ಹಿಂದೂಗಳ ಸಂಖ್ಯೆ ಇಳಿಮುಖ
೧೯೫೦ರಿಂದ ೨೦೧೫ರ ನಡುವೆ ಹಿಂದೂಗಳು ಹಾಗೂ ಮುಸ್ಲಿಮರ ಜನಸಂಖ್ಯೆಯ ಪ್ರಮಾಣದ ಏರುಮುಖ ಹಾಗೂ ಇಳಿಮುಖವಾಗುತ್ತಿರುವ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಈಗ ವಿವಾದದ ವಸ್ತುವಾಗಿ ತಿರುಗಿದೆ. ಪ್ರಧಾನಿ ಆರ್ಥಿಕ ಸಲಹಾ ಸಮಿತಿಯ ಅಧಿಕಾರಿಗಳು ಸಿದ್ಧಪಡಿಸಿರುವ ಈ ವರದಿಯ ಪ್ರಕಾರ ಮೇಲೆ ಪ್ರಸ್ತಾಪಿಸಿರುವ ಅವಧಿಯಲ್ಲಿ ಹಿಂದೂಗಳ ಪ್ರಮಾಣ ಶೇ. ೭.೮ರಷ್ಟು ಇಳಿಕೆಯಾಗಿದೆ ಎಂಬ ಅಂಕಿ ಅಂಶ ನಾನಾ ರೀತಿಯ ಲೆಕ್ಕಾಚಾರಗಳಿಗೆ ಗ್ರಾಸವಾಗಿರುವ ಜೊತೆಗೆ ಇಂತಹ ವರದಿಯ ಹಿಂದಿರುವ ಒತ್ತಾಸೆ ಹಾಗೂ ಒತ್ತಾಯಗಳ ಮೂಲದ ಬಗ್ಗೆ ಪ್ರಶ್ನೆಗಳು ಪುಂಖಾನುಪುಂಖವಾಗಿ ಭುಗಿಲೇಳುತ್ತಿವೆ. ಸಾರ್ವಜನಿಕ ವಲಯದಲ್ಲಿ ಈ ವರದಿ ತೀವ್ರ ಚರ್ಚೆಗೆ ಗುರಿಯಾದ ಸಂದರ್ಭದಲ್ಲಿಯೇ ಪ್ರಧಾನಿ ಕಾರ್ಯಾಲಯ ಈ ವರದಿಗೆ ಲೇಖಕರೇ ಹೊಣೆ. ಇದರ ಒಳಗೆ ಅಡಕವಾಗಿರುವ ವಿವರಗಳು ದತ್ತಾಂಶಗಳು ಲೇಖಕರಿಗೆ ಸಂಬಂಧಿಸಿದ್ದು ಎಂದು ಹೇಳುವ ಮೂಲಕ ಸರ್ಕಾರ ವಿವಾದದಿಂದ ದೂರ ಉಳಿಯಲು ಯತ್ನಿಸಿದೆ. ಚುನಾವಣೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವರದಿಯನ್ನು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ರಾಜಕಾರಣವನ್ನು ಗುರುತಿಸಿರುವ ಬೆಳವಣಿಗೆಗಳು ಜರುಗಿವೆ. ಒಟ್ಟಾರೆ ಜೇನುಗೂಡಿಗೆ ಕಲ್ಲು ಎಸೆದಿರುವ ಪರಿಸ್ಥಿತಿ ಈಗ ಸಾರ್ವಜನಿಕ ವಲಯದಲ್ಲಿ ತಲೆದೋರಿದೆ.
ವರದಿಯಲ್ಲಿರುವ ಮುಖ್ಯಾಂಶಗಳಲ್ಲಿ ಸತ್ಯವೋ ಮಿಥ್ಯವೋ ಎಂಬುದು ಇನ್ನು ಖಚಿತವಾಗಬೇಕು. ಆದರೆ, ಇದಕ್ಕೂ ಮಿಗಿಲಾಗಿ ಇದೇ ಸತ್ಯ ಎಂದು ವಾದಿಸುತ್ತಿರುವ ಹಲವರ ಹಠಮಾರಿ ಧೋರಣೆಯಿಂದ ಏಕಮುಖ ಚರ್ಚೆ ನಡೆಯಲು ಕಾರಣವಾಗಿದೆ. ಹಿಂದೂಗಳ ಜನಸಂಖ್ಯೆ ಇಳಿಮುಖವಾಗಿದೆ ಎಂಬುದಕ್ಕೆ ಖಚಿತವಾದ ಕಾರಣವಾಗಲಿ ಅಥವಾ ವಿವರಣೆಯಾಗಲಿ ಕಂಡುಬರುತ್ತಿಲ್ಲ. ಹಾಗೆಯೇ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವ ಬಗ್ಗೆಯೂ ಖಚಿತತೆ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ನಾಜೂಕಾಗಿರುವ ಪರಿಸ್ಥಿತಿಯನ್ನು ಬಳಸಿಕೊಂಡು ಮತಪೆಟ್ಟಿಗೆಯನ್ನು ಸೂರೆ ಹೊಡೆಯುವ ಸನ್ನಾಹ ಇದರ ಹಿಂದೆ ಇದೆ ಎಂಬುದನ್ನು ನಿರಾಕರಿಸುವಂತಿಲ್ಲ. ಅದೇನೇ ಇರಲಿ, ಇಷ್ಟೆಲ್ಲಾ ಅವಾಂತರ ಭುಗಿಲೆದ್ದಿದ್ದರೂ ಚುನಾವಣಾ ಆಯೋಗ ಈ ಬೆಳವಣಿಗೆಯ ಬಗ್ಗೆ ಮೌನಕ್ಕೆ ಶರಣಾಗಿರುವುದು ಇನ್ನಷ್ಟು ಗುಮಾನಿ ಸೃಷ್ಟಿಯಾಗಲು ಕಾರಣವಾಗಿದೆ.
ವೈವಿಧ್ಯತೆಗೆ ಹೆಸರಾದ ಭಾರತದಲ್ಲಿ ಹಲವು ಧರ್ಮಗಳ ಜನ ಸೌಹಾರ್ದತೆಯಿಂದ ಬಾಳುತ್ತಿರುವುದು ಶತಮಾನದಿಂದಲೂ ನಡೆದುಕೊಂಡು ಬಂದಿದೆ. ಹಲವಾರು ಕಾರಣಗಳಿಂದ ಜರುಗುವ ಘರ್ಷಣೆಗಳಿಗೆ ಧರ್ಮಗಳ ಲೇಪ ಹಚ್ಚುವ ಸುಲಭ ಮಾರ್ಗವನ್ನು ಕೆಲವರು ಕಂಡುಕೊಂಡಿರುವುದು ಧಾರ್ಮಿಕ ಘರ್ಷಣೆ ಎಂಬ ವಿಶ್ಲೇಷಣೆಗೆ ಆಧಾರವಾಗಿರಬಹುದು. ವಾಸ್ತವವಾಗಿ ಅಂತಹ ಗಂಭೀರ ಸ್ವರೂಪದ ಧಾರ್ಮಿಕ ಸಂಘರ್ಷದ ವಾತಾವರಣ ಕಂಡುಬಂದಿಲ್ಲ. ಬಾಬ್ರಿ ಮಸೀದಿ ನೆಲಸಮದ ನಂತರ ಧರ್ಮಸಹಿಷ್ಣುತೆಯ ವಾತಾವರಣದಲ್ಲಿ ಬದಲಾಗಿ ಸಂಘರ್ಷದ ಕಿಡಿ ಕಂಡಿರಬಹುದು. ಅದನ್ನು ರಾಜಕೀಯ ಪಕ್ಷಗಳು ಅನುಕೂಲಕ್ಕಾಗಿ ಬಳಸಿಕೊಂಡಿರಬಹುದು. ಆದರೆ, ಇದೇ ಕೋಮು ಸಂಘರ್ಷ ಎಂದು ಹೇಳಲು ಸಾಧ್ಯವಿಲ್ಲ. ಈಗ ಪ್ರಕಟವಾಗಿರುವ ವರದಿಯಿಂದ ಹಿಂದೂ ಹಾಗೂ ಮುಸ್ಲಿಮರ ನಡುವೆ ಮತ್ತಷ್ಟು ಹಗೆತನ ಹೆಚ್ಚಾಗುವ ಅಪಾಯವಿದೆ.
ದೇಶವೆಂಬುದು ಬಹಳ ಸೂಕ್ಷ್ಮವಾಗಿರುವ ಒಂದು ಪ್ರದೇಶ. ಎಲ್ಲಾ ಧರ್ಮ ಭಾಷೆ ಬಣ್ಣ ಹಾಗೂ ವಿಚಾರಗಳ ಆರಾಧಕರಿಗೆ ನೆಲೆವೀಡಾಗಿದ್ದರಷ್ಟೆ ಅದಕ್ಕೆ ದೇಶದ ಸ್ವರೂಪ. ಭಾರತವೆಂಬುದು ವಿದ್ಯುಕ್ತವಾದ ಒಂದು ಗಣರಾಜ್ಯ. ರಾಜ್ಯಗಳ ವೈವಿಧ್ಯತೆಯನ್ನು ಒಪ್ಪಿಕೊಂಡು ಕೇಂದ್ರದ ಸಾಂಗತ್ಯದಲ್ಲಿ ರೂಪುಗೊಳ್ಳುವ ಒಕ್ಕೂಟ ವ್ಯವಸ್ಥೆಯಲ್ಲಿ ಸಕಲ ಜ್ಞಾನಗಳು, ಸಕಲ ಆಚಾರ ವಿಚಾರಗಳ ಜನರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ. ಆದರೆ, ಇನ್ನೊಬ್ಬರ ಮೇಲೆ ದ್ವೇಷ ಬಿತ್ತುವ ಭಾವನೆಗಳಿಗೆ ಅವಕಾಶವಿಲ್ಲ. ದೇಶ ಕಟ್ಟುವ ಜನರಿಗೆ ಮುಕ್ತ ಅವಕಾಶ. ಕಟ್ಟುವ ಹೆಸರಿನಲ್ಲಿ ದ್ವೇಷ ಬಿತ್ತುವವರಿಗೆ ಉಳಿಗಾಲವಿಲ್ಲದಂತೆ ನೋಡಿಕೊಳ್ಳಲು ಕಾನೂನು ವ್ಯವಸ್ಥೆ ಇದೆ. ಹೀಗಿರುವಾಗ ಶಾಂತಿ ಹಾಗೂ ನೆಮ್ಮದಿಯ ವಾತಾವರಣದಲ್ಲಿ ಬದುಕುತ್ತಿರುವ ಭಾರತೀಯ ಸಮುದಾಯದ ಸಾಗರದಲ್ಲಿ ಹುಳಿ ಹಿಂಡಲು ಪ್ರಯತ್ನಿಸಿರುವುದು ನಿಜವೇ ಆಗಿದ್ದರೆ ಅದಕ್ಕೆ ಕ್ಷಮೆ ಇಲ್ಲ. ಧರ್ಮದ ಜನರ ಸಂಖ್ಯೆ ಇಳಿಮುಖ ಹಾಗೂ ಏರುಮುಖ ಎಂಬ ತಥಾಕಥಿತಾ ವರದಿಗಳನ್ನು ಪ್ರಕಟಿಸುವುದು ನಿಜಕ್ಕೂ ಜನದ್ರೋಹಿ ಅಷ್ಟೇ ಅಲ್ಲ ಜೀವದ್ರೋಹಿ ಕೆಲಸವೂ ಹೌದು. ಚುನಾವಣೆಯ ಸಂದರ್ಭದಲ್ಲಿ ಇಂತಹ ಅನಗತ್ಯ ವಿವಾದಗಳು ಬೇಕಿತ್ತೇ ಎಂಬುದು ಮೂಲಭೂತವಾದ ಒಂದು ಪ್ರಶ್ನೆ.