For the best experience, open
https://m.samyuktakarnataka.in
on your mobile browser.

ಹುಸಿ ಬಾಂಬ್ ಬೆದರಿಕೆ ವೈಮಾನಿಕ ರಂಗಕ್ಕೆ ನಷ್ಟ

02:37 AM Oct 22, 2024 IST | Samyukta Karnataka
ಹುಸಿ ಬಾಂಬ್ ಬೆದರಿಕೆ ವೈಮಾನಿಕ ರಂಗಕ್ಕೆ ನಷ್ಟ

ದೇಶದಲ್ಲಿ ಈಗ ಎಲ್ಲ ಕಡೆ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಆರಂಭಗೊಂಡಿವೆ. ಇವುಗಳನ್ನು ಕಡೆಗಣಿಸಲು ಬರುವುದಿಲ್ಲ. ಬೆದರಿಕೆ ಬಂದ ಕೂಡಲೇ ವಿಮಾನವನ್ನು ಸಮೀಪದ ವಿಮಾನ ನಿಲ್ದಾಣದಲ್ಲಿ ತತ್‌ಕ್ಷಣ ಇಳಿಸಬೇಕು. ಎಲ್ಲ ಪರಿಶೀಲನೆ ನಡೆಸಿ ಮತ್ತೆ ಪ್ರಯಾಣ ಮುಂದುವರಿಸಬೇಕು. ಒಂದು ವಾರದಲ್ಲಿ ೧೦೦ ವಿಮಾನಗಳಿಗೆ ಬೆದರಿಕೆ ಬಂದಿದೆ. ಇದು ಇನ್ನೂ ಹೆಚ್ಚಾಗುವ ಸಂಭವವಿದೆ. ಪ್ರತಿ ಹುಸಿ ಬಾಂಬ್ ಕರೆಗೆ ಪರಿಶೀಲನೆ ಎಂದರೆ ವಿಮಾನದ ಕಂಪನಿಗೆ ಸರಾಸರಿ ೩ ಕೋಟಿ ರೂ. ನಷ್ಟ. ಅದರಲ್ಲೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಹೆಚ್ಚಿನ ಇಂಧನ ಬೇಕು. ವಿಮಾನಗಳ ಪ್ರಯಾಣ ವೇಳೆ ವಿಳಂಬದಿಂದ ಎಲ್ಲ ಪ್ರಯಾಣಿಕರಿಗೆ ತಮ್ಮ ದಿನ ಕಾರ್ಯಕಲಾಪವನ್ನು ಬದಲಿಸಿಕೊಳ್ಳುವುದು ಅನಿವಾರ್ಯ. ವಿಮಾನದ ಕಂಪನಿಗಳು ಪ್ರಯಾಣಿಕರನ್ನು ಸಂತೈಸಬೇಕು. ವಿಮಾನ ಇಳಿದು ಹತ್ತಿ ಮಾಡಿದರೆ ಇಂಧನ ಪ್ರಮಾಣ ಅಧಿಕಗೊಳ್ಳುವುದಲ್ಲದೆ ಸಿಬ್ಬಂದಿಯ ಕೆಲಸವೂ ಅಧಿಕಗೊಳ್ಳುತ್ತದೆ. ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ಲಬೇಕು ಎಂದರೆ ಪ್ರತಿ ಗಂಟೆಗೂ ಬಾಡಿಗೆ ಕೊಡಬೇಕು. ಅಲ್ಲದೆ ತುರ್ತು ವೆಚ್ಚಗಳನ್ನು ಪ್ರಯಾಣಿಕರ ಮೇಲೆ ವರ್ಗಾಯಿಸಲು ಬರುವುದಿಲ್ಲ. ಪ್ರಯಾಣಿಕರಲ್ಲಿ ಆತಂಕ ಮೂಡಿದರೆ ಅವರು ಪ್ರಯಾಣ ಮಾಡುವುದನ್ನು ಕಡಿಮೆ ಮಾಡುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ-ವಹಿವಾಟುಗಳ ಮೇಲೆ ತೀವ್ರ ಪರಿಣಾಮ ಆಗಲಿದೆ. ಭಾರತದಲ್ಲಿ ಪ್ರತಿದಿನ ೩೭೨೮೪೦ ಜನ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಒಟ್ಟು ೫೬೭೨ ವಿಮಾನಗಳು ಪ್ರತಿದಿನ ಸಂಚರಿಸುತ್ತವೆ. ಪ್ರತಿವಾರ ೧೩ ಲಕ್ಷ ಜನ ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಇಷ್ಟು ದೊಡ್ಡ ವೈಮಾನಿಕ ರಂಗಕ್ಕೆ ಹುಸಿ ಬಾಂಬ್ ಕರೆಗಳು ದೊಡ್ಡ ಸಂಕಟ ತಂದಿದೆ. ಈ ಕರೆಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಬರುತ್ತವೆ. ಇವುಗಳು ಹುಸಿಯಾಗಿದ್ದರೂ ಕಡೆಗಣಿಸಲು ಬರುವುದಿಲ್ಲ.
ಬಾಂಬ್ ಕರೆ ಬಂದ ಕೂಡಲೇ ಅದನ್ನು ನಿರ್ವಹಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು. ಅವರು ಪೈಲಟ್ ಜತೆ ಸಂಪರ್ಕ ಹೊಂದಿ ಮುಂದಿನ ಕ್ರಮಗಳನ್ನು ವಿವರಿಸಿ ಹೇಳುತ್ತಾರೆ. ಸ್ವದೇಶಿ ವಿಮಾನವಾದರೆ ಸಮೀಪದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತದೆ. ಒಂದು ವೇಳೆ ವಿಮಾನ ಹೊರಟ ಸ್ಥಳ ಸಮೀಪದಲ್ಲೇ ಇದ್ದಲ್ಲಿ ಅಲ್ಲಿಗೇ ಹಿಂತಿರುಗುತ್ತದೆ. ಅಂತಾರಾಷ್ಟ್ರೀಯ ವಿಮಾನವಾದರೆ ಸಮೀಪದ ದೇಶದೊಂದಿಗೆ ಸಂಪರ್ಕ ಕಲ್ಪಿಸಬೇಕು. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಿ ಆಮೇಲೆ ವಿಮಾನ ಹೊರಡಬೇಕು. ಈಗ ಒಂದು ವಾರದಲ್ಲಿ ೧೦೦ ಹುಸಿ ಕರೆಗಳು ಬಂದಿವೆ ಎಂದರೆ ಅದರ ತೀವ್ರತೆ ತಿಳಿಯುತ್ತದೆ. ಯಾವುದನ್ನೂ ಕಡೆಗಣಿಸಲು ಬರುವುದಿಲ್ಲ. ಈಗ ತಂತ್ರಜ್ಞಾನ ಉತ್ತಮವಾಗಿದ್ದರೂ ಹುಸಿ ಬಾಂಬ್ ಬೆದರಿಕೆಗೆ ಕೂಡಲೇ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ. ಈ ಬಾಂಬ್ ಕರೆಗಳಿಗೆ ಕಾರಣ ಯಾರು ಎಂಬುದನ್ನು ಹುಡುಕುವ ಕೆಲಸವೇನೋ ನಡೆಯುತ್ತಿದೆ. ಆದರೆ ಪ್ರಮುಖ ಜಾಲವೇನೂ ಕಂಡು ಬರುತ್ತಿಲ್ಲ. ಉಗ್ರವಾದಿಗಳ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಬಾರದು ಎಂದು ಖಾಲಿಸ್ತಾನ್ ನಾಯಕ ಪೊನ್ನು ಎಚ್ಚರಿಕೆ ನೀಡಿದ್ದಾರೆ. ವಿಮಾನದಲ್ಲಿ ಬಾಂಬ್ ಸ್ಫೋಟ ಬೆದರಿಕೆ ಹಿಂದೆಯೂ ನೀಡಲಾಗಿತ್ತು. ಈಗಲೂ ನೀಡಿರುವ ಬೆದರಿಕೆಯನ್ನು ಕಡೆಗಣಿಸಲು ಬರುವುದಿಲ್ಲ. ವಿಮಾನದಲ್ಲಿ ಬಾಂಬ್ ಬೆದರಿಕೆ ಅಪರಾಧಕ್ಕೆ ನಮ್ಮಲ್ಲಿ ಇನ್ನೂ ಉಗ್ರ ಶಿಕ್ಷೆ ವಿಧಿಸುವ ಕೆಲಸ ನಡೆದಿಲ್ಲ. ಕೇಂದ್ರ ಗೃಹ ಇಲಾಖೆ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಚರ್ಚೆ ನಡೆಸುತ್ತಿದೆ. ಹುಸಿ ಬಾಂಬ್ ಬೆದರಿಕೆ ಎಲ್ಲಿಂದಲೇ ಬರಲಿ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಕ್ರಮ ಕೈಗೊಳ್ಳಲು ಗೃಹ ಖಾತೆ ಮುಂದಾಗಬೇಕು. ವಿಮಾನಯಾನ ಕಂಪನಿಗಳು ಕೂಡ ಇದರ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬಂದು ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಬೇಕು. ವಿಮಾನ ನಿಲ್ದಾಣಗಳಲ್ಲಿ ಈಗ ರಕ್ಷಣಾ ವ್ಯವಸ್ಥೆ ಹೆಚ್ಚಿಸಲಾಗಿದೆ. ಪ್ರಯಾಣಿಕರು ತೆಗೆದುಕೊಂಡು ಹೋಗುವ ವಸ್ತುಗಳ ಪರಿಶೀಲನೆಗೆ ಸ್ಕ್ಯಾನಿಂಗ್ ಯಂತ್ರಗಳು ಕೆಲಸ ಮಾಡುತ್ತಿವೆ. ಹೊಸ ತಂತ್ರಜ್ಞಾನದ ಮೂಲಕ ಗುಂಪಿನಲ್ಲಿ ಇರುವ ಉಗ್ರರನ್ನು ಗುರುತಿಸಬಹುದು. ನಮ್ಮಲ್ಲಿ ಗುಪ್ತಚರ ಪಡೆ ಚುರುಕಾಗಿದ್ದರೂ ವಿಮಾನಗಳಿಗೆ ಸುರಕ್ಷತೆ ಒದಗಿಸಲು ಸಾಧ್ಯವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ವಿಮಾನ ಕಂಪನಿಗಳು ನಷ್ಟಕ್ಕೆ ಒಳಗಾಗುವುದಲ್ಲದೆ ಜನ ಅಂಥ ಕಂಪನಿಗಳಿಂದ ದೂರ ಉಳಿಯುವ ಅಪಾಯವೂ ಇದೆ. ಸಾಮಾಜಿಕ ಜಾಲತಾಣಗಳು ಕೂಡ ಈ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಸಾಮಾಜಿಕ ಜವಾಬ್ದಾರಿಗೆ ಕೊರತೆ ಬರಬಾರದು. ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಆತಂಕ ಮೂಡಬಾರದು. ಅದು ರೈಲ್ವೆ ಇರಬಹುದು, ಬಸ್ ಸಾರಿಗೆ ಇರಬಹುದು. ವೈಮಾನಿಕ ಸವಲತ್ತು ಇರಬಹುದು. ಎಚ್ಚರ ಅಗತ್ಯ.