ಹುಡುಗಾಟಿಕೆ ಆರೋಪಕ್ಕೆ ರೀಯಾಕ್ಷನ್ ಇರಲ್ಲ
ವಿಜಯಪುರ: ನಾನಾಗಲಿ, ಪಕ್ಷದ ಮುಖಂಡರಾಗಿಲಿ ಕೇಂದ್ರಕ್ಕೆ ಹೋಗಿ ಯಾರ ಬಗ್ಗೆಯೂ ಚಾಡಿ ಹೇಳುವುದಾಗಲಿ, ದೂರು ನೀಡುವುದಾಗಲಿ ಮಾಡಿಲ್ಲ, ಶಿಸ್ತು ಕ್ರಮಕ್ಕೆ ಒತ್ತಾಯಿಸಿಲ್ಲ ಅದರ ಅವಶ್ಯಕತೆ ನಮಗಿಲ್ಲ. ಆದರೆ ಮುಂದೆ ಸಂದರ್ಭ ಹೇಗೆ ಸೃಷ್ಟಿಯಾಗುತ್ತೆ ಅದರ ಮೇಲೆ ಕೇಂದ್ರ ವರಿಷ್ಠರು ತಿರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್.ವಿಜಯೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ, ವಯಸ್ಸಿನಲ್ಲಿ ಚಿಕ್ಕವನಾದರೂ ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕರ್ತವ್ಯ ನನ್ನದು. ಯಶಸ್ವಿಯಾಗಿ ಮಾಡುವ ಅಚಲ ವಿಶ್ವಾಸ ನನಗಿದೆ ಎಂದು ಹೇಳಿದರು.
ಹೊಸ ವರ್ಷದ ಹೊಸ್ತಿಲ್ಲಿ ನಾವಿದ್ದೇವೆ. ಎಲ್ಲ ಹಳೆಯ ವಿಚಾರಗಳನ್ನು ಬದಿಗಿಟ್ಟು ಎಲ್ಲರ ವಿಶ್ವಾಸ ತೆಗೆದುಕೊಂಡು ಮುನ್ನಡೆಯುತ್ತೇನೆ. ನಾನು ಇಟ್ಟ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಮತ್ತೇ ಮೋದಿ ಅವರನ್ನು ಪ್ರಧಾನಿ ಮಾಡಬೇಕು. ಯಾವುದೇ ಆರೋಪದಲ್ಲಿ ಗಂಭೀರತೆ ಇದ್ದರೆ, ಉತ್ತರಿಸಬೇಕು. ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಯತ್ನಾಳ ಮಾಡಿರುವ ಕೋವಿಡ್ ಸ್ಕ್ಯಾಮ್ ಆರೋಪ ಸತ್ಯಕ್ಕೆ ದೂರವಾದದ್ದು, ಹುಡುಗಾಟಿಕೆ ಆರೋಪಗಳಿಗೆ ರೀಯಾಕ್ಷನ್ ಇಲ್ಲ. ಯಡಿಯುರಪ್ಪ ಅವರ ಮೇಲೆ ಯಾವುದೇ ಅನುಕಂಪ ಇಲ್ಲದೆ ತನಿಖೆ ಮಾಡಲಿ. ಆರೋಪ ಮಾಡಿದವರು ದಾಖಲೆ ಕೊಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಟಾಂಗ್ ನೀಡಿದರು.