For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು

03:15 AM Sep 30, 2024 IST | Samyukta Karnataka
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ಮೆರುಗು ನೀಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ರವಿವಾರ ಇಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್ ಹೊಸ ಕಟ್ಟಡ ಕಾಮಗಾರಿ ಪ್ರಗತಿ ವೀಕ್ಷಣೆ ನಡೆಸಿ, ನಂತರ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ೨.೫ ಲಕ್ಷ ಪ್ರಯಾಣಿಕರ ನಿರೀಕ್ಷೆ ಇರಿಸಿಕೊಂಡು ೨೭೦ ಕೋಟಿ ವೆಚ್ಚದಲ್ಲಿ ಬೃಹತ್ ಆಗಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಈಗ ವಾರ್ಷಿಕ ೫೦ ಸಾವಿರ ಪ್ರಯಾಣಿಕರಿಗೆ ತಕ್ಕದಾಗಿ ಟರ್ಮಿನಲ್ ಇದೆ. ಇದನ್ನು ೨.೫ ಲಕ್ಷ ಪ್ರಯಾಣಿಕರಿಗೆ ತಕ್ಕಂತೆ, ಅಗತ್ಯ ಸೌಲಭ್ಯಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಬಹು ದೊಡ್ಡ ಪ್ರಮಾಣದಲ್ಲಿ ಹೊಸ ಟರ್ಮಿನಲ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈಗಾಗಲೇ ಕಾಮಗಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
೨೦೨೪ರ ಮಾರ್ಚ್ ೧೦ರಂದು ಪ್ರಧಾನಿ ನರೇಂದ್ರ ಮೋದಿ ಅವರು ೨೭೩ ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕಾಮಗಾರಿ ವೇಗವಾಗಿ ಸಾಗುತ್ತಿದೆ ಎಂದರು.
೧೦ ಏರ್ ಬಸ್ ನಿಲುಗಡೆಗೆ ವಿಸ್ತರಣೆ: ಸದ್ಯಕ್ಕೆ ೪ ವಿಮಾನಗಳು ನಿಲ್ಲುವ ಸ್ಥಳವಿದ್ದು, ಅದನ್ನೀಗ ಸುಮಾರು ೧೦ ಏರ್ ಬಸ್, ಬೋಯಿಂಗ್ ನಿಲ್ಲಿಸುವಷ್ಟು ಪ್ರದೇಶಕ್ಕೆ ವಿಸ್ತರಿಸಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಚರ್ಚೆ ಸಹ ನಡೆಸಿದರು.
ವಿಮಾನ ನಿಲ್ದಾಣದ ನಿರ್ದೇಶಕರಾದ ರೂಪೇಶ್ ಅವರು ಹೊಸ ಟರ್ಮಿನಲ್ ನಿರ್ಮಾಣ ಕಾಮಗಾರಿಗೆ ಸಂಬಂಧಪಟ್ಟಂತೆ ಯೋಜನೆಯ ಸಮಗ್ರ ವಿವರಣೆಯನ್ನು ಪಿಪಿಟಿ ಮೂಲಕ ವಿವರಣೆ ನೀಡಿದರು.
ಪ್ರಧಾನಿಗೆ ಅಭಿನಂದನೆ: ಈ ಮಹತ್ತರ ಕಾಮಗಾರಿಗೆ ಸಮ್ಮತಿ ನೀಡಿ ಕೈಗೆತ್ತಿಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನಾಗರೀಕ ವಿಮಾನಯಾನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ರಾಮಣ್ಣ ಬಡಿಗೇರ ಹಾಗೂ ವಿಮಾನ ನಿಲ್ದಾಣದ ಆಡಳಿತ ವರ್ಗದವರು ಉಪಸ್ಥಿತರಿದ್ದರು.

ಉತ್ತರ ಕರ್ನಾಟಕ ಅಭಿವೃದ್ಧಿ ಪಥಕ್ಕೆ ವೇಗ
ಹೊಸ ಟರ್ಮಿನಲ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು ನೀಡಲಿದೆ. ನಮ್ಮ ವಾಣಿಜ್ಯನಗರಿ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಮೇಲ್ದರ್ಜೆಯ ಸೌಲಭ್ಯಗಳು ಒದಗಲಿವೆ. ಇದರಿಂದ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಪಥ ವೇಗದಲ್ಲಿರುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

Tags :