ಹೂಡಿಕೆ ಹೆಚ್ಚಿಸಲು ಉಮಾ ತಂತ್ರಾಂಶ
ಮೈಕ್ರೋಸಾಫ್ಟ್ ಕಂಪನಿಯ ನೆರವಿನಿಂದ ‘ಉಮಾ’ (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ
ಬೆಂಗಳೂರು: 'ಉಮಾ' ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಫೆಬ್ರುವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ರಾಜ್ಯದಲ್ಲಿ ಹೂಡಿಕೆ ಹೆಚ್ಚಿಸಿ, ಕೈಗಾರಿಕೆಗಳ ನಿರ್ಮಾಣದ ವೇಗ ಹೆಚ್ಚಿಸಲು ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಉದ್ಯೋಗ ಮಿತ್ರ ಅಸಿಸ್ಟೆಂಟ್ ತಂತ್ರಾಂಶ 'ಉಮಾ' ಅಭಿವೃದ್ಧಿಪಡಿಸಲಾಗಿದ್ದು #ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ಪಡೆದ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುವುದು.
33 ಇಲಾಖೆಗಳ 147 ಸೇವೆಗಳಿಗೆ ಈ ತಂತ್ರಾಂಶದಿಂದ ಅನುಮೋದನೆ ಸಿಗಲಿದ್ದು 300 ದಿನ ತೆಗೆದುಕೊಳ್ಳುತ್ತಿದ್ದ ಅನುಮೋದನೆ ಇನ್ಮುಂದೆ 60-70 ದಿನದಲ್ಲಿ ಲಭ್ಯವಾಗಲಿದೆ. ಈ ತಂತ್ರಾಂಶವನ್ನು ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಹೂಡಿಕೆ ಮತ್ತು ಕೈಗಾರಿಕಾ ನಿರ್ಮಾಣ ಪ್ರಕ್ರಿಯೆಯನ್ನು ಸುಗಮಗೊಳಿಸಿ ಕರ್ನಾಟಕದ ಪ್ರಗತಿಯ ವೇಗ ಹೆಚ್ಚಿಸಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದಿದ್ದಾರೆ.