ಹೃದಯಾಘಾತಕ್ಕೆ ಕೊಬ್ಬು ಮಾತ್ರ ಕಾರಣವಲ್ಲ…
ಹುಬ್ಬಳ್ಳಿ: ಹೃದಯಾಘಾತದ ನಂತರ ಸ್ಟೆಂಟ್ ಅಳವಡಿಕೆಯಾಗಿರುವ ವ್ಯಕ್ತಿಗಳು ಸೂರ್ಯೋದಯಕ್ಕೆ ಮೊದಲು ವಾಕಿಂಗ್ (ವಾಯು ವಿಹಾರ) ಅಥವಾ ವ್ಯಾಯಾಮಗಳನ್ನು ಮಾಡಕೂಡದು ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಅಮಿತ್ ಸತ್ತೂರ ಎಚ್ಚರಿಸಿದರು.
ಆರೋಗ್ಯ ಹಬ್ಬದಲ್ಲಿ ಉಪನ್ಯಾಸ ನೀಡಿದ ಅವರು, ಹೃದಯಾಘಾತಕ್ಕೆ ಅನೇಕ ಕಾರಣಗಳಿವೆ. ಈ ಪೈಕಿ ಆಹಾರ ಕ್ರಮ ಮಾತ್ರವಲ್ಲದೇ, ವಂಶವಾಹಿನಿ, ಮಧುಮೇಹ ಮೊದಲಾದವು ಮುಖ್ಯವಾದವು. ಸಕ್ಕರೆ ಕಾಯಿಲೆಯಂತೂ ಹೃದಯಾಘಾತಕ್ಕೆ ರಹದಾರಿ ಇದ್ದಂತೆ. ಸಕ್ಕರೆ ಕಾಯಿಲೆಯನ್ನು ಹೃದಯಾಘಾತ ವ್ಯಕ್ತಿಯಷ್ಟೇ ಗಂಭೀರವಾಗಿ ಚಿಕಿತ್ಸೆ ಮಾಡುವುದಕ್ಕೆ ಇದುವೇ ಕಾರಣ ಎಂದರು.ಅನೇಕರು ಆಹಾರ ಕ್ರಮವೊಂದೇ ಹೃದಯಾಘಾತಕ್ಕೆ ಕಾರಣ ಎಂದುಕೊಳ್ಳುತ್ತಾರೆ. ಹೀಗಾಗಿಯೇ ನಾವು ಕೊಬ್ಬು ಇರುವ ಪದಾರ್ಥಗಳನ್ನು ತಿನ್ನುವುದಿಲ್ಲ, ಆದರೂ ನಮಗೆ ಹೃದಯಾಘಾತ ಏಕೆ ಆಯ್ತು ಎನ್ನುತ್ತಿರುತ್ತಾರೆ. ಹೃದಯಾಘಾತಕ್ಕೆ ಕೇವಲ ಕೊಬ್ಬಿನ ಅಂಶದ ಆಹಾರ ಕಾರಣವಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅನೇಕರಿಗೆ ಎಣ್ಣೆ ಪದಾರ್ಥಗಳನ್ನು ಅಥವಾ ಇನ್ನಿತರ ಕೊಬ್ಬಿನ ಅಂಶದ ಆಹಾರ ಸೇವನೆಯನ್ನು ಮಾಡದೆಯೂ ದೇಹದಲ್ಲಿ ಸ್ವಯಂ ಉತ್ಪಾದನೆಯಾಗುವ ಕೊಬ್ಬು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇಂಥವರಲ್ಲಿ ಶೇಕಡಾ ೬೫ರಷ್ಟು ಕೊಬ್ಬು ದೇಹದಲ್ಲೇ ಉತ್ಪತ್ತಿಯಾಗುತ್ತಿರುತ್ತದೆ. ಆದ್ದರಿಂದ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡು ಕೊಬ್ಬು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕು' ಎಂದು ಹೇಳಿದರು. ಆಹಾರ ಕ್ರಮಗಳ ಬಗ್ಗೆ ವಿವರಿಸಿದ ಅವರು,
ಅಡುಗೆ ಎಣ್ಣೆಯನ್ನು ನಿಯಮಿತವಾಗಿ ಬದಲಿಸುತ್ತಿರಬೇಕು. ಎರಡು ಪಲ್ಯ ಮಾಡಿದರೆ ಎರಡು ಬಗೆಯ ಎಣ್ಣೆ ಉಪಯೋಗಿಸಿ ಎನ್ನುವುದು ವೈದ್ಯಕೀಯ ಸಲಹೆ. ಆದರೆ ಇದನ್ನು ನಿತ್ಯ ಅಳವಡಿಸಿಕೊಳ್ಳುವುದು ಕಷ್ಟ. ಆದ್ದರಿಂದ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಅಡುಗೆ ಎಣ್ಣೆಯನ್ನು ಬದಲಿಸಬೇಕು' ಎಂದು ಡಾ.ಅಮಿತ್ ಸತ್ತೂರ ಸಲಹೆ ಮಾಡಿದರು.
ಕೊಬ್ಬರಿ ಎಣ್ಣೆ, ತುಪ್ಪ ಮತ್ತು ಪಾಮ್ ಎಣ್ಣೆ ಬಳಕೆ ಕೂಡದು. ಶೇಂಗಾ, ಸೂರ್ಯಕಾಂತಿ, ಸಾಸಿವೆ ಎಣ್ಣೆ ಇವೇ ಮೊದಲಾದವು ಅಡುಗೆಗೆ ಸೂಕ್ತ. ವಾಸ್ತವವಾಗಿ ತುಪ್ಪ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ತೀರ ತಿನ್ನುವುದಾದರೆ ಒಂದು ಸಣ್ಣ ಚಮಚ ಮಾತ್ರ ಸೇವಿಸಬೇಕು ಎಂದು ಅವರು ವಿವರಿಸಿದರು.
ಹೃದಯದ ಆರೋಗ್ಯ ಚೆನ್ನಾಗಿರಲು ವ್ಯಾಯಾಮ ಮತ್ತು ವಾಕಿಂಗ್ ಅವಶ್ಯ. ವಾರಕ್ಕೆ ಕನಿಷ್ಠ ೫ ದಿನ ೩೫ರಿಂದ ೪೫ ನಿಮಿಷಗಳ ಕಾಲ ವೇಗದ ನಡಿಗೆ ಜೀವನ ಪದ್ಧತಿಯಾಗಲಿ ಎಂದು ಡಾ.ಸತ್ತೂರ ಹೇಳಿದರು.
ನಿಮ್ಮ ಅದೃಷ್ಟ ಸಂಖ್ಯೆ ಎಷ್ಟು…?
ಪ್ರತಿಯೊಬ್ಬರೂ ತಮ್ಮ ಹೃದಯ ಆರೋಗ್ಯದ ಅದೃಷ್ಟ ಸಂಖ್ಯೆಯನ್ನು ತಿಳಿದುಕೊಳ್ಳಬೇಕು ಎಂದು ಡಾ.ಸತ್ತೂರ ಮಾರ್ಮಿಕವಾಗಿ ನುಡಿದರು. ದೇಹದ ರಕ್ತದ ಒತ್ತಡ, ಕೊಲೆಸ್ಟರಾಲ್(ಕೊಬ್ಬು) ಮತ್ತು ಸಕ್ಕರೆ ಪ್ರಮಾಣ ಎಷ್ಟಿವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಈ ನಂಬರ್‌ಗಳೇ ಜೀವನದ ಅದೃಷ್ಟ ಸಂಖ್ಯೆ ಎಂಬುದು ಗೊತ್ತಿರಲಿ ಎಂದು ಅರ್ಥಪೂರ್ಣರಾಗಿ ನುಡಿದರು.
ಹೃದಯ ಮುಖ್ಯ
ನನಗೆ ೬೦ ವರ್ಷವಾದರೂ ಏನೂ ಆಗಿಲ್ಲ ಎನ್ನುವ ಮಾತು ಮೂರ್ಖತನದ್ದು. ಇಂತಹ ಅನೇಕರನ್ನು ಪರೀಕ್ಷೆ ಮಾಡಿದಾಗ ಸಕ್ಕರೆ ಪ್ರಮಾಣ, ಕೊಬ್ಬಿನ ಪ್ರಮಾಣ ಇತ್ಯಾದಿಗಳು ಅಪಾಯದಲ್ಲಿರುವುದನ್ನು ಕಾಣಬಹುದಾಗಿದೆ. ಆದ್ದರಿಂದ ಎಲ್ಲರೂ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ರೆಡ್ ವೈನ್, ಮದ್ಯ ಹಾನಿಕರ
ಹೃದಯಕ್ಕೆ ಎಷ್ಟು ಪ್ರಮಾಣದ ಮದ್ಯ ಆರೋಗ್ಯಕರ? ಎನ್ನುವ ಪ್ರಶ್ನೆಗಳಿಗೆ ಯಾವ ಮದ್ಯವೂ ಒಳ್ಳೆಯದಲ್ಲ. ಆದ್ದರಿಂದ ಸೇವಿಸಬೇಡಿ' ಎಂದು ಡಾ.ಸತ್ತೂರ ಒತ್ತಿ ಹೇಳಿದರು.
ಹಿಂದೊಮ್ಮೆ ರೆಡ್ ವೈನ್ ಮತ್ತು ಇತರ ಬಗೆಯ ಮದ್ಯ ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು ಎನ್ನುವ ಮಾತಿತ್ತು. ಆದರೆ ರೆಡ್ ವೈನ್ ಫ್ರೆಂಚ್ ಜನಸಮುದಾಯಕ್ಕೆ ಮಾತ್ರ ಸೂಕ್ತ. ಭಾರತೀಯರಿಗೆ ಅಲ್ಲ' ಎಂದು ವಿವರಿಸಿದರು.