For the best experience, open
https://m.samyuktakarnataka.in
on your mobile browser.

ಹಿಜಾಬ್ ವಿಚಾರದಲ್ಲಿ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ...

07:42 PM Dec 24, 2023 IST | Samyukta Karnataka
ಹಿಜಾಬ್ ವಿಚಾರದಲ್ಲಿ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ

ಮಂಗಳೂರು: ಹಿಜಾಬ್ ವಿಚಾರದಲ್ಲಿ ನಾವು ಆದೇಶವೇ ಮಾಡಿಲ್ಲ. ಒಂದು ವೇಳೆ ಮಾಡಿದ್ದರೂ ನಾವು ಅದನ್ನು ಪರಿಶೀಲನೆ ಮಾಡುತ್ತೇವೆ ಎಂಬ ಮಾತನ್ನು ಸಿಎಂ ಸಿದ್ದರಾಮಯ್ಯರೇ ಹೇಳಿದ್ದಾರೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಅವರು ಭಾನುವಾರ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿ, ಅದರ ಸಾಧಕ ಭಾದಕವನ್ನು ನೋಡಿಕೊಂಡು ಸರಕಾರ ತೀರ್ಮಾನ ಕೈಗೊಳ್ಳುತ್ತದೆ. ಗೊಂದಲ ಮಾಡುವ ಅವಶ್ಯಕತೆಯಿಲ್ಲ. ಮುಸ್ಲಿಂ ಸಮುದಾಯದವರು ಹಿಜಾಬ್ ಅನ್ನು ಹಾಕಿಕೊಂಡೇ ಬರುತ್ತಾರೆ. ಬಿಜೆಪಿ ಸರಕಾರ ಬಂದ ಬಳಿಕ ಈ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಈ ಮೊದಲು ನಾವು ಯಾವ ರೀತಿ ಜೀವನ ನಡೆಸಿದೆವೋ ಅದೇ ರೀತಿ ಇದ್ದರೆ ಒಳಿತು ಎಂದರು.
ಮುಸ್ಲಿಂ ಸಮುದಾಯದವರು ಹಿಂದಿನಿಂದಲೂ ಹಿಜಾಬ್ ಧರಿಸುತ್ತಿದ್ದಾರೆ. ಕಳೆದ ಸಲ ಬಿಜೆಪಿ ಸರ್ಕಾರ ಅಧಿಕಾರ ಬಂದಿದ್ದು, ಹಿಜಾಬ್ ನಿಷೇಧಿಸಲಾಗಿದೆ. ನಾವು ಏನು ಮಾಡುವುದಾದರೂ ಕಾನೂನಿನ ಅಡಿಯಲ್ಲಿ ಸಂವಿಧಾನವ ಅಡಿಯಲ್ಲಿ ಮಾಡುತ್ತೇವೆ ಎಂದು ಹೇಳಿದರು.
ಸಂತೆ ವ್ಯಾಪಾರದಲ್ಲಿ ಧರ್ಮರಾಜಕಾರಣದ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮ ಹಾಗೂ ಜನಸಮುದಾಯದ ಹಕ್ಕುಗಳ ವಿಚಾರಗಳಲ್ಲಿ ನಾವು ಸಂವಿಧಾನವನ್ನು ಬಿಟ್ಟು ಯಾವ ಕೆಲಸವನ್ನು ಮಾಡೋಲ್ಲ. ಯಾವ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಸಂವಿಧಾನದ ಚೌಕಟ್ಟಿನೊಳಗೇ ತೆಗೆದುಕೊಳ್ಳುತ್ತೇವೆ. ಇದು ಕೆಲವರಿಗೆ ನೋವಾಗಬಹುದು, ಇನ್ನು ಕೆಲವರಿಗೆ ಸಂತೋಷವಾಗಬಹುದು ಎಂದರು.
ನೈತಿಕ ಪೊಲೀಸ್ ಗಿರಿ ತಡೆಗೆ ಆಂಟಿ ಕಮ್ಯುನಲ್ ವಿಂಗ್ ಮಾಡಿದ್ದರೂ ಕಡಿವಾಣ ಬಿದ್ದಂತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಹಳಷ್ಟು ಕಡಿಮೆ ಆಗಿದೆ ಎಂಬುದು ನಮಗೆ ಬಂದ ಮಾಹಿತಿ. ನೈತಿಕ ಪೊಲೀಸ್ ಗಿರಿಗಳ ಸಂಖ್ಯೆ ಕಡಿಮೆಯಾದ್ದಂತೂ ಸತ್ಯ. ಸಮಾಜದಲ್ಲಿ ಸಾಮರಸ್ಯ ಇರಬೇಕು. ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ ಪೊಲೀಸ್ ಕಮಿಷನರ್, ಎಸ್ಪಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಹಾಗೆಂದು ಎಲ್ಲರ ಮೇಲೂ ಕೇಸ್ ಹಾಕಬೇಕೆಂದಲ್ಲ. ಯಾರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ ಅವರ ಮೇಲೆ ಕ್ರಮ ಜರುಗಿಸಬೇಕು. ಯಾರು ನೈತಿಕ ಪೊಲೀಸ್ ಗಿರಿ ಮಾಡಿಲ್ಲವೋ ಅವರು ಯಾವುದೇ ಆತಂಕಿತರಾಗುವ ಅಗತ್ಯವಿಲ್ಲ. ಪೊಲೀಸ್ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಆದ್ದರಿಂದ ಅದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
ಸಚಿವನಾದರೂ ‘ದಲಿತ’ ಎಂಬ ಕೀಳುಭಾವನೆಯಿಂದ ಮುಕ್ತಗೊಂಡಿಲ್ಲ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಸಮಾಜದಲ್ಲಿ ಅಂತಹ ಮಾತುಗಳು ಬರುತ್ತಿರುತ್ತದೆ. ಅದನ್ನೇ ನಾನು ಹೇಳಿದ್ದು, ಅದರಲ್ಲಿ ಸುಳ್ಳೇನಿಲ್ಲ. ಆದರೆ ಸಿಎಂ ಪಟ್ಟ ದಲಿತ ಎಂಬ ಕಾರಣದಿಂದ ತಪ್ಪಿದ್ದಲ್ಲ. ಕಾಂಗ್ರೆಸ್‌ನಲ್ಲಿ ಜಾತಿ ಆಧಾರದಲ್ಲಿ ಸಿಎಂ ಮಾಡೋದಲ್ಲ. ಅವರ ಸಾಮರ್ಥ್ಯ, ಪಕ್ಷಕ್ಕೆಷ್ಟು ಕೆಲಸ ಮಾಡಿದ್ದಾರೆ, ಹಿರಿತನ ನೋಡಿ ಸಿಎಂ ಮಾಡುತ್ತಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.