ಹಿಂದುಳಿದ ರಾಜ್ಯಕ್ಕೆ ನೆರವು ಪ್ರಗತಿಪರ ರಾಜ್ಯಕ್ಕೆ ಕತ್ತರಿ
ಕೇಂದ್ರ ಸರ್ಕಾರ ಹಿಂದುಳಿದ ರಾಜ್ಯಗಳಿಗೆ ನೆರವು ನೀಡುವುದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ. ಆದರೆ ಅದರ ಹೆಸರಿನಲ್ಲಿ ಪ್ರಗತಿಯ ಹಾದಿಯಲ್ಲಿರುವ ರಾಜ್ಯಗಳಿಗೆ ನೀಡುತ್ತಿರುವ ಅನುದಾನವನ್ನು ಕಡಿತಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳು ಹಣಕಾಸು ಆಯೋಗಕ್ಕೆ ಹಿಂದಿನಿಂದಲೂ ಹೇಳುತ್ತ ಬಂದಿದೆ. ಅದನ್ನೇ ಈಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಲವು ರಾಜ್ಯಗಳ ಒಕ್ಕೊರಲ ಕೂಗಿಗೆ ಹಣಕಾಸು ಆಯೋಗ ಈಗಲಾದರೂ ಗಮನ ಹರಿಸುವುದು ಒಳಿತು.
ಎಲ್ಲ ರಾಜ್ಯಗಳೂ ಆರ್ಥಿಕವಾಗಿ ಸಬಲಗೊಳ್ಳಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಕೇಂದ್ರ ಸರ್ಕಾರ ಹಿಂದುಳಿದ ರಾಜ್ಯಗಳ ಹೆಸರಿನಲ್ಲಿ ನಮಗೆ ಕೊಡುತ್ತಿರುವ ಅನುದಾನವನ್ನು ಕಡಿತಗೊಳಿಸುವುದು ಸರಿಯಲ್ಲ. ಹಿಂದುಳಿದ ರಾಜ್ಯಗಳ ಪ್ರಗತಿಗಾಗಿ ಪ್ರತ್ಯೇಕ ನಿಧಿ ಸ್ಥಾಪಿಸಿ ನೆರವು ನೀಡುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಕರ್ನಾಟಕದಂಥ ರಾಜ್ಯಗಳು ಹೆಚ್ಚು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡಿದರೂ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲು ಸಿಗುತ್ತಿಲ್ಲ. ತೆರಿಗೆ ಸಂಗ್ರಹದಲ್ಲಿ ಶೇಕಡ ೬೦ ರಷ್ಟು ರಾಜ್ಯದ ಪಾಲಾಗಬೇಕು. ರಾಜ್ಯ ತೆರಿಗೆ ರೂಪದಲ್ಲಿ ೧ ರೂ. ಸಂಗ್ರಹಿಸಿ ಕೇಂದ್ರಕ್ಕೆ ನೀಡಿದರೆ ಕೇವಲ ೧೫ ಪೈಸೆ ಮಾತ್ರ ಅನುದಾನದ ರೂಪದಲ್ಲಿ ಬರುತ್ತಿದೆ. ೧೫ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡುವ ಪಾಲು ೪.೭೧೩ ಯಿಂದ ೩.೬೪೭ಗೆ ಇಳಿಯಿತು. ಇದರಿಂದಾಗಿ ೨೦೨೧-೨೬ರ ೫ ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ರೂ.೬೮,೨೭೫ ಕೋಟಿ ನಷ್ಟ ಉಂಟಾಗಿದೆ. ಕರ್ನಾಟಕಕ್ಕೆ ದೊರೆತ ಪಾಲಿನಲ್ಲಿ ಉಂಟಾದ ಇಷ್ಟು ದೊಡ್ಡ ಮೊತ್ತದ ಕಡಿತದ ಬಗ್ಗೆ ಹಣಕಾಸು ಆಯೋಗಕ್ಕೆ ಅರಿವಿದ್ದು, ರಾಜ್ಯಕ್ಕೆ ರೂ.೧೧೪೯೫ ಕೋಟಿ ನಿರ್ದಿಷ್ಟ ಅನುದಾನ ಒದಗಿಸಲು ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಆಯೋಗದ ಈ ಶಿಫಾರಸ್ಸನ್ನು ಒಪ್ಪಿಕೊಂಡಿಲ್ಲ. ೧೫ನೇ ಹಣಕಾಸು ಆಯೋಗದ ಅವಧಿಯಲ್ಲಿ ಇತರ ರಾಜ್ಯಗಳಿಗೆ ಪ್ರತಿ ವರ್ಷ ರೂ.೩೫ ಸಾವಿರದಿಂದ ೪೦ ಸಾವಿರ ಕೋಟಿಯಷ್ಟು ವರ್ಗಾವಣೆಯಾಗಿದೆ. ಈ ರೀತಿಯ ಅಸಮತೋಲನದಿಂದ ಕರ್ನಾಟಕ ಹಾಗೂ ಈ ರೀತಿಯ ರಾಜ್ಯಗಳ ಮೇಲೆ ಅನಗತ್ಯ ದಂಡ ವಿಧಿಸಿದಂತಾಗಿದೆ. ಸೆಸ್ ಮತ್ತು ಸರ್ಚಾರ್ಜ್‌ಗಳಲ್ಲಿ ಸಂಗ್ರಹವಾಗುವ ಹಣವನ್ನು ಕೇಂದ್ರ ಸರ್ಕಾರ ರಾಜ್ಯಗಳ ನಡುವೆ ಹಂಚಿಕೊಳ್ಳುತ್ತಿಲ್ಲ. ಇದರಿಂದ ಕರ್ನಾಟಕಕ್ಕೆ ೨೦೧೭-೧೮ ರಿಂದ ೨೦೨೪-೨೫ ನೇ ಅವಧಿಯಲ್ಲಿ ರೂ.೫೩,೩೫೯ಕೋಟಿ ನಷ್ಟ ಉಂಟಾಗಿದೆ. ಕೇಂದ್ರಕ್ಕೆ ಸಾಲ ತೆಗೆದುಕೊಳ್ಳಲು ಎಲ್ಲ ಅವಕಾಶಗಳಿವೆ. ರಾಜ್ಯಗಳಿಗೆ ಸಾಲದ ಮೇಲೂ ಮಿತಿ ಇದೆ. ಆದರೂ ಕರ್ನಾಟಕ ಬಂಡವಾಳ ವೆಚ್ಚದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯಗಳು ಗಳಿಸುವ ಸಂಪನ್ಮೂಲದ ಒಂದು ದೊಡ್ಡ ಪಾಲು ಅವುಗಳ ನಡುವೆಯೇ ಹಂಚಿಕೆಯಾಗಬೇಕು. ಕರ್ನಾಟಕ ಕೂಡ ಪ್ರಾದೇಶಿಕ ಅಸಮಾನತೆಯನ್ನು ಎದುರಿಸುತ್ತಿವೆ. ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕೆ ೨೫ ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇದಕ್ಕೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ೧೬ನೇ ಹಣಕಾಸು ಆಯೋಗ ಹೊಂದಾಣಿಕೆ ಅನುದಾನ ಒದಗಿಸಬೇಕು ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟ ವಲಯದಲ್ಲಿ ಪರಿಣಾಮಕಾರಿಯಾಗಿ ವಿಪತ್ತು ನಿರ್ವಹಣೆ ಮತ್ತು ಪುನರ್ ವಸತಿಯನ್ನು ಖಾತ್ರಿಪಡಿಸಲು ೧೦ಸಾವಿರ ಕೋಟಿ ರೂ. ಬೇಕು. ಅನುದಾನ ನೀಡುವಾಗ ರಾಜ್ಯದ ದಕ್ಷತೆ ಮತ್ತು ನಿರ್ವಹಣೆಯನ್ನು ಪರಿಗಣಿಸಬೇಕು. ಕೇಂದ್ರ ಸರ್ಕಾರ ತನ್ನಲ್ಲಿ ಸಂಗ್ರಹವಾದ ಹಣದಲ್ಲಿ ಕನಿಷ್ಠ ಶೇ.೬೦ರಷ್ಟು ಪಾಲನ್ನು ಸಂಬಂಧಿಸಿದ ರಾಜ್ಯಗಳಿಗೆ ನೀಡಬೇಕು. ಸೆಸ್ ಮತ್ತು ಸರ್ಚಾರ್ಜ್ ಒಟ್ಟು ತೆರಿಗೆ ಆದಾಯದ ಶೇ.೫ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಾಗುವ ಯಾವುದೇ ಮೊತ್ತವನ್ನು ಹಂಚಿಕೊಳ್ಳುವ ಬಾಬ್ತಿಗೆ ಪರಿಗಣಿಸಬೇಕು.
ಮೊದಲಿನಿಂದಲೂ ಹಣಕಾಸು ಹಂಚಿಕೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷ ನಡೆಯುತ್ತಿದೆ. ಹಣಕಾಸು ವಿಷಯದಲ್ಲಿ ರಾಜಕೀಯ ನುಸುಳಬಾರದು ಎಂದು ಹೇಳಿದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಪ್ರತಿಪಕ್ಷಗಳನ್ನು ತುಳಿಯಲು ಅನುದಾನವನ್ನು ಅಸ್ತçವಾಗಿ ಬಳಸಿಕೊಳ್ಳುತ್ತವೆ. ಈ ಪರಿಪಾಠ ಹೋಗಬೇಕೆಂದರೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣ ಹಂಚಿಕೆ ವಿಚಾರದಲ್ಲಿ ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ರಚಿಸಬೇಕು. ಅದು ಕಡ್ಡಾಯವಾಗಿರಬೇಕೇ ಯಾರ ವ್ಯಕ್ತಿ, ಪಕ್ಷದ ಮರ್ಜಿಗೆ ಒಳಪಡಬಾರದು. ಚುನಾವಣೆ ಮುಕ್ತಾಯಗೊಂಡ ಮೇಲೆ ಅಧಿಕಾರಕ್ಕೆ ಬಂದ ಪಕ್ಷ ಎಲ್ಲ ಮತದಾರರನ್ನು ಸಮಾನವಾಗಿ ಕಾಣಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಅಧಿಕಾರಕ್ಕೆ ಬಂದ ಪಕ್ಷ ಹಲವು ಕಾರಣಗಳನ್ನು ಹುಡುಕಿ ತಮ್ಮ ಆಡಳಿತದಲ್ಲಿರದ ರಾಜ್ಯಗಳಿಗೆ ಅನುದಾನದ ಕೊರತೆ ಉಂಟಾಗುವಂತೆ ಮಾಡುತ್ತದೆ. ಹಣಕಾಸು ಆಯೋಗ ಸಂವಿಧಾನಬದ್ಧವಾಗಿ ರಚಿತಗೊಂಡ ಸ್ವಾಯತ್ತ ಸಂಸ್ಥೆ. ಅದು ಹಣಕಾಸು ಹಂಚಿಕೆಯಲ್ಲಿ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು. ಆಯೋಗ ನೀಡಿದ ವರದಿಯನ್ನು ಕೇಂದ್ರ ಪಾಲಿಸಬೇಕು. ಆದರೂ ಕೆಲವು ಬಾರಿ ಕೇಂದ್ರ ಹಲವು ನೆಪಗಳನ್ನು ಕೊಟ್ಟು ಅನುದಾನ ಹಂಚಿಕೆಯಲ್ಲಿ ವಿಳಂಬ ಮಾಡುವುದುಂಟು. ಈಗ ಪರೋಕ್ಷವಾಗಿ ಇದು ನಡೆಯುತ್ತಿದೆ. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಇದರ ಬಗ್ಗೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಆಯೋಗಕ್ಕೆ ಎಲ್ಲ ವಿವರ ನೀಡಿದೆ. ಆಯೋಗ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದರ ವರದಿಯಲ್ಲಿ ಈ ಚಿಂತನೆ ಮೂರ್ತ ರೂಪ ಪಡೆಯಬೇಕಿದೆ.