For the best experience, open
https://m.samyuktakarnataka.in
on your mobile browser.

ಹುಟ್ಟುವ ಮೊದಲೇ ಗುಣ ಹುಟ್ಟಿರುತ್ತದೆ

08:05 AM Feb 20, 2024 IST | Samyukta Karnataka
ಹುಟ್ಟುವ ಮೊದಲೇ ಗುಣ ಹುಟ್ಟಿರುತ್ತದೆ

ಪರಮಾತ್ಮ ಮೂಲ ಬೆಳಕು. ಇದರಿಂದ ಬೆಳಕಿನ ಕಿಡಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಪ್ರತಿಯೊಂದು ಕಿಡಿಯೂ ಒಂದೊಂದು ಆತ್ಮ. ಆತ್ಮಕ್ಕೆ ಪ್ರಥಮವಾಗಿ ಕಲ್ಲಿನ ಜನ್ಮ. ನಿಸರ್ಗದಿಂದ ಕಲ್ಲಿಗೆ ಜ್ಞಾನ ವರ್ಗಾವಣೆಯಾಗುತ್ತಾ ಬಂದಂತೆ ಗಿಡ, ಮರ, ಪ್ರಾಣಿ, ಮನುಷ್ಯ ಜನ್ಮಗಳಲ್ಲಿ ಹಾದುಬಂದು ಸತತ ಸಾಧನೆಯಿಂದ ಮುಂದೊಂದು ದಿನ ಆತ್ಮರೂಪಿ ಸಂತರಾಗಿ, ಮುಂದೆ ದೇವತೆಗಳಾಗುತ್ತಾರೆ. ಯಾರಿಗೂ ಯಾವುದೇ ರೂಪದಲ್ಲೂ ತೊಂದರೆಯಾಗಬಾರದು ಎಂಬಷ್ಟು ಸೂಕ್ಷ್ಮವಾಗಿರುವವರನ್ನು 'ಆತ್ಮರೂಪಿ ಸಂತರು' ಎನ್ನುತ್ತಾರೆ. ಹೀಗೆ ಮನುಷ್ಯನಾಗಿ ಹುಟ್ಟಿದವನಿಗೆ ಸಾಧನೆಯಿಂದ ಮುಂದೆ ದೇವತೆಯಾಗುವ ಅವಕಾಶ ಪ್ರತಿಯೊಬ್ಬರಿಗೂ ಇದೆ. ಆತ್ಮರೂಪಿ ಸಂತರಾದ ಮೇಲೆ ಪುನರ್ಜನ್ಮವಿಲ್ಲ. ಸಂತರೂಪಿ ಆತ್ಮಗಳಾದ ರಾಘವೇಂದ್ರ ಸ್ವಾಮಿಗಳು, ರಮಣ ಮಹರ್ಷಿಗಳು, ಸಾಯಿಬಾಬಾ ಮುಂತಾದವರು ನಮ್ಮ ಯೋಚನಾ ತರಂಗಗಳಿಗೆ ಸನಿಹದಲ್ಲಿರುವುದರಿಂದ ಬಹುಬೇಗನೇ ಅನುಗ್ರಹಮಾಡುತ್ತಾರೆ. ಪ್ರತಿಯೊಂದು ಜೀವಿಗೂ ಮೋಕ್ಷ ಕಟ್ಟಿಟ್ಟ ಬುತ್ತಿ. ಜನ್ಮ ಜನ್ಮಾಂತರದ ಸಂಸ್ಕಾರಗಳಿಂದ ಪ್ರತಿಯೊಂದು ಜೀವಿಯೂ ಮಾನವನಾಗಿ ಹುಟ್ಟಿ, ಬದುಕಿ ಕಾಲಾಂತರದಲ್ಲಿ ದೇವತಾಸ್ವರೂಪಿಯಾಗುತ್ತಾನೆ. ರಾಮ, ಕೃಷ್ಣ ಯಾರೇ ಇರಲಿ ಕರ್ಮಶೇಷವಿದ್ದಾಗ ಭೂಮಿಯಲ್ಲಿ ಜನ್ಮವೆತ್ತಲೇಬೇಕು. ಭೂಮಿ ಮೇಲೆ ಹುಟ್ಟಿದ್ದಾರೆಂದ ಮೇಲೆ ಕರ್ಮದ ಹೊರೆ ಇದ್ದೇ ಇರುತ್ತದೆ.
ಮನುಷ್ಯ ಸರ್ವಾಂತರ್ಯಾಮಿಯಾದ ಆತ್ಮ ಎಂಬುದನ್ನು ನಿರೂಪಿಸುವ ವೈಜ್ಞಾನಿಕ ಸತ್ಯ - 'ಆಕಾಶವಾಣಿ' ಮತ್ತು 'ದೂರದರ್ಶನ.' ಬಹುದೂರದಲ್ಲಿರುವ ಜನರ ಧ್ವನಿಯನ್ನೂ, ದೃಶ್ಯವನ್ನೂ ಜನರ ಬಳಿಗೆ ತತ್‌ಕ್ಷಣವೇ ತಂದುಕೊಡುತ್ತದೆ. "ಲಾ ಆಫ್ ಅಟ್ರಾಕ್ಷನ್"ನಲ್ಲಿ ಹೇಳಿದ ಎಲ್ಲಾ ವಿಚಾರಗಳೂ ಭಗವದ್ಗೀತೆಯಲ್ಲಿವೆ. ಭಗವದ್ಗೀತೆಗಿಂತ ಮೊದಲು 'ಶಿವಸೂತ್ರ'ದಲ್ಲಿ ೧೧೨ ಸೂತ್ರಗಳಲ್ಲಿ ವಿವರಿಸಲಾಗಿದೆ. ಹೊಸದಾಗಿ ಕಂಡುಹಿಡಿಯಲು ಏನೂ ಉಳಿದಿಲ್ಲ. ನಮ್ಮ ವ್ಯಕ್ತಿತ್ವದ ಅಧ್ಯಾತ್ಮದ ಆಯಾಮದ ಅರಿವಿಲ್ಲದೇ ಇರುವುದೇ ನಮ್ಮೆಲ್ಲಾ ಸಮಸ್ಯೆಗಳಿಗೆ ಕಾರಣ. ಜೀವನದಲ್ಲಿ ಏಕೆ ಬದುಕಬೇಕು ಎಂದರಿತ ವ್ಯಕ್ತಿಗೆ ಹೇಗೆ ಬದುಕಬೇಕು ಎಂಬುದರ ಕುರಿತಾಗಿ ಅರಿಯುವುದು ಕಷ್ಟಸಾಧ್ಯವೇನಲ್ಲ. ಒಂದು ಸಣ್ಣ ವಿದ್ಯುದ್ದೀಪದ ಬುರುಡೆ ಮಿತಿಮೀರಿದ ವಿದ್ಯುದ್ಬಲವನ್ನು ಭರಿಸದೆ ಹೇಗೆ ಒಡೆದು ಚೂರಾಗುತ್ತದೆಯೋ ಹಾಗೆ ಬ್ರಹ್ಮಾಂಡಶಕ್ತಿಯನ್ನು ಭರಿಸಲು ನಮ್ಮ ನರಗಳು ಸಿದ್ಧವಾಗಬೇಕು. ನಾವು ಹುಟ್ಟುವ ಮೊದಲೇ ಗುಣ ಹುಟ್ಟಿರುತ್ತದೆ; ಅವು ನಮ್ಮ ಮೈಸೇರಿ ತಲೆ ಏರಿ ಬೆಳೆಯುತ್ತದೆ. ದೇಹವು ತನ್ನ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಆತ್ಮವು ಬ್ರಹ್ಮಾಂಡದ ಅಗಾಧ ಕುಹರಗಳ ಮೇಲೆ ವ್ಯಾಪಿಸಿರಬೇಕು.
ನಿಸರ್ಗದಲ್ಲಿರುವ ಕೋಟ್ಯಂತರ ಶಕ್ತಿಗಳನ್ನು (ದೇವತೆಗಳನ್ನು) ಗುರುತಿಸಿ ಅವರಿಂದಾಗುವ ಪ್ರಯೋಜನ ಮತ್ತು ಬಳಸುವ ವಿಧಾನಗಳನ್ನು ಶಾಸ್ತ್ರಿಯವಾಗಿ ಕ್ರಮಬದ್ಧಗೊಳಿಸಿದ್ದು ಹಿಂದೂಧರ್ಮ. ಇವನ್ನೇ ಭಾರತೀಯ ಚಿಂತನಾಕ್ರಮದಲ್ಲಿ "೩೩ ಕೋಟಿ ದೇವತೆಗಳು" ಎನ್ನುವುದು! ದೇವರು ಒಂದೇ ಅಲ್ಲ. ಹಾಲು; ಹಾಲಿನಿಂದ ಮೊಸರು; ಮೊಸರಿನಿಂದ ಬೆಣ್ಣೆ; ಬೆಣ್ಣೆಯಿಂದ ತುಪ್ಪ - ಎಲ್ಲದರ ಮೂಲ ಹಾಲೇ. ಆದರೆ ಉತ್ಪನ್ನವಾಗಿ ಪರಿವರ್ತನೆಯಾದಾಗ ಪ್ರತೀ ಉತ್ಪನ್ನದ ಮೌಲ್ಯ ಬೇರೆ ಬೇರೆ. ಹಾಗೆಯೇ ದೇವರೂ ಕೂಡಾ. ಮೂಲಕ್ಕಿಂತ ಅಂತಿಮ ಉತ್ಪನ್ನ ಮುಖ್ಯ.
ನಿಸರ್ಗ ನಿಯಮಗಳನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಸಾಧನೆಮಾಡುತ್ತಾ ಬಂದಂತೆ 'ಪವಾಡಪುರುಷ'ರಾಗುತ್ತಾರೆ. ಇದು ರೇಕಿಯಿಂದ ಸುಲಭವಾಗಿ ಸಾಧ್ಯವಾಗುತ್ತದೆ. ನ್ಯೂಟನ್ನಿಗಿಂಥ ಮೊದಲು ಕೂಡಾ ಸೇಬುಹಣ್ಣು ಮರದಿಂದ ಕೆಳಕ್ಕೆ ಬೀಳುತ್ತಿತ್ತು. ಅದು ನಿಸರ್ಗ ನಿಯಮ. ಸೇಬುಹಣ್ಣಿಗೆ ನ್ಯೂಟನ್ ಗೊತ್ತಿಲ್ಲ; ವಿಜ್ಞಾನ ಗೊತ್ತಿಲ್ಲ. ರೇಕಿ ಮಾಡುತ್ತಾ ಹೋದಂತೆ ಒಂದೊಂದೇ ವಿಚಾರಗಳು ಅರ್ಥವಾಗಿ ಸರಿಯಾದ ಜ್ಞಾನ ಪ್ರಾಪ್ತಿಯಾಗುತ್ತದೆ. ಜ್ಞಾನದಿಂದ ಸ್ಪಷ್ಟತೆ ಬಂದಂತೆ ನಮಗೆ ಅನುಕೂಲಕರವಾಗಿ ಪರಿಣಮಿಸುತ್ತದೆ. ವಿಷಯಗಳು ಸ್ಪಷ್ಟವಾದಂತೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿನಲ್ಲಿ ಗೊಂದಲ ಕಡಿಮೆಯಾಗುತ್ತದೆ. ಚಕ್ರಗಳು, ನಾಡಿಗಳು ಜಾಗೃತವಾಗಬೇಕು. ಈ ಜಾಗೃತಿ ರೇಕಿಯಿಂದ ಸಾಧ್ಯವಾಗುತ್ತದೆ. ದೇವಸ್ಥಾನಗಳಿಗೆ ಹೋದಾಗ ಶಾಂತಮನಸ್ಸಿನಿಂದ ಕೆಲವು ನಿಮಿಷ ಕುಳಿತಾಗ ರೇಕಿಯಿಂದ ನಾಡಿಗಳು, ಚಕ್ರಗಳು ಸಕ್ರಿಯವಾಗಿ ಕಂಪನದ ಅನುಭವ ಉಂಟಾಗುತ್ತದೆ.
ದೇವರ ನಾಮಸ್ಮರಣೆ ನಂಬಿಕೆಯೇ? ವಿಜ್ಞಾನವೇ? ಉತ್ತರ: ನಂಬಿಕೆ. ಮನಸ್ಸನ್ನು ನಾವಾಗಿಯೇ ಪ್ರಶಾಂತವಾಗಿರಿಸಲು ಸಾಧ್ಯವಿಲ್ಲ. ನಾಮಸ್ಮರಣೆ ಮಾಡುತ್ತಾ ಬಂದಂತೆ ಕಂಪನಗಳ ಲಯಬದ್ಧತೆಯ ಕಾರಣವಾಗಿ ಮನಸ್ಸು ತನ್ನಿಂತಾನೇ ಶಾಂತವಾಗುತ್ತದೆ. ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಮನಸ್ಸು ಶಾಂತವಾಗಿರಬೇಕು. ಮನಸ್ಸನ್ನು ಶಾಂತಗೊಳಿಸುವ ಶಕ್ತಿ ರೇಕಿಗಿದೆ. ಶಾಂತತೆಯಿಂದ ಯೋಚನಾವಿಧಾನ ಬದಲಾಗಿ, ಈ ಬದಲಾವಣೆಯಿಂದ ಪ್ರಜ್ಞೆಯುಂಟಾಗಿ, ಪ್ರಜ್ಞೆಯಿಂದ ಜ್ಞಾನ ವೃದ್ಧಿಯಾಗಿ, ಜ್ಞಾನದಿಂದ ಕರ್ಮ ಸುಡಲ್ಪಟ್ಟು, ಸಮಸ್ಯೆ ಪರಿಹಾರವಾಗುತ್ತದೆ. ಇದೊಂದು ಪ್ರಕ್ರಿಯೆ. ಭಗವದ್ಗೀತೆಯ ೪ನೇ ಅಧ್ಯಾಯದಲ್ಲಿ; ಕೃಷ್ಣ ಹೇಳಿದ್ದ - "ಜ್ಞಾನದ ಪ್ರಖರತೆಯಿಂದ ಕರ್ಮ ಸುಡುತ್ತದೆ." ನಿಸರ್ಗದ ಶಕ್ತಿಗಳಿಗೆ ನಮ್ಮ ದೇಹ ಸ್ಪಂದಿಸುವಂತೆ ಮಾಡುವ ವಿದ್ಯೆಯೇ ರೇಕಿ. ಕೆಲಸವಿಲ್ಲದೆ ಖಾಲಿ ಕೂತಾಗ ಬರುವ ವಿಚಾರಗಳಿಗೆ ಲಯಬದ್ಧತೆ ಇರುವುದಿಲ್ಲ. ಶ್ಲೋಕ, ಮಂತ್ರಪಠಣದಿಂದ ಲಯಬದ್ಧ ಕಂಪನಗಳುಂಟಾಗಿ ಮನಸ್ಸು ಶಾಂತವಾಗುತ್ತದೆ. ಶಾಂತತೆಯಿಂದ ಬ್ರಹ್ಮಜ್ಞಾನ ಪ್ರಾಪ್ತಿ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವಂತೆ; "ಬ್ರಹ್ಮಜ್ಞಾನದ ಮುಂದೆ ವೇದಜ್ಞಾನ ಕೆರೆಗೆ ಸಮ."
ಕರ್ಮವಿರುವುದು ಅಜ್ಞಾನದಲ್ಲಿ; ಅಜ್ಞಾನ ಕಳೆಯುವುದು ಜ್ಞಾನದಿಂದ. ನೋವು/ಕಾಯಿಲೆಗೆ ಮೂಲ; ಕರ್ಮ. ನಿಸರ್ಗನಿಯಮ ಮೀರಿ ತಮ್ಮದೇ ಬುದ್ಧಿವಂತಿಕೆಯಿಂದ ನಡೆಯುವುದು ಕರ್ಮದ ಮೂಲ; ಅಂದರೆ ಅಜ್ಞಾನ. ನಿಸರ್ಗನಿಯಮಕ್ಕೆ ಹತ್ತಿರವಾಗುವುದು ಜ್ಞಾನ. ಜ್ಞಾನ ಜ್ಞಾನಿಯ ಲಕ್ಷಣ. ನೋವುನಿವಾರಕ ಗುಳಿಗೆಗಳು ಜ್ಞಾನಭರಿತವಲ್ಲ. ರೇಕಿ ಕಿರಣಗಳಲ್ಲಿ ಪ್ರಜ್ಞೆ ಅಡಗಿದ್ದು ನಮ್ಮಲ್ಲಿ ಪ್ರಜ್ಞೆಯೊಂದಿಗೆ ಜ್ಞಾನವುಂಟಾಗಿ, ಜ್ಞಾನದಿಂದ ಕರ್ಮ ಕಳೆದುಕೊಂಡು ನೋವು/ಕಾಯಿಲೆ ಗುಣವಾಗುತ್ತದೆ. ಮರೆಯುವ ಗುಣ ವರವಾದರೆ; ನೆನಪಿನ ಗುಣ ಶಾಪ. ಈ ನೆನಪೇ ಕಾಯಿಲೆಗಳ ಮೂಲ. ಸುಮ್ಮನೆ ನೆನಪಿಟ್ಟುಕೊಂಡರೆ ಮಾಹಿತಿ; ಅರ್ಥವಾದಾಗ ಜ್ಞಾನ; ಜ್ಞಾನದಿಂದ ಅರಿವು; ಅರಿವಿನಿಂದ ಅನುಭವ; ಅನುಭವದಿಂದ ನಂಬಿಕೆ; ನಂಬಿಕೆಯಿಂದ ವಿವೇಕ. ಅನಗತ್ಯ ಮಾಹಿತಿ/ನೆನಪು ಏನಿದೆ ಅದು ಅಳಿಸುತ್ತಾ ಹೋದಂತೆ ಕರ್ಮದ ಪ್ರಮಾಣ ಕಡಿಮೆಯಾಗುತ್ತದೆ. ಅಳಿಸಿಹಾಕುವ ಕೆಲಸ ರೇಕಿಯಲ್ಲಿ ಹಸ್ತಕ್ರಮ ಮಾಡುತ್ತದೆ. ನಮ್ಮ ದೇಹ ಉನ್ನತಮಟ್ಟದ ಶಕ್ತಿಗಳಿಗೆ ಸ್ಪಂದಿಸುವ ಶಕ್ತಿ ನಿಧಾನವಾಗಿ ವೃದ್ಧಿಯಾಗಬೇಕು; ಇದು ರೇಕಿಯಿಂದ ಸಾಧ್ಯ.
ಜ್ಯೋತಿಷ್ಯದಲ್ಲಿ ನಂಬಿಕೆ. ಅದು ನಂಬಿಕೆಯ ಪ್ರಶ್ನೆಯಲ್ಲ. ಯಾವುದೇ ವಿಷಯದಲ್ಲಿ ಯಾರೇ ಆದರೂ ತಳೆಯಬೇಕಾದ ವೈಜ್ಞಾನಿಕದೃಷ್ಟಿಯೆಂದರೆ 'ಅದು ಸತ್ಯವೇ' ಎಂದು ತಿಳಿಯುವುದು. ಗುರುತ್ವಾಕರ್ಷಣದ ನಿಯಮ ನ್ಯೂಟನ್ನಿಗಿಂತ ಮುಂಚೆಯೂ ಹಾಗೆಯೇ ಇತ್ತು. ಮಾನವನ ನಂಬಿಕೆಯ ಅನುಮೋದನೆಯಿಲ್ಲದೆ ಬ್ರಹ್ಮಾಂಡದ ನಿಯಮಾವಳಿ ಕಾರ್ಯಮಾಡಲಾಗದಿದ್ದರೆ ವಿಶ್ವವು ಸಾಕಷ್ಟು ಗೊಂದಲಮಯವಾಗಿಯೇ ಇರುತ್ತಿತ್ತು. ಜಾತಕದಲ್ಲಿನ ನಕ್ಷತ್ರದ ಗುಣಧರ್ಮಗಳು (ಜನ್ಮನಕ್ಷತ್ರ) ವ್ಯಕ್ತಿತ್ವದ ಭಾಗವಾಗುತ್ತವೆ. ಸಂಬಂಧಿತ ನಕ್ಷತ್ರದಿಂದ ಬರುವ ಕಿರಣಗಳಿಗೆ ವ್ಯಕ್ತಿ ಸಮನಾಗಿ ಸ್ಪಂದಿಸುತ್ತಾನೆ. ರಾಜಕ್ರಿಯೆಯಿಂದ ಜನ್ಮನಕ್ಷತ್ರದ ನ್ಯೂನತೆಗಳನ್ನು, ದೋಷಗಳನ್ನು ಸರಿಪಡಿಸಬಹುದು.
ವಿದ್ಯುಚ್ಛಕ್ತಿ ಅಥವಾ ಗುರುತ್ವಾಕರ್ಷಣ ಶಕ್ತಿಯಂತೆಯೇ ಭಾವನೆಯೂ ಒಂದು ಶಕ್ತಿ. ಪರಮಾತ್ಮನ ಸರ್ವಶಕ್ತ ಪ್ರಜ್ಞೆಯ ಒಂದು ಕಿಡಿ ಮನಸ್ಸು. ಮನಸ್ಸು ತೀವ್ರತರವಾಗಿ ಏನೆಲ್ಲವನ್ನೂ ನಂಬಿಕೊಳ್ಳುತ್ತದೋ ಅದು ಆ ಕೂಡಲೇ ನಡೆದುಹೋಗುತ್ತದೆ. ಸೃಷ್ಟಿಯೆಲ್ಲವೂ ನಿಯಮಬದ್ಧವಾದುದು. ಹೊರವಿಶ್ವದಲ್ಲಿ ಕಾರ್ಯಪ್ರವೃತ್ತವಾದ, ವಿಜ್ಞಾನಿಗಳಿಂದ ಸಂಶೋಧಿಸಲ್ಪಡಬಹುದಾದ ನಿಯಮಗಳು ಪ್ರಕೃತಿಸಹಜ ನಿಯಮಗಳೆನ್ನಿಸಿಕೊಳ್ಳುತ್ತವೆ. ಆದರೆ ಸುಪ್ತವಾದ ಅಧ್ಯಾತ್ಮಿಕ ಸ್ತರಗಳನ್ನು ಮತ್ತು ಪ್ರಜ್ಞೆಯ ಅಂತಃಸಾಮ್ರಾಜ್ಯವನ್ನು ಆಳುವುದಕ್ಕೆ ಸೂಕ್ಷ್ಮತರವಾದ ನಿಯಮಗಳಿವೆ. ಈ ನಿಯಮಗಳನ್ನು ಯೋಗವಿಜ್ಞಾನದ ಮೂಲಕ ತಿಳಿಯುವುದಕ್ಕೆ ಸಾಧ್ಯ. ಭೌತದ್ರವ್ಯದ ನಿಜಸ್ವರೂಪವನ್ನು ತಿಳಿದುಕೊಳ್ಳುವವನು ಆತ್ಮಸಾಕ್ಷಾತ್ಕಾರ ಪಡೆದ ಸಿದ್ಧನೇ ಹೊರತು ಭೌತವಿಜ್ಞಾನಿಯಲ್ಲ.