For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿಗೆ ಅಮಿತ್ ಶಾ ಭೇಟಿ: ವಾಹನ ಸಂಚಾರ ಮಾರ್ಗ ಬದಲಾವಣೆ

09:42 PM Apr 30, 2024 IST | Samyukta Karnataka
ಹುಬ್ಬಳ್ಳಿಗೆ ಅಮಿತ್ ಶಾ ಭೇಟಿ  ವಾಹನ ಸಂಚಾರ ಮಾರ್ಗ ಬದಲಾವಣೆ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪರ ಸಾರ್ವಜನಿಕ ಪ್ರಚಾರ ಸಭೆ ನೆಹರು ಮೈದಾನದಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೆಹರು ಮೈದಾನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೯ ರವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಯಾವ ವಾಹನ ಎಲ್ಲಿ ಸಾಗಬೇಕು?

ಗದಗ ಕಡೆಯಿಂದ ಬರುವ ವಾಹನಗಳು
ಗದಗ ಕಡೆಯಿಂದ ಮತ್ತು ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ಕೆ.ಎಸ್.ಆರ್.ಟಿಸಿ ಬಸ್‌ಗಳು ಆರ್.ಪಿ.ಎಫ್ ಕಚೇರಿ ಹತ್ತಿರ ನಿಲ್ಲಿಸಿ ಮರಳಿ ಗದಗ ರಸ್ತೆ ಮೂಲಕ ಸಂಚರಿಸಬೇಕು. ಕಾರ್ ಮತ್ತು ದ್ವಿಚಕ್ರ ವಾಹನಗಳನ್ನು ಪಿಂಟೋ ವೃತ್ತದ ಮೂಲಕ ದೇಸಾಯಿ ಕ್ರಾಸ್ ಮೂಲಕ ಕಾಟನ್ ಮಾರ್ಕೇಟ್ ಮೂಲಕ ಹೊಸೂರ ಕ್ರಾಸ್‌ಗೆ ಸಂಚರಿಸುವಂತೆ ಅವಕಾಶ ಕಲ್ಪಿಸಲಾಗಿದೆ.

ನವಲಗುಂದ ಕಡೆಯಿಂದ ಬರುವ ವಾಹನಗಳು
ನವಲಗುಂದ ಕಡೆಯಿಂದ ಬರುವ ಸಾರಿಗೆ ಸಂಸ್ಥೆ ಬಸ್‌ಗಳು ಸರ್ವೋದಯ ವೃತ್ತದಲ್ಲಿ ನಿಲ್ಲಿಸಿ ಮರಳಿ ನವಲಗುಂದ ಕಡೆಗೆ ಸಂಚರಿಸಬೇಕು. ಲಘು ವಾಹನಗಳನ್ನು ಕಾಟನ್ ಮಾರ್ಕೆಟ್ ಮೂಲಕ ಹೊಸೂರು ವೃತ್ತದ ಕಡೆಗೆ ಸಾಗಲು ಅವಕಾಶ ಕಲ್ಪಿಸಲಾಗಿದೆ.

ಕಾರವಾರ ಕಡೆಯಿಂದ ಬರುವ ವಾಹನಗಳು
ಕಾರವಾರ ರಸ್ತೆಯಿಂದ ಬರುವ ವಾಹನಗಳನ್ನು ಕಾರವಾರ ರಸ್ತೆ ಪ್ಲಾಜಾದಿಂದ ತಾರಿಹಾಳ ಮಾರ್ಗವಾಗಿ ಗೋಕುಲ ರಸ್ತೆ ಮೂಲಕ ಹೂಸೂರ ವೃತ್ತದ ಮೂಲಕ ಸಂಚರಿಸಬಹುದು. ಬೆಂಗಳೂರು ಕಡೆಯಿಂದ ಧಾರವಾಡ ಕಡೆಗೆ ಹೋಗುವ ವಾಹನಗಳನ್ನು ಕಮರಿಪೇಟ್ ಪೊಲೀಸ್ ಠಾಣೆ ಹತ್ತಿರ ಎಡಗಡೆಯಿಂದ ತೋರವಿ ಹಕ್ಕಲ ಎಂ.ಟಿ.ಮಿಲ್, ವಾಣಿ ವಿಲಾಸ ಕ್ರಾಸ್ ಮುಖಾಂತರ ಹೂಸೂರ ಸರ್ಕಲ್‌ಗೆ ಬಂದು ಸೇರಿ ಅಲ್ಲಿಂದ ಧಾರವಾಡ ಕಡೆಗೆ ಹೋಗಲು ಬಿಡಲಾಗುವುದು.

ಭಾರಿ ವಾಹನಗಳಿಗೆ ಮಧ್ಯಾಹ್ನ ೧ರಿಂದಲೇ ನಿರ್ಬಂಧ
ಎಲ್ಲಾ ರಸ್ತೆಗಳಿಂದ ಹುಬ್ಬಳ್ಳಿ ಶಹರ ಪ್ರವೇಶಿಸುವ ಭಾರಿ ವಾಹನಗಳ ಸಂಚಾರವನ್ನು ೧ರಿಂದ ರಾತ್ರಿ ೯ರವರೆಗೆ ನಿರ್ಭಂದಿಸಿದ್ದು, ಭಾರಿ ವಾಹನಗಳು ಕಡ್ಡಾಯವಾಗಿ ಬೈಪಾಸ್, ರಿಂಗ್ ರಸ್ತೆಗಳನ್ನು ಉಪಯೋಗಿಸಿಕೊಂಡು ಸಂಚರಿಸಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ ವೃತ್ತ, ವೀರ ಸಂಗೊಳ್ಳಿ ರಾಯಣ್ಣ ವೃತ್ತ, ಚಿಟಗುಬ್ಬಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಸ್ಟೇಷನ್ ರಸ್ತೆ, ಕೂಪ್ಪೀಕರ್ ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳು ಮಧ್ಯಾಹ್ನ ೩ ರಿಂದ ರಾತ್ರಿ ೯ ರವರೆಗೆ ಪರ್ಯಾಯ ಮಾರ್ಗದ ರಸ್ತೆಗಳನ್ನು ಉಪಯೋಗಿಸಲು ಪ್ರಕಟಣೆ ತಿಳಿಸಿದೆ.

ತಾತ್ಕಾಲಿಕ ಬಸ್ ನಿಲ್ದಾಣಗಳ ವಿವರ (ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ಸುಗಳಿಗೆ)
ಗದಗ ರೋಡ್‌ಗೆ ( ಗದಗ ರೋಡ್ ಅಂಡರ್ ಬ್ರಿಡ್ಜ್), ನವಲಗುಂದ ರೋಡ್‌ಗೆ ( ಸರ್ವೋದಯ ಸರ್ಕಲ್ ಹತ್ತಿರ), ಬೆಂಗಳೂರು ರೋಡ್‌ಗೆ ( ಗಬ್ಬೂರ ಸರ್ಕಲ್ ಹತ್ತಿರ), ಧಾರವಾಡ ರೊಡ್‌ಗೆ (ಹೊಸೂರು ಬಸ್ ನಿಲ್ದಾಣ ಹತ್ತಿರ ), ಕಾರವಾರ ರೋಡ್‌ಗೆ ( ಕಾರವಾರ ರೋಡ್ ಅಂಡರ್ ಬ್ರಿಡ್ಜ್ ಹತ್ತಿರ).
ವಾಹನ ಪಾರ್ಕಿಂಗ್ ಸ್ಥಳಗಳು
ಎಂ.ಟಿ ಮಿಲ್ ಗಿರಣಿ ಚಾಳ ಮೈದಾನ, ಎಂ.ಟಿ ಮಿಲ್ ಗ್ರೌಂಡ, ರಾಯ್ಕರ್ ಮೈದಾನ, ಗದಗ ರಸ್ತೆ ಚಿಲ್ಲಿ ಮೈದಾನ, ರೈಲ್ವೆ ಸ್ಟೇಶನ್ ಆವರಣ, ಮೂರುಸಾವಿರಮಠ ಆವರಣ, ಹಳೇ ಹುಬ್ಬಳ್ಳಿ ಅಂಬೇಡ್ಕರ್ ಮೈದಾನ