For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಗುಂಡಿನ ಸದ್ದು

09:15 AM Aug 02, 2024 IST | Samyukta Karnataka
ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಗುಂಡಿನ ಸದ್ದು

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಫರ್ಹಾನ್ ಕಾಲಿಗೆ ಗುಂಡು ಹಾರಿಸಿದ ಘಟನೆ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಪೋಲಿಸರು ಮತ್ತೊಂದು ಪ್ರಕರಣದಲ್ಲಿ ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್ ಮಾಡಿದ್ದಾರೆ.
ಹುಬ್ಬಳ್ಳಿಯ ಉಪನಗರ ಠಾಣೆಯ ಇನ್ ಸ್ಪೆಕ್ಟರ್ ಎಂ.ಎಸ್. ಹೂಗಾರ ಅವರೇ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚನ್ನಮ್ಮ ವೃತ್ತದ ಬಳಿ ಚೈನು, ಉಂಗುರು, ಫೋನ್ ಹಾಗೂ ಹಣ ದರೋಡೆ ಪ್ರಕರಣ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪನಗರ ಠಾಣೆಯ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಆರೋಪಿ ಅರುಣ ನಾಯಕ್ ಎಂಬಾತನನ್ನು ಬಂಧಿಸಿದ್ದಾರೆ.
ಅದರಂತೆ ಹೆಚ್ಚಿನ ವಿಚಾರಣೆ ನಡೆಸಿದಾಗ ಮತ್ತೆ ಕೆಲವರು ಭಾಗಿಯಾಗಿರುವ ಮಾಹಿತಿ ನೀಡುತ್ತೇನೆಂದು ಎಂಟಿಎಸ್ ಕಾಲನಿಗೆ ಅರುಣ್ ಕರೆದುಕೊಂಡು ಹೋಗಿದ್ದಾನೆ.‌
ಈ ವೇಳೆ ಆರೋಪಿ ಅರುಣ್ ಪೊಲೀಸರ ಗಮನವನ್ನು ಬೇರೆಡೆ ಸೆಳೆದು ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಪೊಲೀಸ್ ಪೇದೆಗಳಾದ ಡಿ.ಆರ್. ಪಮ್ಮಾರ, ತರುಣ ಗೂಡನ್ನವರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಅರುಣ್ ನಾಯಕ್ ಕಾಲಿಗೆ ಇನ್ ಸ್ಪೆಕ್ಟರ್ ಎಂ.ಎಸ್.ಹೂಗಾರ ಗುಂಡು ಹಾರಿಸಿದ್ದಾರೆ. ಪರಿಣಾಮ ಆರೋಪಿ ಕಾಲಿಗೆ ಗಾಯವಾಗಿದ್ದು, ಆತನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ
ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.