ಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ
ಮಂಡ್ಯ : ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಕೆಳಕ್ಕೆ ಇಳಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೆರಗೋಡು ಗ್ರಾಮದಿಂದ ಮಂಡ್ಯದವರೆಗೆ ಪಾದಯಾತ್ರೆ ನಡೆಯಿತು.
ಕೆರಗೋಡು ಗ್ರಾಮದ ಜನರ ಜೊತೆಗೂಡಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮತ್ತು ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರು ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆಯೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಸೋಮವಾರ ಬೆಳಗ್ಗೆ ಕೆರಗೋಡು ಗ್ರಾಮದ ಹನುಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಗೊಂಡಿತು, ಶ್ರೀ ರಾಮನ ಭಾವಚಿತ್ರ ಹಿಡಿದು ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಂಡು, ಕೇಸರಿ ಬಾವುಟಗಳನ್ನು ಹಿಡಿದು ಹೊರಟು ಹನುಮ ಧ್ವಜ ಕೆಳಕ್ಕೆ ಇಳಿಸಿದ ಜಿಲ್ಲಾಡಳಿತ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು,
ಕೇಸರಿ ಶಾಲು ಹೊದ್ದ ಬಿಜೆಪಿ- ಜೆಡಿಎಸ್ ಪಕ್ಷದ ಮುಖಂಡರು ಪಾದಯಾತ್ರೆಯಲ್ಲಿ ಭಾಗಿಯಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಜೊತೆ ಹೆಜ್ಜೆ ಹಾಕಿ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು,
ಪಾದಯಾತ್ರೆಯಲ್ಲಿ ಕೇಸರಿ ಕಹಳೆ ಮೊಳಗಿದರೆ ಪಾದಯಾತ್ರೆ ಸಂಪೂರ್ಣ ಕೇಸರಿಮಯವಾಗಿತ್ತು,ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದ ಪಾದಯಾತ್ರಿಗಳಿಗೆ ಬೆಂಬಲ ಸೂಚಿಸಿ ಯುವಕರು ಬೈಕ್ ಜಾಥಾ ಮೂಲಕ ಸಾಗಿದರೆ ಮಾರ್ಗದ ಹಳ್ಳಿ ಹಳ್ಳಿಗಳಲ್ಲಿ ಗ್ರಾಮಸ್ಥರು ಪಾದಯಾತ್ರಿಗಳಿಗೆ ಕುಡಿಯಲು ನೀರು,ಮಜ್ಜಿಗೆ, ಪಾನಕ ನೀಡಿದರು.
ಪಾದಯಾತ್ರೆ ಮಂಡ್ಯ ನಗರದ ಪ್ರವೇಶ ಮಾಡಿದಾಗ ಕಾರಿಮನೆ ಗೇಟ್ ನಲ್ಲಿ ಪಾದಯಾತ್ರಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು, ಕಾಳಿಕಾಂಬ ದೇವಾಲಯದ ಬಳಿ ನೆರೆದಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಜೊತೆಯಾಗಿ ಪಾದಯಾತ್ರೆಯಲ್ಲಿ ಸಾಗಿದರು,ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಕೆರಗೋಡು ಗ್ರಾಮದ ಧ್ವಜಸ್ತಂಬದಲ್ಲಿ ಹನುಮಾನ್ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿದರು.
ಜಾತ್ಯಾತೀತ ಜನತಾದಳದ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಹನುಮ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಪಾದಯಾತ್ರೆಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ, ಶಾಸಕ ಪ್ರೀತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಕುಮಾರ್, ಅಶೋಕ್ ಜಯರಾಮ್, ಚಂದಗಾಲು ಶಿವಣ್ಣ, ಜಾತ್ಯತೀತ ಜನತಾದಳ ಪಕ್ಷದ ಶಾಸಕ ಎಚ್ ಟಿ ಮಂಜು, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಸುರೇಶ್ ಗೌಡ ಇತರರಿದ್ದರು