ಹಿಂಸೆಯಾಗದಿರಲಿ ಹುಚ್ಚು ಅಭಿಮಾನ
ಈಗ ಭ್ರಾಮಕ ಸಂಸ್ಕೃತಿಯ ವಿಜೃಂಭಣೆಯ ಕಾಲ.
ಅಭಿಮಾನದ ಅತಿರೇಕ, ಜನಾಕರ್ಷಣೆಯ ಹಂಬಲ, ಎಲ್ಲರಿಗಿಂತಲೂ ತಾವು ಭಿನ್ನ ಎಂದು ತೋರಿಸುವ ಮನೋಭಾವ, ಹಣ ಅಂತಸ್ತು, ಪ್ರಸಿದ್ಧಿಯ ಚಾಪಲ್ಯ….!
ಇವೆಲ್ಲವುಗಳೂ ಈಗ ಪರಮಾವಧಿಗೆ ತಲುಪಿ ಸಮಾಜಕ್ಕೆ ಕಂಟಕಪ್ರಾಯವಾಗುವ, ಯುವ ಜನಾಂಗವನ್ನು ದಿಕ್ಕು ತಪ್ಪಿಸುವ ಸ್ಥಿತಿಗೆ ತಲುಪಿವೆ.
ಗದಗ ತಾಲ್ಲೂಕು ಸೂರಣಗಿಯ ಮೂವರು ಯುವಕರು ಸ್ಯಾಂಡಲ್‌ವುಡ್ ಖ್ಯಾತ ನಟ ಯಶ್ ಜನ್ಮದಿನಾಚರಣೆಯನ್ನು ಆಚರಿಸಲು ಹೋಗಿ ಜೀವ ಕಳೆದುಕೊಂಡರು. ಮತ್ತೆ ಮೂವರು ಇನ್ನೂ ನೋವು ನರಳಾಟದಲ್ಲಿದ್ದಾರೆ. ಸೂರಣಗಿಯಂತಹ ಸಾವಿರ ಜನಸಂಖ್ಯೆ ಇರುವ ಊರಲ್ಲಿ ಯುವಕರಿಗೋ ತಾವು ಯಶ್ ಅಭಿಮಾನಿಗಳೆಂದು ತೋರ್ಪಡಿಸುವ ಮತ್ತು ತಮ್ಮ ಊರಿನ ಹಿರಿ-ಕಿರಿಯರಿಗೆ ಸಪ್ರೈಸ್ ನೀಡುವ ತವಕ. ಅದಕ್ಕಾಗಿ ರಾತ್ರಿ ೧೨ರ ಹೊತ್ತಿಗೆ ಉದ್ದದ ಕಟೌಟ್ ನಿಲ್ಲಿಸಿ ಅದಕ್ಕೆ ಕ್ಷೀರಾಭಿಷೇಕ ನಡೆಸುವ, ಯಶ್‌ಗೆ ಶುಭ ಹಾರೈಸುವ ಉತ್ಸಾಹದಲ್ಲಿ ದುಡಿಯುವ ವiಕ್ಕಳ ಜೀವ ಹೋಯಿತು.
ಹೊತ್ತು ಹೆತ್ತು ಕುಟುಂಬದ ಪೋಷಣೆಗೈಯುತ್ತಾರೆಂಬ ಭರವಸೆಯೊಂದಿಗೆ ಬೆಳೆಸಿದ ಮಕ್ಕಳು ಈಗ ಬದುಕಿನುದ್ದಕ್ಕೂ ನೋವುಂಟು ಮಾಡಿ ಇಹಲೋಕ ತ್ಯಜಿಸಿದ್ದಾರೆ. ಇದು ಅಭಿಮಾನದ ಅತಿರೇಕ ಎಂದು ಹೇಳಿಬಿಡಬಹುದು. ಯಶ್ ವಿದೇಶದಿಂದ ಬಂದು ಈ ಕುಟುಂಬಗಳಿಗೆ ಸಾಂತ್ವನ ಹೇಳಿ ಹೋಗಿದ್ದಾರೆ. ಸರ್ಕಾರವೇನೋ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಇಡೀ ಕುಟುಂಬ, ಸಮುದಾಯ ಮಕ್ಕಳು ಬದುಕಿ ಬರುತ್ತಾರಾ? ಏಕೆ ಹೀಗಾಯಿತು, ನಮ್ಮ ಮಕ್ಕಳೇಕೆ ಹೀಗೆ ಮಾಡಿದರು ಎಂದು ಪ್ರಶ್ನಿಸಿದರೆ ಉತ್ತರ ಹೇಳುವರಿಲ್ಲ. ಸಾಂತ್ವನ-ಪರಿಹಾರಗಳು ಮಕ್ಕಳ ಜೀವನವನ್ನಂತೂ ಮರಳಿ ತಂದು ಕೊಡಲಾರವು. ಕನಿಷ್ಠ ನೆಮ್ಮದಿಯೂ ದೊರಕದು.
ಕೇವಲ ಸೂರಣಗಿಯಷ್ಟೇ ಅಲ್ಲ. ಇಡೀ ನಾಡು ಈಗ ಪ್ರಶ್ನಿಸುತ್ತಿದೆ. ಏಕೆ ಈ ಭ್ರಮಾ ಲೋಕ? ಹುಚ್ಚು ಯೋಚನೆಗಳು? ಅತಿರೇಕದ ಅಭಿಮಾನ? ಇವುಗಳಿಗೆ ಕಡಿವಾಣ, ಕಟ್ಟಲೆ, ನಿಯಂತ್ರಣಗಳೇ ಇಲ್ಲವೇ ಎಂದು?
ಹೌದು. ಅಸುನೀಗಿದ ಯಶ್ ಅಭಿಮಾನಿಗಳೆಂದು ಹೇಳಿಕೊಂಡು ನಟನ ಜನ್ಮದಿನ ಆಚರಿಸುತ್ತಿದ್ದ ಈ ಯುವಕರಿಗೆ ಅವರ ಸಂಪರ್ಕ, ಪರಿಚಯಗಳೇ ಇಲ್ಲ. ಕೇವಲ ಪರದೆಯ ಮೇಲೆ ನಟರು ಆಡುವ ಮಾತು, ಮಾಡುವ ನಟನೆ, ಇವುಗಳೊಂದಿಗೆ ತಮ್ಮ ಬದುಕು, ಜೀವನದ ಕಲ್ಪನೆ, ಇಂಥವರನ್ನೆಲ್ಲ ಹುಚ್ಚಿಗೆ, ಅತಿರೇಕಕ್ಕೆ ತಂದೊಡುತ್ತಿದೆ. ಪರದೆ ಮೇಲೆ ಕಾಣುವ ಯಶ್ ತನ್ನ ಹೃದಯದಲ್ಲಿ ಇದ್ದಾನೆಂಬ ಭ್ರಮೆ, ಇದನ್ನು ಸಮಾಜಕ್ಕೆ ತೋರಿಸಬೇಕೆಂಬ ಹಪಹಪಿತನ, ಹಂಬಲ ಈ ಎಲ್ಲವುಗಳಿಂದ ನಾಡಿನಲ್ಲಿ ವಿಜೃಂಭಿಸುತ್ತಿರುವುದು ಬಹುಪರಾಕ್ ಮತ್ತು ಹುಚ್ಚು ಅಭಿಮಾನದ ಪ್ರದರ್ಶನ.
ಸೂರಣಗಿಯಲ್ಲಿ ಕಟೌಟ್ ನಿಲ್ಲಿಸಿ ಯಶ್ ಭಾವಚಿತ್ರಕ್ಕೆ ಹಾಲು ಮೊಸರು ಸುರಿದದ್ದು ಯಶ್‌ಗೇನೂ ಗೊತ್ತಾಗಲ್ಲ. ಊರಿನ ಜನರ ಮುಂದೆ ಎದೆಯುಬ್ಬಿಸಿ, ಯಶ್ ಡೈಲಾಗ್ ಹೇಳುತ್ತ ತಿರುಗಾಡುವುದೇ ಈ ಮಕ್ಕಳಿಗೆ ಖುಷಿ ತಂದೀತು. ಅಥವಾ ತಮ್ಮ ಸ್ಟೇಟಸ್‌ಗಳಲ್ಲಿ ಹಾಕಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟು ಒಂದೆರಡು ಪತ್ರಿಕೆಗಳಲ್ಲಿ ಪ್ರಸಾರ ಮಾಡುವುದು ಇದಷ್ಟಕ್ಕೇ ಸಮಾಧಾನ.
ಈ ಅಭಿಮಾನದ ಅತಿರೇಕಗಳು ಕೇವಲ ಸೆಲೆಬ್ರಿಟಿಗಳಿಗಷ್ಟೇ ಈಗ ಉಳಿದಿಲ್ಲ. ಅಷ್ಟಕ್ಕೇ ನಿಲ್ಲುತ್ತಲೂ ಇಲ್ಲ. ಈಗ ಕೇವಲ ಚಿತ್ರನಟರಷ್ಟೇ ಅಲ್ಲ. ಬಾಲಿವುಡ್, ಹಾಲಿವುಡ್, ಕಾಲಿವುಡ್‌ಗಷ್ಟೇ ಇದು ಸೀಮಿತವಾಗಿ ಉಳಿದಿಲ್ಲ. ಕಳೆದ ಹತ್ತು-ಹದಿನೈದು ವರ್ಷಗಳಿಂದೀಚೆಗೆ ಹಿರಿ-ಮರಿ ರಾಜಕಾರಣಿಗಳು, ಕ್ರಿಕೆಟ್, ಫುಟ್‌ಬಾಲ್ ಪಟುಗಳು, ವಿವಿಧ ಸಾಹಿತ್ಯ- ಸಂಸ್ಕೃತಿ-ಹೋರಾಟಗಾರರ ಅಭಿಮಾನಿ ಸಂಘಟಗಳು, ಕ್ಲಬ್‌ಗಳು ದೇಶವ್ಯಾಪಿ ಹುಟ್ಟಿಕೊಂಡಿವೆ. ಬೆಳೆದಿವೆ. ಊರಿನ ಮರಿ ಪುಡಾರಿಯಿಂದ ಹಿಡಿದು ರಾಷ್ಟ್ರ ನಾಯಕರವರೆಗೆ, ಧಾರಾವಾಹಿ ಕಲಾವಿದರಿಂದ ಹಿಡಿದು ಮಹೋನ್ನತ ಸಾಧಕರವರೆಗೆ, ಡಾನ್‌ಗಳು, ವಂಚಕರು, ಭಾಷೆ, ಪರಿಸರ, ಜಾತಿ ಹೆಸರಿನಲ್ಲಿ ಅಭಿಮಾನಿ ಪಡೆ, ಸಂಘಟನೆ ಬೆಳೆದಿದೆ.
ಮೊದಲು ಮೊದಲು ಈ ಅಭಿಮಾನಿ ಬಳಗ ಹುಟ್ಟಿಕೊಂಡಾಗ ಅವರಿಗಷ್ಟೇ ಸೀಮಿತವಾಗಿತ್ತು. ಈಗ ಹಾಗಿಲ್ಲ. ಅಭಿಮಾನಿಗಳ ಜೊತೆಗೆ ಅಣ್ಣ, ಅಕ್ಕ, ತಾಯಿ, ಬಾಸ್, ಗುರು, ನಾಮಬಲದ ಸಂಸ್ಕೃತಿ ಹುಟ್ಟಿಕೊಂಡಿದೆ….. ಓಣಿ ಓಣಿಗಳಲ್ಲಿ ಒಬ್ಬ ಕಾರ್ಪೋರೇಟರ್‌ನಿಂದ ಹಿಡಿದು ರಾಜ್ಯದ ಮಂತ್ರಿ, ಮುಖ್ಯಮಂತ್ರಿಯವರೆಗೆ, ಅವರ ಮುಂದೆ ಅಣ್ಣ, ಅಕ್ಕ, ತಾಯಿಯ ಹೆಸರು ಸೇರಿಸಿ ಅಭಿಮಾನಿ ಬಳಗಗಳು ಬೆಳೆಯುತ್ತಿವೆ, ಬೆಳಗುತ್ತಿವೆ.
ನಲವತ್ತು ವರ್ಷಗಳ ಹಿಂದೆ ಡಾ.ರಾಜ್ ಅಭಿಮಾನಿ ಸಂಘವನ್ನು ಸಾ.ರಾ. ಗೋವಿಂದು ಹುಟ್ಟು ಹಾಕಿದಾಗ ಜನ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಹೇಗಿದ್ದರೂ ಡಾ.ರಾಜ್ ಕೋಟ್ಯಂತರ ಕನ್ನಡಿಗರನ್ನು ಅಭಿಯಾನಿಯಾಗಿದ್ದರು. ರಾಜಕುಮಾರ್ ಗೋಕಾಕ ಚಳವಳಿಯಲ್ಲಿ ನೇರವಾಗಿ ಧುಮುಕಿದಾಗ ಸಮಸ್ತ ಕನ್ನಡಿಗರ ಒಲವು ಅರ್ಥವಾಯಿತು.
ಮುಂದೆ ರಾಜ್ ಅಭಿಮಾನಿಗಳ ಬಳಗ ರಾಜ್ಯದ ಜಿಲ್ಲೆ, ತಾಲ್ಲೂಕು, ಊರು, ಓಣಿಗಳಲ್ಲಿ ಸ್ವಯಂ ಹುಟ್ಟುಪಡೆದಾಗ ಸಂಘಟಕರಿಗೂ ನಿಯಂತ್ರಣವೇ ಇಲ್ಲವಾಯಿತು..
ಆ ನಂತರ ಹುಟ್ಟಿಕೊಂಡವು ನೋಡಿ ಸ್ಟಾರ್ ನಟರ ಅಭಿಮಾನಿ ಸಂಘಟನೆಗಳು, ಫ್ಯಾನ್ಸ್ ಕ್ಲಬ್‌ಗಳು ! ಈ ಗೀಳು ಮುಂದೆ ರಾಜಕಾರಣಿಗಳಿಗೆ ಅಂಟಿಕೊಂಡಿತು. ಈ ಅಭಿಮಾನಿ ಬಳಗಗಳ ನಡುವೆ ಅನಗತ್ಯ ವೈಷಮ್ಯ, ಪೈಪೋಟಿ, ಈರ್ಷ್ಯೆ ಅಸೂಯೆಗಳು ಹುಟ್ಟಿ ಮುಂದೆ ದಾಂಧಲೆಗಳಿಗೆ ಕಾರಣವಾದವು. ಇದರಿಂದ ಬೇಸತ್ತು ಡಾ. ರಾಜ್ `ಈ ಅಭಿಮಾನಿ ಸಂಘಕ್ಕೂ ತಮಗೂ ಸಂಬಂಧ ಇಲ್ಲ; ಈ ರೀತಿಯ ವರ್ತನೆ ತನಗೆ ಸೇರುವುದಿಲ್ಲ' ಎನ್ನಬೇಕಾಯಿತು.
ಅಭಿಮಾನಿ ಸಂಘಗಳ ವರ್ತನೆ ಎಷ್ಟಾಗಿದೆ ಎಂದರೆ ಅವರ ಚಿತ್ರಗಳ ಮುಂದೆ ಕುರಿ, ಎಮ್ಮೆ ಬಲಿಕೊಡುವುದು, ಕ್ಷೀರಾಭಿಷೇಕ ಮಾಡುವುದು, ಕಟೌಟ್‌ಗಳ ಮೆರವಣಿಗೆ, ಆ ನಂತರ ಆ ನಟರು ತಮ್ಮ ಮನೆಗೆ ಬರಲಿ ಎಂದು ಮನೆಯಲ್ಲಿ ಉಪವಾಸ ವ್ರತ, ಅವರ ಜನ್ಮದಿನಗಳಿಗೆಲ್ಲ ಹಾರೈಕೆ, ತಲೆ ಬೋಳು ಕೆತ್ತಿಕೊಳ್ಳುವುದು ಇತ್ಯಾದಿ ಶುರುವಾಗಿವೆ.
ಎಷ್ಟೋ ಕುಟುಂಬಗಳು ಈ ಹುಚ್ಚು ಅಭಿಮಾನಕ್ಕೆ ನಾಶವಾಗಿವೆ. ಯುವಕರು ಅಡ್ಡದಾರಿ ಹಿಡಿದಿದ್ದಾರೆ.
ಈ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು. ಎಂಜಿಆರ್, ಎನ್‌ಟಿಆರ್, ರಾಜಕುಮಾರ್, ಬಾಳಾ ಠಾಕ್ರೆ, ಜಯಲಲಿತಾ, ವಿಷ್ಣುವರ್ಧನ, ಇತ್ತೀಚಿನ ನಟರು, ತಮಿಳು ತೆಲುಗು ಚಿತ್ರರಂಗದ ಎಲ್ಲ ಸ್ಟಾರ್‌ಗಳು, ನಟಿಯರು ಇವರೆಲ್ಲರ ಅಭಿಮಾನಿಗಳ ಜೊತೆಗೆ, ಕರುಣಾನಿಧಿ, ಜಯಲಲಿತಾ ಇತ್ಯಾದಿ ಮಂದಿ ದೇವರ ಸ್ವರೂಪವನ್ನು ಪಡೆದುಕೊಂಡರು!
ಈಗ ನಿಧಾನವಾಗಿ ಬ್ರಿಗೇಡ್ ಕಾಲ. ನಮೋ ಬ್ರಿಗೇಡ್, ನಿತೀಶ್ ಬ್ರಿಗೇಡ್, ಲಾಲೂ ಬ್ರಿಗೇಡ್‌ಗಳ ಜೊತೆ ಅಣ್ಣಾಗಳ ಸಂಘ. ಸಿದ್ರಾಮಣ್ಣ ಅಭಿಮಾನಿಗಳ ಸಂಘ, ಡಿ.ಕೆ ಬಾಸ್, ಡಿ ಬಾಸ್, ವಿಕೆ ಬಾಸ್ ಎಂದೆಲ್ಲ ನಾಮ ವಿಶೇಷ ಅಂಕಿತಗಳು ಸೇರ್ಪಡೆ. ಮಹಾರಾಷ್ಟ್ರದಲ್ಲಿ ಟೈಗರ್-ಲಯನ್‌ಗಳ ಆರ್ಭಟ. ಜಯಲಲಿತಾ ನಿಧನವಾದಾಗ ತಮಿಳುನಾಡಿನಲ್ಲಿ ೨೦೩ ಮಂದಿ ಆತ್ಮಹತ್ಯೆ ಮಾಡಿಕೊಂಡರು. ಕರುಣಾನಿಧಿ ನಿಧನರಾದಾಗ ನೂರಾರು ಜನ ಜೀವ ತೆಗೆದುಕೊಂಡರು. ಪುನೀತ್ ನಿಧನರಾದಾಗಲೂ ಕೂಡ ಮರ‍್ನಾಲ್ಕು ಮಂದಿ ಸಾವನ್ನಪ್ಪಿದರು.
ಅಭಿಮಾನದ ಅತಿರೇಕ ಕೇವಲ ಇಲ್ಲಷ್ಟೇ ಅಲ್ಲ. ಅದರ ಸ್ವರೂಪವೂ ವಿಭಿನ್ನ. ಯಾದಗಿರಿ ಜಿಲ್ಲೆಯ ಸುರಪುರದ ವಜ್ಜಲ ಗ್ರಾಮದ ಯುವಕ ಹುಲಿಗೆಪ್ಪ ದುನಿಯಾ ವಿಜಯ್ ಅಭಿಮಾನಿ. ಇಡೀ ಮೈತುಂಬ ಹಚ್ಚೆ ಹಾಕಿಸಿಕೊಂಡ. ಎಲ್ಲೆಂದರಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು, ಮಂದಿರ ಕಟ್ಟುವುದು, ಪೂಜೆ ಸಲ್ಲಿಸುವುದು, ಪುತ್ಥಳಿ ನಿರ್ಮಿಸುವುದು ಇವೆಲ್ಲ ಇತ್ತೀಚಿನ ಹೊಸ ಹೊಸ ಅಭಿಮಾನಿಗಳ ಪ್ರದರ್ಶನ.
ಫುಟ್‌ಬಾಲ್ ಆಟಗಾರರ ಅಭಿಮಾನಿಗಳದ್ದಂತೂ ಹುಚ್ಚು ಮದ. ಅವರು ಹಿಂಸೆಗಿಳಿಯುತ್ತಾರೆ. ಇತ್ತೀಚೆಗೆ ಕ್ರಿಕೆಟ್ ಅಭಿಮಾನಿಗಳದ್ದೂ ಕೂಡ. ಗೆದ್ದರೆ-ಸೋತರೆ ಅನಗತ್ಯ ಪ್ರತಿಕ್ರಿಯೆ. ಪ್ರದರ್ಶನ. ಯಾವ ಮಟ್ಟಕ್ಕೆ ಇಳಿಯಲಾಗುತ್ತಿದೆ ಎಂದರೆ ಅಭಿಮಾನಿಗಳ ಸಂಘಟನೆಗಳ ನಡುವೆ ಘರ್ಷಣೆ, ಹಿಂಸಾಕೃತ್ಯ ನಿಯಂತ್ರಿಸುವುದೇ ಈಗ ಕಷ್ಟಸಾಧ್ಯವಾಗಿದೆ.
ಹೌದು. ಅಭಿಮಾನಿ ಸಂಘಟನೆಗಳು ಈ ರೀತಿ ಹೇಗೆ ಹುಟ್ಟಿಕೊಳ್ಳುತ್ತಿವೆ? ಹೇಗೆ ಬದುಕುತ್ತಿವೆ? ದುಡಿಮೆ ಉದ್ಯೋಗ ಏನೂ ಇಲ್ಲದೆಯೂ ಹೇಗೆ ಇವರಿಗೆ ಐಷಾರಾಮಿ ಬಾಳು ಸಾಧ್ಯ? ಎಂಬ ಸಂಗತಿಗಳು ಈಗಂತೂ ಗೌಪ್ಯವಾಗಿಲ್ಲ! ಪಟ್ಟಿ ಎತ್ತುವುದು, ಅವಾರ್ಡ್ ಕೊಡುವುದು, ಕಾರ್ಯಕ್ರಮ ಸಂಯೋಜಿಸುವುದು, ಹಣ ವಸೂಲಿ, ಬ್ಲ್ಯಾಕ್‌ಮೇಲ್ ಇತ್ಯಾದಿ ಕಾರ್ಯಕ್ಕೂ ಇಳಿದುಬಿಟ್ಟಿದ್ದಾರೆ. ಅಭಿಮಾನಿ ಬಳಗ ಎಂದರೆ ಶಾಸಕರು, ಕಾರ್ಪೋರೇಟರ್‌ಗಳಿಗೂ ಕೂಡ ಅತ್ತ ಭಯ. ಇತ್ತ ಹಿಂಸೆ. ಬಿಟ್ಟರೆ ಆಗಲ್ಲ. ಕೊಟ್ಟರೆ ಮುಗಿಯಲ್ಲ ಎನ್ನುವ ಸ್ಥಿತಿ. ಹಾಗೆಯೇ ಮೊದ ಮೊದಲು ಅವರೇ ಅಭಿಮಾನಿ ಬಳಗ ಹುಟ್ಟು ಹಾಕಿ ಪ್ರೋತ್ಸಾಹಿಸಿ ಪೋಷಿಸಿದವರೇ. ಈಗ ನಿಯಂತ್ರಿಸಲು ಆಗುತ್ತಿಲ್ಲ.
ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಕನ್ನಡ ನಾಮಫಲಕಕ್ಕಾಗಿ ಹೋರಾಟ-ಹಿಂಸಾ ಕೃತ್ಯಗಳು ಜರುಗಿದವು. ಸರ್ಕಾರಕ್ಕೆ ಅತ್ತ ನಿಯಂತ್ರಿಸಲೂ ಕಷ್ಟಸಾಧ್ಯ. ಅವರನ್ನು ಬಗ್ಗು ಬಡಿಯಲೂ ಅಸಾಧ್ಯ. ಇತ್ತ ಆದಾಯ, ಉದ್ಯಮ, ವ್ಯಾವಹಾರಿಕ, ಕಾನೂನು ಸುವ್ಯಸ್ಥೆಗಳ ಸಮಸ್ಯೆ ಹೇಗಾಯಿತೋ ಹಾಗೇ ಎಲ್ಲೆಡೆ. ಈ ನಡುವೆ ಜಾತಿ-ಧರ್ಮ ಬಣ್ಣ. ವ್ಯಕ್ತಿ ಅಲಂಕಾರಿಕ ಪ್ರದರ್ಶನದ ಪರಿಣಾಮ ಇದು.
ಬ್ಯಾನರ್ ಕಟೌಟ್ ಸಂಸ್ಕೃತಿಯ ಮೂಲ ಹರಿಕಾರರೇ ಈ ಅಭಿಮಾನಿ ಬಳಗ. ಹಾಗಾಗಿ ಮೊದ ಮೊದಲು ತಮ್ಮ ಜನ್ಮದಿನಾಚರಣೆಗೂ ಹಣ ಕೊಟ್ಟು ಕಟೌಟ್ ನಿಲ್ಲಿಸಿಕೊಳ್ಳುತ್ತಿದ್ದವರು, ಈಗ ನಿಲ್ಲಿಸಿದ ಕಟೌಟ್‌ಗೆ ಮಸಿ, ಬಣ್ಣ ಬಳಿಯದಂತೆ ಮತ್ತೊಂದು ಗುಂಪಿಗೂ ಹಣ ಕೊಡಬೇಕಾದ ಅಸಹ್ಯಕರ ಪರಿಸ್ಥಿತಿ. ಸಾಮಾಜಿಕ ಜಾಲತಾಣಗಳ ವಿಪರೀತದ ಪರಿಣಾಮವಾಗಿ ಇಂತಹ ಬಳಗಗಳು ಪುಕ್ಕಟೆಯಾಗಿ ವಿಜೃಂಭಿಸುವ ಕಾಲ ನಿರ್ಮಾಣವಾಗಿದೆ.
ಎಲ್ಲಿಯವರೆಗೆ ಈ ಅಭಿಮಾನಿಗಳ ಅತಿರೇಕವಿದೆ ಎಂದರೆ ಅಮೇರಿಕದ ರಾಕ್ ಗಾಯಕಿ ಸೋಫಿಯಾ ಅಭಿಮಾನಿಗಳ ಕೋರಿಕೆಯ ಮೇರೆಗೆ ಸ್ಟೇಜ್ ಮೇಲೆ ಮೂತ್ರ ಹಾರಿಸಿದ್ದಳಂತೆ. ಅದನ್ನು ಅಭಿಮಾನಿಗಳು ಹಿಡಿದು ಪ್ರೊಕ್ಷಣೆ ಮಾಡಿಕೊಂಡಿದ್ದರಂತೆ ! ಫುಟ್‌ಬಾಲ್ ಆಟಗಾರರ ಅಭಿಮಾನಿಗಳ ದಾಂಡಿಗತನಕ್ಕೆ ಆದ ಜೀವ ಹಾನಿ, ಆಸ್ತಿ ಪಾಸ್ತಿ ನಷ್ಟ ಹಲವು ದೇಶಗಳಲ್ಲಿ ಭಯಾನಕವಾಗಿವೆ…
ಭಾರತದಲ್ಲೂ ಅಭಿಮಾನಿಗಳಿಗೆ ಬ್ರಾ, ಚಡ್ಡಿ ಎಸೆಯುವ, ಹರಾಜು ಮಾಡುವ ಪ್ರಕ್ರಿಯೆಯೂ ಈಗ ಆರಂಭವಾಗಿದೆ.
ಈಗ ಬಂದಿರುವ ಪ್ರಶ್ನೆ, ಇಂತಹ ವಿಕೃತ ಸಂಸ್ಕೃತಿ ಇನ್ನೆಷ್ಟು ಕಾಲ? ಇನ್ನ್ಯಾವ ಸ್ವರೂಪ ಪಡೆದುಕೊಳ್ಳಲಿದೆ? ಇದಕ್ಕೆ ನಿಯಂತ್ರಣವೇ ಇಲ್ಲವೇ ಎನ್ನುವುದು. ಬೇಗ ನಿಯಂತ್ರಿಸಿದಷ್ಟೂ ಸಮಾಜಕ್ಕೆ ಆರೋಗ್ಯಕರ. ಇಲ್ಲದಿದ್ದರೆ ಈ ಅತಿರೇಕದ ಹುಚ್ಚಾಟಕ್ಕೆ ಬಹಳ ಬಲಿಗಳು ಆಗಬೇಕಾದೀತು. ದುರಂತವೆಂದರೆ ಅಮಾಯಕ ಯುವಕರು, ನಿರುದ್ಯೋಗಿ ತರುಣರು, ಭ್ರಮಾಲೋಕದಲ್ಲಿ ವಿಹರಿಸುವವರು, ಏನಕೇನ ಪ್ರಕಾರ ಪ್ರಸಿದ್ಧಿಗೆ ಬರಬೇಕು ಎನ್ನುವವರೇ ಬಲಿಯಾಗುತ್ತಿದ್ದಾರೆ.
ಮನೋಶಾಸ್ತ್ರಜ್ಞರ ಅಭಿಪ್ರಾಯದಂತೆ ಸಾಮಾಜಿಕ ಸಮಸ್ಯೆ ಹಾಗೂ ನೈತಿಕ ಭಯ ಇವೇ ಅತಿರೇಕದ ಅಭಿಮಾನಕ್ಕೆ ಕಾರಣ. ನೈತಿಕ ಪ್ಯಾನಿಕ್ ಅಭಿಮಾನಿಗಳ ಹಿಂಸಾಚಾರವನ್ನು ಪ್ರಚೋದಿಸುತ್ತದೆ. ಅದೇ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ. ಏನಾದರೂ ಮಾಡಬೇಕೆಂಬ ತುಡಿತ ನಮ್ಮ ಗುಂಪು, ಅವರ ಗುಂಪು ಎನ್ನುವುದನ್ನು ಸೃಷ್ಟಿಸುತ್ತಿದೆ ಎನ್ನುತ್ತಾರೆ ಸಾಮಾಜಿಕ ವೈಜ್ಞಾನಿಕ ಅಧ್ಯಯನಕಾರರು.
ಡಾ.ರಾಜ್‌ರಿಂದ ಹಿಡಿದು ಮೊನ್ನೆಯ ಯಶ್‌ವರೆಗೆ ಎಲ್ಲರೂ ಅಭಿಮಾನಿಗಳ ವರ್ತನೆಗೆ ಆತಂಕ ವ್ಯಕ್ತಪಡಿಸಿದವರೇ. ಸಮಾಜಕ್ಕೆ ಒಳಿತಾಗುವ ಕಾರ್ಯ ಕೈಗೊಳ್ಳಿ, ತಂದೆ ತಾಯಿಯನ್ನು ಪೋಷಿಸಿ ಎಂದು ಡಾ.ರಾಜ್ ಅಂತಿಮ ಕ್ಷಣದಲ್ಲೂ ಹೇಳಿದ್ದರು. ವೀರಪ್ಪನ್ ಮನಸ್ಸನ್ನೇ ಪರಿವರ್ತಿಸುವೆ ಎಂದು ಹೇಳಿ ಸಾಕಷ್ಟು ಯಶಸ್ವಿಯಾದವರು ರಾಜ್. ಯಶ್ ಮೊನ್ನೆ ಆಡಿದ ಮಾತು, ನೀಡಿದ ಸಾಂತ್ವನ ಕೂಡ ಮನಕಲಕುವಂತಿತ್ತು. ಹುಚ್ಚು ಅಭಿಮಾನ ಬೇಡ. ಅಷ್ಟೆಲ್ಲ ಅಭಿಮಾನ ಇದ್ದರೆ ಸಿನೆಮಾ ನೋಡಿ, ನಿಮ್ಮ ತಂದೆ ತಾಯಿ, ಪೋಷಕರನ್ನು ಕ್ಷೇಮವಾಗಿ ನೋಡಿಕೊಳ್ಳಿ. ಹೀಗೆ ಅತಂತ್ರರನ್ನಾಗಿ ಮಾಡಬೇಡಿ. ಹುಟ್ಟು ಹಬ್ಬವೆಂದರೆ ನನಗೆ ಅಸಹ್ಯ ಹಾಗೂ ಭಯ ಆಗುತ್ತದೆ ಎನ್ನುವ ಮಟ್ಟಕ್ಕೆ ಕಲಾವಿದ ಹೇಳಬೇಕಾಯಿತೆಂದರೆ ಎಷ್ಟಾಗಿರಬೇಕು ನೋಡಿ.
ಈ ಗೀಳು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಅಭಿಮಾನ ಅನ್ನೋದು ಒಂದು ಹಂತಕ್ಕೆ ಮನಸ್ಸಿನಲ್ಲಿದ್ದರೇನೇ ಚಂದ. ಈ ಹಂತ ದಾಟಿ ಈಗ ಶಾಸನ ರಚಿಸುವ, ಕಾನೂನು ಕಟ್ಟಲೆ ಬಿಗಿಗೊಳಿಸುವ ಮಟ್ಟಕ್ಕೆ ಬಂದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮಧ್ಯಪ್ರದೇಶದ ಶಿವರಾಜ್‌ಸಿಂಗ್ ಚೌಹಾಣ ಬಹಿರಂಗ ಸಭೆಯಲ್ಲೊಂದು ಮಾತನ್ನಾಡಿದರು. ಒಬ್ಬ ವ್ಯಕ್ತಿ ಉನ್ನತ ಹುದ್ದೆಯಲ್ಲಿ ಇಲ್ಲದಿದ್ದರೆ ಕತ್ತೆಯ ಗೋಣು ಮಾಯವಾದಂತೆ ಹೋರ್ಡಿಂಗ್, ಬ್ಯಾನರು, ಕಟೌಟ್‌ಗಳಿಂದ ಫೋಟೊಗಳು ಮಾಯವಾಗುತ್ತವೆ; ಇದು ಒಂದೇ ತಿಂಗಳಲ್ಲಿ ನನಗಾಗಿರುವ ಅನುಭವ ಎಂದರು. ಎಷ್ಟು ವಾಸ್ತವವಲ್ಲವೇ?
ಇಲ್ಲ. ಇಡೀ ಸಮಾಜ, ಜನತೆ ಚಿಂತಿಸಬೇಕು. ಅಭಿಮಾನದ ಅತಿರೇಕ ಸಮಾಜಕ್ಕೆ ಹಿಂಸೆಯಾಗದಂತೆ, ಅವರು ನಂಬಿರುವ ವ್ಯಕ್ತಿಗಳಿಗೂ, ಸಂಸ್ಥೆಗಳಿಗೂ ಕೆಡುಕಾಗದಂತೆ, ಮತ್ತೊಂದು ಸಾಮಾಜಿಕ ಗೊಂದಲ, ಪರ್ಯಾಯ ಶಕ್ತಿ ಉದ್ಭವವಾಗದಂತೆ ನೋಡಿಕೊಳ್ಳಬೇಕಾದದ್ದು ಅನಿವಾರ್ಯ. ಎಲ್ಲರೂ ಇತ್ತ ಗಮನಿಸಬೇಕಾದದ್ದೇ.