ಹಿರಿಯ ಪತ್ರಕರ್ತ ವಸಂತ ನಾಡಿಗೇರ ನಿಧನಕ್ಕೆ ಗಣ್ಯರ ಸಂತಾಪ
ಬೆಂಗಳೂರು: ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ (59) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ಸೋಮವಾರ ಬೆಳಗಿನ ಜಾವ 3.13ಕ್ಕೇ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನವರಾದ ಇವರು ಹುಟ್ಟೂರಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಬಳಿಕ ಧಾರವಾಡದಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಿಂದ ವೃತ್ತಿಯನ್ನು ಆರಂಭಿಸಿ ಹಲವು ಪತ್ರಿಕೋದ್ಯಮದಲ್ಲಿ ಉಪಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ ಹಾಗೂ ಸಂಪಾದಕರಾಗಿ ಬದುಕಿನಲ್ಲಿ ಯಶಸ್ಸು ಕಂಡಿದ್ದರು. ತಾವು ಬೆಳೆಯುವ ಜೊತೆಗೆ ಯುವಕರನ್ನು ಪತ್ರಿಕೋದ್ಯಮದಲ್ಲಿ ಬೆಳೆಸಿದ್ದರು. ಇವರ ಬಡಿಗೇರ್ ಹಾಗೂ ನಾಡಿಗೇರ್ ಎನ್ನುವ ಹಾಸ್ಯ ಅಂಕಣ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ವಸಂತ ನಾಡಿಗೇರ್ ಅವರು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ವಿಶ್ವವಾಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 2 ವರ್ಷದಿಂದ ಸಂಯುಕ್ತ ಕರ್ನಾಟಕದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಶೀರ್ಷಿಕೆಗಳನ್ನು ಕೊಡುವುದರಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಕೈಗೊಂಡು, ಕನ್ನಡ ಪತ್ರಿಕೋದ್ಯಮಕ್ಕೇ ಹೊಸ ಆಯಾಮ ನೀಡಿದ್ದರು. ಲತಾ ಮಂಗೇಶಕರ್ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆದಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿದೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.