For the best experience, open
https://m.samyuktakarnataka.in
on your mobile browser.

ಹೃದ್ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು?

05:00 AM Feb 07, 2024 IST | Samyukta Karnataka
ಹೃದ್ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು

ದೇಹವನ್ನು ಜಲೀಕರಿಸಲು (ಹೈಡ್ರೇಟ್) ಸಾಕಷ್ಟು ನೀರು ಕುಡಿಯಲು ನಿರಂತರವಾಗಿ ಸಲಹೆ ನೀಡಲಾಗುತ್ತದೆ. ಕೆಲವರು ದಿನಕ್ಕೆ ೬ ರಿಂದ ೮ ಗ್ಲಾಸ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ, ಆದರೆ ಇತರರು ದಿನಕ್ಕೆ ೨ ರಿಂದ ೩ ಲೀಟರ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ.
ಆದರೆ ಹೃದಯ ಸಂಬಂಧಿ ಕಾಯಿಲೆ ಇರುವವರು ಕಡಿಮೆ ನೀರು ಕುಡಿಯುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಕೆಲವು ಹೃದ್ರೋಗಿಗಳು ನೀರು ಸೇರಿದಂತೆ ಇತರ ದ್ರವ ಪದಾರ್ಥಗಳ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೊಸದಿಲ್ಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ, ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞ ಡಾ.ಮುಖೇಶ್ ಗೋಯಲ್ ಹೇಳುತ್ತಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ ಸಮಾಲೋಚಕ ಡಾ. ಪ್ರದೀಪ್ ಹಾರನಹಳ್ಳಿ ಅವರ ಪ್ರಕಾರ, ಕೆಲವು ಪರಿಸ್ಥಿತಿಗಳಲ್ಲಿ ಹೃದ್ರೋಗಿಗಳಿಗೆ ಕಡಿಮೆ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ.
ಕಡಿಮೆ ನೀರು ಕುಡಿಯುವ ಹಿಂದಿನ ಕಾರಣಗಳು
ಮೂತ್ರಪಿಂಡದ ಮೇಲೆ ಹೆಚ್ಚಿದ ಒತ್ತಡ: ಹೃದ್ರೋಗಿಗಳು ಸಾಮಾನ್ಯವಾಗಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಹೆಚ್ಚು ನೀರು ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಮಟ್ಟ ಏರುಪೇರಾಗುತ್ತದೆ. ಅಲ್ಲದೆ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಅಂತಹ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು.
ಹೃದಯ ಪಂಪಿಂಗ್ ಮತ್ತು ಕುಡಿಯುವ ನೀರಿನ ನಡುವಿನ ಸಂಬಂಧ: ಹೃದಯದ ಪಂಪ್ ಮಾಡುವ ಕಾರ್ಯವು ನೀರಿನ ಸೇವನೆಗೆ ಸಂಬಂಧಿಸಿದೆ. ಯಾರ ಯಾರ ಹೃದಯವು ಇತರರಿಗಿಂತ ಕಡಿಮೆ ಪಂಪ್ ಮಾಡುತ್ತದೆಯೋ ಅವರು ಸಾಮಾನ್ಯ ನೀರಿನ ಸೇವನೆಯೊಂದಿಗೆ ಪಂಪ್ ಅನ್ನು ನಿರ್ವಹಿಸುವಲ್ಲಿ ತೊಂದರೆ ಹೊಂದಿರಬಹುದು. ಆದರೆ ಕಡಿಮೆ ನೀರು ಕುಡಿಯಬೇಕೆಂಬ ನಿಯಮ ಎಲ್ಲ ಹೃದ್ರೋಗಿಗಳಿಗೂ ಅನ್ವಯವಾಗುವುದಿಲ್ಲ. ಕೆಲವೊಮ್ಮೆ ಹೆಚ್ಚು ನೀರು ಕುಡಿಯುವುದರಿಂದ ನಡೆಯುವಾಗ ಅಥವಾ ನಿದ್ದೆ ಮಾಡುವಾಗ ಉಸಿರಾಟದ ತೊಂದರೆ ಉಂಟಾಗುತ್ತದೆ.