For the best experience, open
https://m.samyuktakarnataka.in
on your mobile browser.

ಹೆಂಡತಿ ತವರಿಗೆ: ಗಂಡ ನೇಣಿಗೆ

12:06 PM May 24, 2024 IST | Samyukta Karnataka
ಹೆಂಡತಿ ತವರಿಗೆ  ಗಂಡ ನೇಣಿಗೆ

ಗದಗ: ಹೆಂಡತಿ ತವರು ಮನೆಗೆ ಹೋದಳು ಎಂಬ ಕಾರಣಕ್ಕೆ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ಸರ್ಕಾರಿ ಶಾಲೆಯ ಶಿಕ್ಷಕ ಭಗವದ್ಗಿತೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ನಗರದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ಮೃತರನ್ನು ಈಶಪ್ಪ ಕಟ್ಟಿಮನಿ (40) ಎಂದು ಗುರುತಿಸಲಾಗಿದೆ. ಇನ್ನು ಈ ಶಿಕ್ಷಕ ನೇಣು ಬಿಗಿದುಕೊಳ್ಳುವ ಮೊದಲು ಸೆಲ್ಫಿ ವೀಡಿಯೊ ಮಾಡಿದ್ದಾರೆ. ಈ ಸೆಲ್ಫಿ ವಿಡಿಯೋದಲ್ಲಿ ನನ್ನ ಸಾವಿಗೆ ಅಳಿಯಂದಿರು‌ ಕಾರಣ. ಸಾಧ್ಯವಾದರೆ ಅವರಿಗೆ ಶಿಕ್ಷೆಯನ್ನು ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಭಗವದ್ಗೀತೆ ಪುಸ್ತಕದ ಮುಖಪುಟದ ಒಳಭಾಗದಲ್ಲಿ ತನ್ನ ಸಾವಿಗೆ ಅಳಿಯಂದಿರೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಗದಗನ ಬಸವೇಶ್ವರ ನಗರದಲ್ಲಿ‌ನ ಸರ್ಕಾರಿ ಶಾಲೆ ನಂ. 6 ರಲ್ಲಿ ಶಿಕ್ಷಕನಾಗಿದ್ದ ಈಶಪ್ಪ ಕಳೆದ ರಾತ್ರಿ ಹೆಂಡತಿ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆಗೆ ಆಕೆಯ ಸಹೋದರರಾದ ಅನಿಲ್‌ ಪವಾರ ಮತ್ತು ಮಂಜುನಾಥ ಪವಾರ ಎಂಬುವವರು ಮನಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಸಹೋದರಿಯೊಂದಿಗೆ ಭಾವ ಜಗಳ ಮಾಡುತ್ತಿರುವುದನ್ನು ನೋಡಿಕೊಂಡು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು ನಮ್ಮ ತಂಗಿ ಜತೆಗೆ ಯಾಕೆ ಜಗಳ ಮಾಡುತ್ತೀಯಾ ಎಂದು ಬೀದಿಯಲ್ಲಿ ಜಗಳ ಮಾಡಿ, ಹಲ್ಲೆ ಮಾಡಿ ಅವಮಾನ ಮಾಡಿದ್ದಾರೆ. ಜೊತೆಗೆ, ಅಳಿಯಂದಿರು ಅವರ ತಂಗಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಹೆಂಡತಿಯೊಂದಿಗೆ ಕುಟುಂಬದ ಸಮಸ್ಯೆ ಬಗ್ಗೆ ಜಗಳ ಮಾಡುವ ಸ್ವಾತಂತ್ರ್ಯವೂ ಇಲ್ಲವೇ? ನನ್ನ ಮೇಲೆ ಹೆಂಡತಿಯ ಸಹೋದರರು ಹಲ್ಲೆ ಮಾಡಿ ಮಾನ ಹರಣ ಮಾಡಿದ್ದಾರೆ ಎಂದು ಶಿಕ್ಷಕ ಈಶಪ್ಪ ಕಟ್ಟಿಮನಿ ಭಾರಿ ಮನನೊಂದಿದ್ದರು. ಮನೆಯಲ್ಲಿ ರಾತ್ರಿ ವೇಳೆ ಒಬ್ಬರೇ ಇದ್ದಾಗ ಮಾನ ಹೋದರೆ ಜೀವವೇ ಹೋದಂತೆ ನಾನು ಬದುಕಲು ಅರ್ಹನಲ್ಲ ಎಂದು ತೀರ್ಮಾನಿಸಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಇದಾದ ನಂತರ ತಮ್ಮ ಮನೆಯಲ್ಲಿದ್ದ ಫ್ಯಾನಿಗೆ ಹೆಂಡತಿ ಸೀರೆಯನ್ನು ಕಟ್ಟಿ ಅದನ್ನು ಸೆಲ್ಫಿ ವಿಡಿಯೋ ಮಾಡಿ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಸಾಧ್ಯವಾದರೆ ನನ್ನ ಅಳಿಯಂದಿರಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಇನ್ನು ಶಿಕ್ಷಕ ಈಶಪ್ಪ ಕಟ್ಟಿಮನಿ ಅವರು ಮನೆಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ನೆರೆಹೊರೆ ಮನೆಯವರು ಹೋಗಿ ಕಿಟಕಿಯಲ್ಲಿ ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತಂತೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ‌ ದಾಖಲು ಆಗಿದೆ.