For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂತೆಗೆತ, ಅವಸರದ ಕ್ರಮ

02:30 AM Oct 15, 2024 IST | Samyukta Karnataka
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂತೆಗೆತ  ಅವಸರದ ಕ್ರಮ

ಹಳೇಹುಬ್ಬಳ್ಳಿ ಗಲಭೆ ಪ್ರಕರಣಗಳನ್ನು ಹಿಂಪಡೆದುಕೊಂಡಿರುವ ರಾಜ್ಯ ಸರ್ಕಾರದ ಕ್ರಮ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜಕೀಯ ಪ್ರೇರಿತ ಮತ್ತು ಓಲೈಕೆ ಮನೋಭಾವದ ಆಡಳಿತಾತ್ಮಕ ಹೆಜ್ಜೆ ಎಂಬುದಾಗಿ ಪ್ರತಿಪಕ್ಷ ಬಿಜೆಪಿ ವ್ಯಕ್ತಪಡಿಸುತ್ತಿರುವ ಆಕ್ರೋಶಕ್ಕೆ ಸಾರ್ವಜನಿಕ ಧ್ವನಿಯೂ ಸೇರಿದೆ.
ಸರ್ಕಾರ ತೆಗೆದುಕೊಂಡ ನಿರ್ಧಾರ ನ್ಯಾಯಾಲಯದ ಸಮ್ಮತಿ ಮತ್ತು ನಿರ್ದೇಶನಕ್ಕೆ ಒಳಪಟ್ಟಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಅಮಾಯಕರನ್ನು ರಕ್ಷಿಸುವುದು ಪ್ರಕರಣ ಹಿಂಪಡೆದಿರುವುದರ ಉದ್ದೇಶ ಎಂದು ಉಪಮುಖ್ಯಮಂತ್ರಿಗಳು ಹಾಗೂ ನ್ಯಾಯಬದ್ಧ ಚೌಕಟ್ಟಿನಲ್ಲಿಯೇ ಪ್ರಕ್ರಿಯೆ ನಡೆದಿದೆ ಎಂದು ಗೃಹ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಆದಾಗ್ಯೂ, ಅತ್ಯಂತ ಗಂಭೀರ ಸ್ವರೂಪದ ಈ ಪ್ರಕರಣದ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಅನಗತ್ಯ ಮತ್ತು ಅವಸರದ ಕ್ರಮ ಎಂಬ ವಿಶ್ಲೇಷಣೆಗೆ ದಾರಿಯಾಗಿದೆ.
ಹುಬ್ಬಳ್ಳಿ ರಾಜ್ಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಈದ್ಗಾ ವಿವಾದದ ಬೇಗುದಿ ಮತ್ತು ಆಗಾಗ ಕೋಮು ಸಂಘರ್ಷಗಳಿಂದಾಗಿ ನಗರ ಹಣ್ಣಾಗಿದೆ. ತಿಂಗಳುಗಟ್ಟಲೇ ಕರ್ಫ್ಯೂ ಬಿಸಿ ಅನುಭವಿಸಿದೆ.
ಸಾಮಾಜಿಕ ಜಾಲತಾಣವೊಂದರ ಪೋಸ್ಟ್ ಕಾರಣಕ್ಕೆ ೨೦೨೨ರ ಏಪ್ರಿಲ್ ೧೬ರಂದು ನಡೆದ ದಂಗೆ-ಹಿಂಸೆ-ಗಲಭೆಗಳು ಈ ಅನುಭವಕ್ಕೆ ಇತ್ತೀಚಿನ ಸೇರ್ಪಡೆ. ಆದರೆ ಈ ದಂಗೆ ಹಿಂದಿನೆಲ್ಲವುಗಳಿಗಿಂತ ಭಿನ್ನ. ಪೊಲೀಸ್ ಠಾಣೆಯನ್ನು ಗುರಿಮಾಡಿ ಗಲಭೆಕೋರರು ವ್ಯವಸ್ಥಿತವಾಗಿ ಹಿಂಸಾಚಾರಕ್ಕೆ ಇಳಿದ ಪರಿಣಾಮ ಪೊಲೀಸ್ ಮುಖ್ಯಸ್ಥ ಸೇರಿ ಹಲವು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ಮೊದಲ ಬಾರಿಗೆ ಗಲಭೆಕೋರರು ಲಾರಿಗಟ್ಟಲೇ ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಬಳಸಿ ದಂಗೆ ಎಬ್ಬಿಸಲಾಗಿತ್ತು. ಯೋಜಿತ ಹಿಂಸಾಚಾರ ತಾಂಡವವಾಡಿತ್ತು.
ಪೊಲೀಸ್ ಠಾಣೆ, ಜೀಪುಗಳು ಮತ್ತು ಕಾನೂನು ಸುವ್ಯವಸ್ಥೆ ರಕ್ಷಕ ಇಲಾಖೆಯ ಆಸ್ತಿಪಾಸ್ತಿಗಳಿಗೆ ಬೆಂಕಿ ಹಾಕುವ ಯತ್ನ; ಕಾನೂನು ಸುವ್ಯವಸ್ಥೆಗೆ ಭಂಗ ತಂದು ನಗರದ ಶಾಂತಿ ಕದಡುವ ಯತ್ನ; ಕೋಮು ಸಾಮರಸ್ಯ ಭಗ್ನ ಮಾಡಿ ಹುಬ್ಬಳ್ಳಿಯನ್ನು ಮತ್ತೊಮ್ಮೆ ಕೋಮು ದಂಗೆಗಳಿಗೆ ತಳ್ಳುವ ಹುನ್ನಾರಗಳನ್ನು ಈ ದಂಗೆ ಒಳಗೊಂಡಿತ್ತು. ಗಲಭೆಕೋರರ ದುರುದ್ದೇಶ ಸ್ಪಷ್ಟವಾಗಿತ್ತು ಎಂಬುದಾಗಿ ಪೊಲೀಸರು ಹೇಳಿದ್ದರು. ಅಂದಿನ ಬಿಜೆಪಿ ಸರ್ಕಾರ `ಸಾರ್ವಭೌಮತ್ವದ' ಮೇಲಿನ ದಾಳಿ ಎಂದು ಅಭಿಪ್ರಾಯಪಟ್ಟು ಗಂಭೀರವಾಗಿ ಪರಿಗಣಿಸಿತ್ತು. ೧೩೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ, ತೀರ ಮೊನ್ನೆ ಮೊನ್ನೆಯವರೆಗೆ ಬಂಧಿತರಿಗೆ ಜಾಮೀನು ಸಿಕ್ಕಿರಲಿಲ್ಲ. ಈಗ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ.
ಸಾಮಾಜಿಕ ಪೋಸ್ಟಿಂದ ಸಿಟ್ಟಿಗೆದ್ದ ಸಣ್ಣ ಗುಂಪು, ಕೆಲವೇ ಕ್ಷಣಗಳಲ್ಲಿ ಅತೀ ದೊಡ್ಡ ಗುಂಪಾಗಿ ಬದಲಾಗಿದ್ದು ಹೇಗೆ? ಈ ಗುಂಪಿಗೆ ಕ್ಷಣಾರ್ಧದಲ್ಲಿ ಲಾರಿಗಟ್ಟಲೇ ಕಲ್ಲುಗಳು, ಇಟ್ಟಿಗೆಗಳು ಮತ್ತು ದೊಣ್ಣೆಯಂತಹ ವಸ್ತುಗಳು ಎಲ್ಲಿಂದ ದೊರಕಿದವು? ಪೋಸ್ಟ್ ಹಾಕಿದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಪೊಲೀಸ್ ಮನವಿಯನ್ನು ಧಿಕ್ಕರಿಸಿ, ಠಾಣೆಯನ್ನೇ ಗುರಿಯಾಗಿಸಿಕೊಂಡು ಕಲ್ಲು ತೂರಾಟ ಏಕೆ ನಡೆಯಿತು? ಪೊಲೀಸ್ ಜೀಪುಗಳಲ್ಲಿ ಇದ್ದ ಇನ್ಸ್‌ಪೆಕ್ಟರ್ ಒಬ್ಬರಿಗೆ ಬೆಂಕಿ ಹಚ್ಚುವ ಯತ್ನ ನಡೆದದ್ದು ಸುಳ್ಳೇ? ಪೊಲೀಸ್ ಆಯುಕ್ತರ ಮೇಲೆ ಕಲ್ಲು ತೂರಿ ಅವರನ್ನು ಗಾಯಗೊಳಿಸಿದ್ದು ಕಟ್ಟು ಕಥೆಯೇ? ಠಾಣೆಗೆ ಬೆಂಕಿ ಹಚ್ಚುವ ಹುನ್ನಾರ ಅಡಗಿತ್ತು ಎಂಬ ಗುಪ್ತದಳದ ಅಭಿಪ್ರಾಯ ಆಧಾರ ರಹಿತವೇ? ಈ ಎಲ್ಲ ಪ್ರಶ್ನೆಗಳನ್ನು ಪ್ರಧಾನವಾಗಿ ಇಟ್ಟುಕೊಂಡು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಹೀಗಿರುವಾಗಲೇ ಸಂಪುಟ ಉಪ ಸಮಿತಿಯ ಶಿಫಾರಸು ಎಂಬ ಔಪಚಾರಿಕ ಶಿಷ್ಟಾಚಾರ ಮುಂದೊಡ್ಡಿ ಗಲಭೆ ಪ್ರಕರಣಗಳನ್ನು ಹಿಂಪಡೆದಿರುವುದು ಪ್ರಶ್ನಾರ್ಹ ಮತ್ತು ಕಾನೂನು ಸಮರಕ್ಕೆಡೆ ಮಾಡಿಕೊಡುತ್ತದೆ. ಇದೊಂದೇ ಅಲ್ಲದೇ, ಒಟ್ಟು 43 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಆದರೆ ಹಳೇ ಹುಬ್ಬಳ್ಳಿ ಗಲಭೆಗೂ ಉಳಿದವುಗಳಿಗೂ ವ್ಯತ್ಯಾಸವಿಲ್ಲವೇ ಎನ್ನುವ ಪ್ರಶ್ನೆಯನ್ನು ಸರ್ಕಾರ ಕೇಳಿಕೊಳ್ಳಬೇಕಾಗಿದೆ.
ವಿಚಾರಣೆ ನಡೆಯುತ್ತಿರುವುದರಿಂದ, ಸಂಪುಟ ತೀರ್ಮಾನ, ಅಂತಿಮವಾಗಿ ನ್ಯಾಯಾಲಯದ ನಿರ್ಣಯವನ್ನು ಅವಲಂಬಿಸಿದೆ. ಹಿಂದೆ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯವು ಸರ್ಕಾರದ ತೀರ್ಮಾನವನ್ನು ಒಪ್ಪಿಲ್ಲ. ಆದರೂ ಇಂತಹ ನಿರ್ಣಯವನ್ನು ಕೈಗೊಳ್ಳುವ ಮುನ್ನ ವಿಷಯದ ಗಂಭೀರತೆಯನ್ನು ಪರಿಗಣಿಸಬೇಕಾಗಿತ್ತು ಎನ್ನುವುದು ಪ್ರಜ್ಞಾವಂತರ ಅನಿಸಿಕೆ. ಪ್ರತಿಪಕ್ಷ ಬಿಜೆಪಿ ಕೂಡ ಈ ವಿಷಯದಲ್ಲಿ ತನ್ನ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ.