ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹೆಂಡತಿಯನ್ನು ಗೆಲ್ಲುವ ಸೂತ್ರ

03:20 AM Jan 31, 2024 IST | Samyukta Karnataka

ನಾನು ಮಿಡಲ್ ಸ್ಕೂಲ್‌ನಲ್ಲಿ ಇದ್ದಾಗ ಗಾಳಿಪಟ ಹಾರಿಸಲು ಸೂತ್ರ ಕಟ್ತಾ ಇದ್ದೆ. ಆನಂತರ ಹೈಸ್ಕೂಲ್‌ಗೆ ಬಂದಾಗ ಕಷ್ಟದ ಸೂತ್ರಗಳು ಶುರುವಾದವು. ಆಲ್‌ಜೀಬ್ರಾ ಕಂಡರೆ ಜೀಬ್ರಾ ಕಂಡಂತೆ ಬೆಚ್ಚುತ್ತಿದ್ದೆ. ಪ್ರತಿ ಅಧ್ಯಾಯದಲ್ಲೂ ಸೂತ್ರಗಳು. ಇನ್ನು ಕಾಲೇಜಿಗೆ ಬಂದಾಗ ಸೂತ್ರಗಳು ಮತ್ತಷ್ಟು ಕಷ್ಟ ಆಯ್ತು, ಟ್ರಿಗ್ನಾಮೆಟ್ರಿ, ಫಿಸಿಕ್ಸು, ಎಲ್ಲಾ ಕಡೆ ಸೂತ್ರಗಳನ್ನು ಇಟ್ಟು ಹೆದರಿಸಿದರು.
ಈ ಮಧ್ಯೆ ಒಂದು ಆಕರ್ಷಕ ಹೊಸ ಸೂತ್ರ ವಾಲ್ ಪೋಸ್ಟರ್ ಮೇಲಿತ್ತು. ಸುಖ ಸಂಸಾರಕ್ಕೆ ೧೨ ಸೂತ್ರಗಳು ಎಂಬ ಸಿನಿಮಾ ಬಂದಿತ್ತು, ಅಲ್ಲಿ ಹೇಳಿದ ಸೂತ್ರಗಳು ಕೆಲ್ಸ ಮಾಡ್ತೋ ಇಲ್ವೋ ಗೊತ್ತಾಗ್ಲಿಲ್ಲ ಆದರೆ ಸಿನಿಮಾ ತೆಗೆದವರಿಗೆ ಆ ಸೂತ್ರ ಲಾಭ ತಂದುಕೊಟ್ಟಿತು.
ನಾನು ವಿಶ್ವನ ಮನೆಗೆ ಹೋದಾಗ ಅವನು ಸೂತ್ರ ಕಿತ್ತ ಗಾಳಿಪಟದಂತೆ ಡಲ್ ಆಗಿ ಕುಳಿತ್ತಿದ್ದ.
"ಯಾಕೋ ವಿಶ್ವ, ಚುನಾವಣೆ ಇನ್ನೂ ದೂರ ಇದೆ, ಈಗ್ಲೇ ಯಾಕ್ ಯೋಚನೆ ಮಾಡ್ತೀಯಾ, ಕಂಟೆಸ್ಟ್ ಮಾಡ್ತೀಯಾ?" ಅಂತ ಕೇಳಿದೆ.
"ಅಯ್ಯೋ ಬಿಡು, ರಾಜಕೀಯ ನಂಬಿ ಯಾರು ಉದ್ಧಾರ ಆಗಿದ್ದಾರೆ" ಎಂದ ನಿರಾಸೆಯಿಂದ.
"ಸುಲಭವಾಗಿ ಸಾಹುಕಾರ ಆಗೋಕೆ ಜನಸೇವೆಗೆ ಇಳೀಬೇಕು. ಬೇಡವಾ? ಅದ್ಸರಿ ಇವತ್ತು ನಿನ್ನ ಮುಖ ಡಲ್ ಹೊಡೀತಿದೆ ಏಕೆ?" ಎಂದು ಕೇಳಿದೆ.
"ಹೆಂಡತೀನ ಅರ್ಥ ಮಾಡ್ಕೊಳೋದೇ ಕಷ್ಟ ಆಗ್ತಾ ಇದೆ" ಎಂದ.
"ಯಾರ ಹೆಂಡ್ತೀನ".
ವಿಶ್ವನಿಗೆ ಸಿಟ್ಟು ಬಂತು "ಸ್ವಂತ ಹೆಂಡತಿ, ಕೈ ಹಿಡಿದ ಹೆಂಡತಿ, ಪ್ರಾಣ ಹಿಂಡುತಿ" ಎಂದು ಪುರಂದರ ಕೀರ್ತನೆ ಹೇಳಿದ.
ಹಾಡು ನಿಜ ಎನಿಸಿತು.
"ನಿಜ ವಿಶ್ವ, ಹೆಣ್ಣಿನ ಮನಸ್ಸು, ಡಾಕ್ಟರ್ ಪ್ರಿಸ್ಕ್ರಿಪ್ಷನ್ ಎರಡೂ ಅರ್ಥ ಆಗೊಲ್ಲ” ಎಂದೆ. ಅಷ್ಟರಲ್ಲಿ ವಿಶ್ವನ ಮಡದಿ ವಿಶಾಲು ಕಾಣಿಸಿಕೊಂಡು ಮುಗುಳು ನಕ್ಕಳು.
"ಈಗ ಬಂದ್ರಾ? ಕಾಫಿ ಮಾಡ್ಲೋ ಟೀ ಮಾಡ್ಲೋ" ಎಂದಳು.
ನಾನು ಉತ್ತರ ಕೊಡುವ ಮೊದಲೇ ವಿಶ್ವ ಗೊಣಗಿದ.
"ಯಾವುದು ಮಾಡಿದರೂ ಅಷ್ಟೆ, ಹೆಸರಲ್ಲಿ ವ್ಯತ್ಯಾಸ ಇದ್ರೂ ರುಚಿಯಲ್ಲಿ ವ್ಯತ್ಯಾಸ ಇರೊಲ್ಲ” ಎಂದ.
ಈ ಎಕ್ಸ್ಟ್ರಾ ಮಾತಿನ ಅಗತ್ಯ ರ‍್ಲಿಲ್ಲ, ವಿಶಾಲುಗೆ ಸಿಟ್ಟು ಬಂತು.
"ಎರಡ್ನೂ ಮಿಕ್ಸ್ ಮಾಡಿ ಮಾಡ್ತೀನಿ" ಎಂದಳು.
"ನನಗಾ?" ಎಂದು ನಾನು ಗಾಬರಿಯಾದೆ.
"ನಿಮಗಲ್ಲ, ನಿಮಗೊಳ್ಳೆ ಕಾಫಿ ಮಾಡಿಕೊಡ್ತೀನಿ, ನಮ್ಮ ಯಜಮಾನರಿಗೆ ಮಿಕ್ಸ್ ಹೊಡಿತೀನಿ" ಎನ್ನುತ್ತ ವಿಶಾಲು ಒಳಗೆ ಹೋದಳು.
ವಿಶ್ವನನ್ನು ನಾನು ಬೈದೆ, "ಸುಮ್ನೆ ರ‍್ಲಾರ‍್ದೆ ಕಾಲು ಕರ‍್ಕೊಂಡು ಗೂಳಿ ಥರ ಜಗಳಕ್ಕೆ ಹೋಗ್ತೀಯಲ್ಲ ಯಾಕೆ? ಹೀಗೆಲ್ಲ ಮಾಡಿದರೆ ಸಂಸಾರ ಸಾರ ಕಳ್ಕೊಂಡು ಸಪ್ಪೆ ಸಾರು ಆಗುತ್ತೆ" ಎಂದೆ.
"ಅವಳ ಮನಸ್ಸಲ್ಲಿ ಏನ್ ಇದೆ ಅಂತ ಗೊತ್ತಿಲ್ಲ” ಎಂದ ವಿಶ್ವ.
"ಆ ಕಾಲದಿಂದ್ಲೂ ಈ ಸಮಸ್ಯೆ ಇದೆ ವಿಶ್ವ, ಹೆಣ್ಣಿನ ಮನಸ್ಸನ್ನು ಅರ್ಥ ಮಾಡ್ಕೊಂಡವರು ಅಪರೂಪ"ಎಂದು ಪದ್ಯವನ್ನು ಕೋಟ್ ಮಾಡಿದೆ.
ಔದುಂಬರಾಣಿ ಪುಷ್ಪಾಣಿ ಶ್ವೇತವರ್ಣಂ ಚ ವಾಯಸಂ |
ಮತ್ಸ್ಯಪಾದಂ ಜಲೇ ಪಶ್ಯೇನ್ನ ನಾರೀ ಹೃದಯಸ್ಥಿತಿಂ||
"ಔದುಂಬರ ಅಂದರೆ ಅತ್ತಿ ಮರದ ಹೂಗಳನ್ನ ನೋಡೋಕ್ ಆಗಲ್ಲ, ಬಿಳಿ ಕಾಗೇನ ನೋಡೋಕ್ ಆಗಲ್ಲ. ನೀರಿನಲ್ಲಿ ಮೀನು ಈಜಾಡಿದ ಹೆಜ್ಜೆ ಗುರುತು ಇರಲ್ಲ, ಹಾಗೇನೆ ನಾರಿ ಹೃದಯ ಹೊಕ್ಕಿ ನೋಡಿದವರು ಇಲ್ವೇ ಇಲ್ಲ”. ಎಂದು ವಿವರಿಸಿದೆ.
"ಎಲ್ಲಿ ಸಿಕ್ತು ಈ ಪದ್ಯ?"
"ಮಹಾಭಾರತದಲ್ಲಿ”
"ಅದಕ್ಕೆ ನಮ್ಮ ಮನೆ ಕುರುಕ್ಷೇತ್ರ ಆಗ್ತಿದೆ" ಎಂದು ಮೌನಕ್ಕೆ ಜಾರಿದ.
ಹೆಂಡತಿ ಅನ್ನೋ ಕ್ಯಾರೆಕ್ಟರ್ ಯಾಕೆ ಈ ರೀತಿ ಕಗ್ಗಂಟ್ ಆಗ್ತಾ ಇದೆ? ಅನುಸರಿಸಿ ಹೋದ್ರೆ ಹೆಂಡತಿ ಅರ್ಧಂಬರ್ಧ ಅರ್ಥ ಆಗ್ತಾಳೆ. ಡಿಕ್ಷನೆರಿ ಹಿಡಿದು ಅರ್ಥ ಹುಡುಕಿದರೆ ಅಪಾರ್ಥಗಳಿರುತ್ತೆ. ಮನೆಯಲ್ಲಿ ನಡೆಯೋ ವಿಷಯಗಳನ್ನೆಲ್ಲ ತಂದು ರಸ್ತೇಲಿ ಸಿಗೋ ಬನ್ನು ಬೈಟು ಕಾಫಿ ಫ್ರೆಂಡ್ಸ್ಗೆ ಹೇಳಿದರೆ ಅದರಿಂದ ಬೇರೆ ಕತೆ ಹುಟ್ಟಿಕೊಳ್ಳುತ್ತೆ. ಒಬ್ಬೊಬ್ಬರು ಒಂದೊಂದ್ ರೀತಿ ವ್ಯಾಖ್ಯಾನ ಕೊಡ್ತಾರೆ. ಅದು ಅವರವರ ಅನುಭವ, ಅದರಿಂದ ಸಂಸಾರ ಪೂರ್ತಿ ಹಾಳಾಗೋಗುತ್ತೆ ಎನಿಸಿತು.
"ಈ ವಿಷಯದಲ್ಲಿ ನೀನು ಹೇಳೋದೇನು? ಅದನ್ನಾದ್ರೂ ಹೇಳು ಫಾಲೋ ಮಾಡ್ತೀನಿ" ಎಂದ.
"ಗಂಡ-ಹೆಂಡ್ತಿ ತಾಳ್ಮೆ ಕಳ್ಕೊಬಾರದು, ಸಂಸಾರ ಎಂದೂ ರಣಾಂಗಣ ಆಗಬಾರದು".
"ಮತ್ತಿನೇನ್ ಆಗಬೇಕು?"
"ಸಂಸಾರ ಲೀಲಾಂಗಣ ಆಗಬೇಕು, ಪ್ರೇಮಾಂಗಣ ಆಗಬೇಕು, ಲೌವಾಂಗಣ ಆಗಬೇಕು" ಎಂದು ವಿವರಿಸಿದೆ.
"ಅಂದ್ರೆ ಆಕೆ ಹೇಳಿದ್ದಕ್ಕೆಲ್ಲ ನಾನು ಸರ್ಕಾರಿ ನಿಯಮ ಪಾಲಿಸೋ ಪ್ರಜೆ ಥರ ತೆಪ್ಪಗಿರಬೇಕು ಅಂತಾನಾ?"
"ಬೇರೆ ವಿಧಿ ಇಲ್ಲ, ಪ್ರೊಟೆಸ್ಟ್ ಮಾಡಿದರೆ ಪ್ರಯೋಜನವಿಲ್ಲ, ದೊಡ್ಡವರು ಏನ್ ಹೇಳಿದ್ದಾರೆ? ಪೊಲೀಸ್ ಸ್ಟೇಷನ್‌ನಲ್ಲಿ ಪೇದೇನ ಎದುರು ಹಾಕ್ಕೋಬೇಡ, ಸಂಸಾರದಲ್ಲಿ ಹೆಂಡತೀನ ವಿರೋಧಿಸಬೇಡ ಅಂತ"
"ಆಯ್ತಪ್ಪ, ನನ್ನ ಹೆಂಡ್ತಿ ಟೈಮ್‌ಟೇಬಲ್ ಹಾಕ್ಕೊಂಡು ವಾರಕ್ಕೊಂದು ದಿನ ಕೋಪ ಮಾಡ್ಕೊತಾಳೆ, ಅವಳಿಗೆ ಸಮಾಧಾನ ಮಾಡೋಷ್ಟçಲ್ಲಿ ಟೇಬಲ್ ಬಿಸಿ ಬಂದು ಟೈಂ ವೇಷ್ಟ್ ಆಗುತ್ತೆ"
"ನಿನ್ನ ಅದೃಷ್ಟ ವಿಶ್ವ, ನಿನ್ನಾಕೆಗೆ ವೀಕ್ಲಿ ಕೋಪ, ನನ್ನಾಕೆಗೆ ಡೈಲಿ ತಾಪ, ಪ್ರತಿ ನಿತ್ಯ ಪರಿತಾಪ, ನಾನು ತೆಪ್ಪಗೆ ಸಂಸಾರ ಮಾಡ್ತಾ ಇಲ್ವಾ? ನೀನು ಅದೇ ಥರ ಅನುಸರಿಸಿಕೊಂಡು ಹೋಗಬೇಕು" ಎನ್ನುತ್ತಿದ್ದಂತೆ ವಿಶ್ವ ತನ್ನ ಹೆಂಡತಿ ಬರುತ್ತಿದ್ದಾಳೆಂದು ಸನ್ನೆ ಮಾಡಿದ, ವಿಶಾಲು ಬಂದು ಕಾಫಿಯನ್ನು ಕೊಟ್ಲು, ಕಾಫಿ ಚೆನ್ನಾಗಿತ್ತು.
"ಬಿಸ್ಕತ್ತು" ಎಂದಳು ವಿಶಾಲು.
"ಬಿಸ್ಕತ್ ಹಾಕೋಕ್ ಬರಬೇಡ" ಎಂದ ವಿಶ್ವ
"ನೋಡು ಗಲಾಟೆ ಶುರುವಾಗೋದೇ ಹೀಗೆ, ಆಕೆ ನಿನ್ನ ಹೆಂಡ್ತಿ, ಬಿಸ್ಕತ್ ಕೊಡ್ಲಾ ಅಂತ ಪ್ರೀತಿಯಿಂದ ಕೇಳಿದ್ದು. ನೀನು ಅದನ್ನ ಬೇರೆ ರೀತಿ ತಗೊಂಡೆ, ಸಂಸಾರಸ್ಥರು ಎರಡು ಸಾಲುಗಳ ಮಧ್ಯೆ ಹೊಸ ಅರ್ಥ ಹುಡುಕೋಕೆ ಹೋಗಬಾರದು" ಎಂದೆ.
"ನನ್ನ ಗಂಡ ಮೊದಲು ಹೀಗಿರಲಿಲ್ಲ, ಇತ್ತೀಚೆಗೆ ಕೆಲವು ಸಂಜೆ ಪ್ರವಚನಗಳಿಗೆ ಹೋಗ್ತಾರೆ" ಎಂದು ವಿಶಾಲು ಚೀರಿದಳು.
"ಪ್ರವಚನಕ್ಕಾ? ಯಾವ ಸ್ವಾಮಿ, ಯಾವ ಮಠ?" ಎಂದೆ.
"ದೇವಸ್ಥಾನನೂ ಅಲ್ಲ, ಮಠನೂ ಅಲ್ಲ, ಇಸ್ಪೀಟ್ ಕ್ಲಬ್ಬು, ಅಲ್ಲಿ ಹೋಗಿ ತಲೆ ಅಡ ಇಟ್ಟು ಎಲೆ ತಿರುಗಿಸ್ತಾರೆ. ನಗ್ತಾ ಹೋದವರು ಎಗರಾಡ್ತಾ ಮನೆಗೆ ರ‍್ತಾರೆ"
ನನಗೆ ಅವರ ಸಂಸಾರದ ಕಷ್ಟ ಅರ್ಥವಾಯ್ತು. ಆಚೆ ಸೋಲನ್ನು ಅನುಭವಿಸಿ ಬಂದ ಗಂಡನಿಗೆ ಸಿಟ್ಟು ಇರುತ್ತದೆ, ಅದಕ್ಕೆ ಒಂದು ಔಟ್‌ಲೆಟ್ ಬೇಕು. ಹೆಂಡತಿ ಏನೇ ಮಾತಾಡಿದ್ರ‍್ರೂ ಕೇಳುವ ವ್ಯವಧಾನ ಇರುವುದಿಲ್ಲ.
ವಿಶಾಲು ಖಾಲಿ ಲೋಟ ತೆಗೆದುಕೊಂಡು ಒಳಗೆ ಹೋದಾಗ ಗುಟ್ಟಾಗಿ ವಿಶ್ವನಿಗೆ ಹೇಳಿದೆ
"ಹೆಂಡತಿಯನ್ನು ಗೆಲ್ಲೋಕೆ ಒಂದು ಸೂತ್ರ ಇದೆ"
ವಿಶ್ವನಿಗೆ ಖುಷಿಯಾಯ್ತು. ಹತ್ತಿರ ಬಂದ, "ಏನ್ ಅದು?"
"ಹೆಂಡತಿಯನ್ನು ಗೆಲ್ಲಬೇಕಾದ್ರೆ ಗಂಡ ಸೋಲಬೇಕು, ಸೋಲೇ ಗೆಲುವಿನ ಗುಟ್ಟು" ಎಂದೆ.
"ನಿನಗೆ ಕಾಫಿ ಕೊಟ್ಟಿದ್ದೇ ವೇಸ್ಟ್" ಎಂದು ವಿಶ್ವ ರೂಲಿಂಗ್ ಕೊಟ್ಟ.

Next Article