For the best experience, open
https://m.samyuktakarnataka.in
on your mobile browser.

ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ

09:56 PM Oct 03, 2024 IST | Samyukta Karnataka
ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ

ಮಂಗಳೂರು: ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್‌ ಅಭಿಯಾನ ಕೈಗೆತ್ತಿಕೊಂಡಿದ್ದು, ಅ. 6ರಂದು ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹದೊಂದಿಗೆ ಅಭಿಯಾನ ಆರಂಭವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್‌ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ಇದರಲ್ಲಿ ನಾಡಿನ ಸ್ವಾಮೀಜಿಗಳು, ಹಿಂದೂ ಧಾರ್ಮಿಕ ಮುಖಂಡರು, ದೇವಾಲಯಗಳು, ಮಠಮಂದಿರಗಳ ಹಾಲಿ, ಮಾಜಿ ಆಡಳಿತ ಮೊಕ್ತಸರುಗಳು, ಹಿಂದೂ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಲು ಹಾಗೂ ಹಿಂದೂ ಸ್ವಾಯತ್ತ ಮಂಡಳಿ ರಚಿಸಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯ ಹಿಂತಿರುಗಿಸಬೇಕು ಎಂದು ಕೃಷ್ಣ ಪ್ರಸನ್ನ ಒತ್ತಾಯಿಸಿದ ಅವರು, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಚುನಾಯಿತ ಸರ್ಕಾರ ವ್ಯಾಪಾರಿ ಕೇಂದ್ರಗಳಂತೆ ನಡೆಸುತ್ತಿರುವುದು ಖಂಡನೀಯ ಎಂದರು.
ಹಿಂದೂ ದೇವಾಲಯಗಳು ಮತ್ತು ಅದರ ಸ್ವತ್ತುಗಳು ಜಾತ್ಯತೀತ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದರಿಂದ ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲ್ಪಟ್ಟಿದೆ. ಇದರಿಂದಾಗಿ ಹಿಂದುಗಳ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆಯುಂಟಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಗೋಪಾಲ ಕುತ್ತಾರ್‌, ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್‌ ನೆರಿಯ, ಷಷ್ಠಿಪೂರ್ತಿ ಸಮಾರೋಪ ಅಧ್ಯಕ್ಷ ಡಾ.ಎಂ. ದಯಾಕರ್‌ ಇದ್ದರು.

Tags :