For the best experience, open
https://m.samyuktakarnataka.in
on your mobile browser.

ಹಿಂದೂ ವಿವಾಹದಲ್ಲಿ ಸಪ್ತಪದಿ ಅತ್ಯಗತ್ಯ: ಹೈಕೋರ್ಟ್

10:58 PM Apr 08, 2024 IST | Samyukta Karnataka
ಹಿಂದೂ ವಿವಾಹದಲ್ಲಿ ಸಪ್ತಪದಿ ಅತ್ಯಗತ್ಯ  ಹೈಕೋರ್ಟ್

ಲಖನೌ: ಹಿಂದೂಗಳ ಶಾಸ್ತ್ರೋಕ್ತ ವಿವಾಹ ವಿಧಿಯಂತೆ ಕನ್ಯಾದಾನ ಮಾಡುವ ಅಗತ್ಯವಿಲ್ಲ. ಆದರೆ ವಧೂವರರಿಬ್ಬರೂ ಏಳು ಬಾರಿ ಅಗ್ನಿಗೆ ಪ್ರದಕ್ಷಿಣೆ ಮಾಡುವ ಸಪ್ತಪದಿ ಮಾತ್ರ ಅತ್ಯಗತ್ಯ ವಿಧಿ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ತ÷್ವದ ತೀರ್ಪಿನಲ್ಲಿ ತಿಳಿಸಿದೆ. ಅಶುತೋಷ್ ಯಾದವ್ ಎಂಬಾತ ತನ್ನ ಮದುವೆಯಲ್ಲಿ ಕನ್ಯಾದಾನ ನೆರವೇರಿಸಿಲ್ಲ ಎಂದು ಪ್ರತಿಪಾದಿಸಿ ಸಲ್ಲಿಸಿದ ರಿಟ್ ಅರ್ಜಿ ಮೇಲೆ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ನೇತೃತ್ವದ ಲಖನೌ ನ್ಯಾಯಪೀಠ ಈ ತೀರ್ಪು ನೀಡಿದೆ. ಹಿಂದೂ ವಿವಾಹ ಕಾಯಿದೆಯು ಸಪ್ತಪದಿ ತುಳಿಯುವ ಆಚರಣೆಯನ್ನೇ ಅತ್ಯವಶ್ಯಕ ವಿಧಿಯಾಗಿ ಪರಿಗಣಿಸುತ್ತದೆ. ಕನ್ಯಾದಾನ ಮಾಡಿದರಷ್ಟೇ ಹಿಂದೂ ಶಾಸ್ತ್ರೋಕ್ತ ವಿವಾಹ ಪೂರ್ಣಗೊಳ್ಳುವುದೆಂದು ಕಾಯ್ದೆ ಹೇಳಿಲ್ಲ ಎಂಬುದಾಗಿ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ ತೀರ್ಪಿನಲ್ಲಿ ವಿವರಿಸಲಾಗಿದೆ. ನ್ಯಾಯಯುತ ನಿರ್ಧಾರಕ್ಕೆ ಅಗತ್ಯವೆಂದಾದರೆ ಕ್ರಿಮಿನಲ್ ದಂಡಸಂಹಿತೆಯ ೩೧೧ನೇ ವಿಧಿಯಡಿ ಯಾರೇ ಸಾಕ್ಷೀದಾರರನ್ನು ನ್ಯಾಯಾಲಯ ವಿಚಾರಣೆಗೆ ಕರೆಸಿಕೊಳ್ಳಬಹುದು. ಆದರೆ ಈ ಪ್ರಕರಣದ ನ್ಯಾಯಯುತ ನಿರ್ಧಾರಕ್ಕೆ ಕನ್ಯಾದಾನ ಸಮಾರಂಭ ಅಗತ್ಯವೋ ಇಲ್ಲವೋ ಎಂಬುದು ಅತ್ಯವಶ್ಯಕವಾಗಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.