೦ ಕಾಂಗ್ರೆಸ್ ೩೯.೪೦
ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ನೋಡಿದರೆ ಹಿಂದಿ ಬೆಲ್ಟ್‌ನಲ್ಲಿ ಹಿಂದುತ್ವದ ಅಲೆ ಎದ್ದ ಹಾಗೆ ಕಾಣುತ್ತಿದೆ. ಇದರಿಂದ ಒಕ್ಕೂಟ ವ್ಯವಸ್ಥೆ ಸೇರಿದಂತೆ ಜಾತ್ಯತೀತವಾದ, ಮಾನವಹಕ್ಕುಗಳ ರಕ್ಷಣೆ, ಧಾರ್ಮಿಕ ನಂಬಿಕೆ, ಸಾಂಸ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿಬರಬಹುದು. ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ಪ್ರಜಾಪ್ರಭುತ್ವದ ಆಧಾರವಾಗಿರುವುದನ್ನು ಉಳಿಸಿಕೊಳ್ಳುವುದು ಪ್ರಮುಖವಾಗಬೇಕು. ೨೦೧೮ರಲ್ಲಿ ಕಾಂಗ್ರೆಸ್‌ಗಳಿಸಿದ್ದ ಮತಗಳು ಹಾಗೆ ಇದೆ. ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಎರಡೂ ಪಕ್ಷಗಳ ನಡುವೆ ಮತಗಳ ಅಂತರ ಬಹಳ ಕಡಿಮೆ. ಛತ್ತೀಸಗಢದಲ್ಲಿ ಮತಗಳ ಅಂತರ ಶೇ.೪.೦೪, ರಾಜಸ್ಥಾನದಲ್ಲಿ ಶೇ.೨.೧೬. ಚುನಾವಣೆ ವಿಷಯದಲ್ಲಿ ಜನರ ಚಿಂತನೆ ಈಗ ಬದಲಾಗಿದೆ. ಬಹಿರಂಗ ಸಭೆ ಮತ್ತು ರ‍್ಯಾಲಿಗಳಿಗೆ ಈಗ ಜನ ಬೆಲೆ ಕೊಡುವುದಿಲ್ಲ. ಚುನಾವಣೆ ಪ್ರಣಾಳಿಕೆಯೂ ಪ್ರಮುಖವಾಗುತ್ತಿಲ್ಲ. ಕೊನೆಗಳಿಗೆಯಲ್ಲಿ ನಡೆಯುವ ಕಸರತ್ತುಗಳೇ ಕೆಲಸ ಮಾಡುತ್ತಿವೆ. ಪ್ರತಿಯೊಂದು ಮತಗಟ್ಟೆ ನಿರ್ವಹಣೆ, ಅದೃಶ್ಯ ಮತದಾರರನ್ನು ಕರೆದು ತರುವುದು, ಹಣ ಮತ್ತು ಮಾನವ ಸಂಪನ್ಮೂಲ ಕ್ರೋಡೀಕರಣ ಪ್ರಮುಖವಾಗುತ್ತದೆ. ಇದರಲ್ಲಿ ಬಿಜೆಪಿ ಗೆದ್ದಿದೆ.
ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಳ್ಳಲು ಅಸಡ್ಡೆ ಕಾರಣವೋ ಬಿಜೆಪಿ ಬುದ್ಧಿವಂತಿಕೆಯೋ ತಿಳಿಯದು. ಛತ್ತೀಸಗಢದಲ್ಲಿ ಕಾಂಗ್ರೆಸ್ ಬರುತ್ತೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅದು ತಲೆಕೆಳಗಾಯಿತು. ಬಿಜೆಪಿ ೫೪ ಸೀಟುಗಳಲ್ಲಿ ೩೫ ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್‌ಗೆ ದಲಿತರ ಮತಗಳು ಸೇರಿದಂತೆ ಎಲ್ಲ ಸಮುದಾಯದ ಮತಗಳು ಇಳಿಮುಖಗೊಂಡಿದೆ. ೧೪ ಪರಿಶಿಷ್ಟ ಪಂಗಡದ ಸೀಟುಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಛತ್ತೀಸಗಢದಲ್ಲಿ ಪರಿಸ್ಥಿತಿ ಹೀಗಾದರೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕತೆಯೇ ಬೇರೆ. ರಾಜಸ್ಥಾನದಲ್ಲಿ ಗೆಹಲೋತ್ ಉತ್ತಮ ಕೆಲಸ ಮಾಡಿದ್ದರು. ಆಡಳಿತ ವಿರೋಧಿ ಅಲೆಯನ್ನು ಎದುರಿಸುವ ಶಕ್ತಿ ಇತ್ತು. ಆದರೆ ಗೆಹಲೋತ್ ಸಂಪುಟದ ೧೭ ಸಚಿವರು, ೬೩ ಶಾಸಕರು ಸೋತರು. ಇದು ಜನರಿಗಿದ್ದ ಆಕ್ರೋಶವನ್ನು ಬಿಂಬಿಸುತ್ತದೆ. ಯಾವ ಸಮೀಕ್ಷೆಗಳು ಈ ವಿಷಯವನ್ನು ಹೇಳಿರಲಿಲ್ಲ. ರಾಜಸ್ಥಾನದವರು ಪ್ರತಿ ೫ ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವುದು ರೂಢಿ. ಅದರಿಂದ ಆಗಿರಬಹುದು ಎಂದು ತಿಳಿಯಲಾಗಿದೆ.
ಮಧ್ಯಪ್ರದೇಶದಲ್ಲಿ ಶಿವರಾಜ ಸಿಂಗ್ ಚೌಹಾನ್ ಸಾಕಷ್ಟು ಕೆಲಸ ಮಾಡಿದ್ದರೂ ಭ್ರಷ್ಟಾಚಾರದ ಆರೋಪಗಳಿದ್ದವು. ಆದರೂ ಅವರು ಕೆಳವರ್ಗದವರಿಗೆ ನೇರ ಹಣ ವರ್ಗಾವಣೆ ಮಾಡಿದ್ದು ಕೆಲಸ ಮಾಡಿತು. ಅದರಲ್ಲೂ ಮಹಿಳಾ ಫಲಾನುಭವಿಗಳು ಕೃತಜ್ಞತೆ ಸಲ್ಲಿಸಿದರು. ಲಾಡ್ಲಿ ಬೆಹನ್ ಯೋಜನೆ ಕೈಹಿಡಿಯಿತು.
ಮಧ್ಯಪ್ರದೇಶ ಹಿಂದುತ್ವದ ಪ್ರಯೋಗಶಾಲೆಯಾಯಿತು. ಆರ್‌ಎಸ್‌ಎಸ್ ಮತ್ತು ಇತರ ಸಂಘಪರಿವಾರ ಆಳವಾಗಿ ಬೇರೂರಿದ್ದು, ಅದನ್ನು ಉರುಳಿಸಬೇಕು ಎಂದರೆ ಬೃಹತ್ ಪ್ರಮಾಣದ ಸಂಘಟನೆ ಬೇಕು.
ಕಾಂಗ್ರೆಸ್ ಸಂಘಟನೆಯಿಂದ ಅದು ಸಾಧ್ಯವಿಲ್ಲ. ಬಿಜೆಪಿ ಕೇಂದ್ರ ಸಚಿವರು ಮತ್ತು ಸಂಸದರನ್ನು ಚೆನ್ನಾಗಿ ಬಳಸಿಕೊಂಡಿತು. ಭಾರಿ ಬಂಡವಾಳ ಹೂಡಿಕೆ, ಸಂಪನ್ಮೂಲ ಕ್ರೋಡೀಕರಣ ಫಲ ನೀಡಿತು. ಬಿಜೆಪಿ ೧೬೩ ಸೀಟುಗಳಿಸಿತು.
ಕಾಂಗ್ರೆಸ್ ೬೬ ರಲ್ಲೇ ನಿಂತಿತು. ತೆಲಂಗಾಣದಲ್ಲಿ ಕೆಸಿಆರ್ ವಿರುದ್ಧ ಗ್ರಾಮೀಣ ಭಾಗದಲ್ಲಿ ಅಲೆ ಎದ್ದಿದ್ದು ಆಶ್ಚರ್ಯ. ಪ್ರತ್ಯೇಕ ರಾಜ್ಯವಾಗಲು ಕೆಸಿಆರ್ ಹೋರಾಟ ನಡೆಸಿದವರು. `ರೈತಬಂಧು' ಯೋಜನೆ ಜನಪ್ರಿಯವಾಗಿತ್ತು. ರೈತರಿಗೆ ನೇರ ಆರ್ಥಿಕ ನೆರವು ಯಶಸ್ಸು ಕಂಡಿತ್ತು. ಆಡಳಿತ ಕುಟುಂಬದ ಆಸ್ತಿಯಾಯಿತು.
ರೆಸಾರ್ಟ್ ಸಿಎಂ ಜನ ಕರೆಯಲು ಆರಂಭಿಸಿದರು. ನಿರುದ್ಯೋಗ ಜನಪ್ರಿಯತೆಗೆ ಮಸಿ ಬಳಿಯಿತು. ಆಡಳಿತ ವಿರೋಧ ಅಲೆ ಕಾಂಗ್ರೆಸ್‌ಗೆ ವರವಾಯಿತು. ರೇವಂತ ರೆಡ್ಡಿ ಇದನ್ನು ಬಳಸಿಕೊಂಡರು.