ಹಿರೇಹಳ್ಳಕ್ಕೆ ಜಿಗಿದ ಮಹಿಳೆ: ರಕ್ಷಿಸಿದ ಯುವಕರು
ಕೊಪ್ಪಳ: ಹಿರೇಹಳ್ಳಕ್ಕೆ ಜಿಗಿದ ಮಹಿಳೆಯೋರ್ವಳನ್ನು ಗ್ರಾಮದ ಯುವಕರು ರಕ್ಷಿಸಿದ ಘಟನೆ ಸಮೀಪದ ಭಾಗ್ಯನಗರದಲ್ಲಿ ಶನಿವಾರ ನಡೆದಿದೆ.
ಹಳ್ಳಕ್ಕೆ ಹಾರಿದ ಮಹಿಳೆಯನ್ನು ತಾಲ್ಲೂಕಿನ ಓಜನಹಳ್ಳಿ ಗ್ರಾಮದ ಭರಮಮ್ಮ ಮಡಿವಾಳರ್ ಎಂದು ಗುರುತಿಸಲಾಗಿದೆ. ಖಿನ್ನತೆಗೆ ಒಳಗಾದ ಮಹಿಳೆಯು ಕಳೆದ ಒಂದು ವಾರದಿಂದಲೂ ಭಾಗ್ಯನಗರದ ಹಿರೇಹಳ್ಳದ ದಡದಲ್ಲಿರುವ ಕರಿಬಸವೇಶ್ವರ ದೇವಸ್ಥಾನದಲ್ಲಿಯೇ ಭರಮಮ್ಮ ಆಶ್ರಯ ಪಡೆದಿದ್ದಳು.
ತಡರಾತ್ರಿಯಿಂದಲೇ ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಬಿಡುಗಡೆ ಮಾಡಿದ್ದು, ಬೆಳಿಗ್ಗೆ ಹೊತ್ತಿಗೆ ಹಳ್ಳದ ಎರಡು ದಂಡೆಯ ಮೇಲೆ ನೀರು ಹರಿಯುತ್ತಿದ್ದವು. ಸೀರೆ ಹಿಂಡಿಕೊಂಡು ಬರುವ ನೆಪದಲ್ಲಿ ಹಳ್ಳದ ದಡಕ್ಕೆ ತೆರಳಿದ ಮಹಿಳೆ, ಸೀರೆ ಬಿಟ್ಟು ಏಕಾಏಕಿ ಶನಿವಾರ ಬೆಳಿಗ್ಗೆ ಸಮಾರು ೧೧.೩೦ಕ್ಕೆ ತುಂಬಿ ಹರಿಯುತ್ತಿದ್ದ ಹಿರೇಹಳ್ಳಕ್ಕೆ ಹಾರಿದ್ದಾಳೆ. ಹಳ್ಳದಲ್ಲಿ ಸ್ವಲ್ಪ ದೂರ ಕೊಚ್ಚಿಹೋಗಿ, ಮುಳ್ಳುಕಂಟಿಗಳಲ್ಲಿ ಸಿಲುಕಿದ್ದಾಳೆ. ಸುತ್ತಮುತ್ತಲಿನಲ್ಲಿದ್ದ ಯುವಕರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಮಗನನ್ನು ಕರೆಯಿಸಿ, ಮತ್ತೆ ಕರಿಬಸವೇಶ್ವರ ದೇವಸ್ಥಾನದಲ್ಲಿ ಇರಿಸಿದ್ದಾರೆ.