ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹೆಚ್ಚು ಅಂಕ ಗಳಿಕೆಗೆ ಕಿವಿಮಾತು

12:37 AM Mar 01, 2024 IST | Samyukta Karnataka

ಕೆ.ಬಿ.ಶುಭ | ಬೆಂಗಳೂರು
ಇದೇ ಮಾರ್ಚ್ ೨೫ ರಿಂದ ಏಪ್ರಿಲ್ ೬ ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ೧ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನೇನು ಕಣ್ಣು ಮುಚ್ಚಿ ಬಿಡುವುದರೊಳಗೆ ೨೦ ದಿನಗಳು ಕಳೆದೇ ಹೋಗಿರುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೇ ಶಾಂತಚಿತ್ತರಾಗಿ ಪುನರ್‌ಮನನ, ಪುನರಾವರ್ತನೆ ಕಡೆ ಹೆಚ್ಚು ಗಮನ ಹರಿಸಬೇಕಿದೆ.
ಇದರ ಜೊತೆಗೆ ಪರೀಕ್ಷಾ ಕಾಲಮಿತಿಯಲ್ಲಿ ಉತ್ತರಗಳನ್ನು ಬರೆದು ಮುಗಿಸಬೇಕಿರದುವುದರಿಂದ ಆದಷ್ಟು ಬರೆದು ಅಭ್ಯಾಸ ಮಾಡಬೇಕಿದೆ. ಇವೆಲ್ಲದರ ಜೊತೆಗೆ ಪರೀಕ್ಷೆ ಬರೆಯುವಾಗ ಕೆಲ ಅಂಶಗಳನ್ನು ಅನುಸರಿಸಿದರೆ ಇನ್ನೂ ಹೆಚ್ಚಿನ ಅಂಕ ಗಳಿಕೆಗೆ ಸಹಕಾರಿಯಾಗಲಿದೆ.
ಉತ್ತರ ನೀಡಲು ಆದ್ಯತೆ ಇರಲಿ
ಮೊದಲು ಯಾವಾಗಲು ಸುಲಭವಾಗಿ ಉತ್ತರಿಸಬಲ್ಲ ಪ್ರಶ್ನೆಗಳನ್ನೇ ಆಯ್ಕೆ ಮಾಡಿಕೊಂಡು ಉತ್ತರಿಸಿ ಬಿಡಿ. ನಂತರ ಅಲ್ಪಸ್ವಲ್ಪ ಗೊತ್ತಿರುವ ಪ್ರಶ್ನೆಗೂ ಉತ್ತರಿಸಿ. ಈ ಮೂಲಕ ನೀವು ಚಾಲೆಂಜ್ ಎದುರಿಸಬಲ್ಲ ಆತ್ಮ ವಿಶ್ವಾಸ ಮೂಡುತ್ತದೆ. ಕೊನೆಯಲ್ಲಿ ಕಠಿಣ ಪ್ರಶ್ನೆಗಳಿಗೆ, ಅದರಲ್ಲೂ ದೀರ್ಘವಾದ ಉತ್ತರಗಳಿಗೆ ಮುಂದಾಗಿ.
ನಿಖರತೆ ಮತ್ತು ವೇಗ ಖಚಿತಪಡಿಸಿಕೊಳ್ಳಿ
ಒಂದು ದೀರ್ಘ ಉತ್ತರದ ಪ್ರಶ್ನೆಗೆ ಉತ್ತರ ಬರೆಯಲು ಅಗತ್ಯವಿರುವ ಸಮಯವನ್ನು ಮನೆಯಲ್ಲೇ ಅಭ್ಯಾಸ ಮಾಡಿಕೊಂಡಿರಿ. ಅದರನ್ವಯ ಎಷ್ಟು ಸಮಯಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬರೆಯಲಾರಂಭಿಸಿ. ಹೀಗೆ ಬರೆಯುವಾಗ ಪ್ರಶ್ನೆಯ ಸಂಖ್ಯೆಯನ್ನು ಸರಿಯಾಗಿ ನಮೂದಿಸಿದ್ದೀರಾ ಎಂದು ಪರೀಕ್ಷಿಸಿಕೊಳ್ಳಿ. ಪ್ರಶ್ನೆಯ ಸಂಖ್ಯೆ೧ ಎಂದು ಬರೆದು, ೨ನೇ ಪ್ರಶ್ನೆಗೆ ಉತ್ತರಿಸಿದರೆ ಅನರ್ಥವಾಗುತ್ತದೆ.
ಸಮಯದ ಕುರಿತು ಗಮನವಹಿಸಿ
ಕೆಲವು ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಲ್‌ನಲ್ಲಿ ಉತ್ತರ ಬರೆಯುವ ವೇಳೆ, ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೆನಪಿಸಿಕೊಳ್ಳುವ ಕಾರ್ಯದಲ್ಲಿ ಸಮಯದ ಅರಿವು ಇರುವುದಿಲ್ಲ. ಹಾಗೇ ಹೋಗಿಬಿಡುತ್ತದೆ. ಆದ್ದರಿಂದ ಒಂದೇ ಪ್ರಶ್ನೆಗೆ ಹೆಚ್ಚು ಚಿಂತಿಸುತ್ತಾ ಕುಳಿತುಕೊಳ್ಳಬೇಡಿ. ಆಗಾಗ ಸಮಯವನ್ನು ಗಮನಿಸಿಕೊಳ್ಳುವುದರಿಂದ ನಿಮ್ಮ ಒತ್ತಡ ಹೆಚ್ಚುವುದಿಲ್ಲ. ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ನೀಡುವ ನಿಟ್ಟಿನಲ್ಲಿ ಸಮಯ ನಿರ್ವಹಣೆ ಮಾಡಿಕೊಳ್ಳಿ.
ಕಠಿಣ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ
ಕಠಿಣ ಪ್ರಶ್ನೆಗಳ ಉತ್ತರ ನೆನಪಿಗೆ ಸಮಯ ಬೇಕಾಗುತ್ತದೆ. ಇದರಿಂದ ಸುಲಭ ಪ್ರಶ್ನೆಗಳಿಗೆ ಉತ್ತರಿಸುವುದೂ ಕಷ್ಟವಾಗಬಹುದು. ಆದ್ದರಿಂದ ಆರಂಭದ ೨ ಗಂಟೆಗಳು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ನಂತರ ಕಠಿಣ ಪ್ರಶ್ನೆಗಳನ್ನೇ ೩-೪ ಬಾರಿ ಓದಿ. ಆಗ ಸ್ವಲ್ಪ ಸ್ವಲ್ಪ ನೆನಪಿಗೆ ಬರಲಾರಂಭಿಸುತ್ತದೆ. ನಂತರ ಗೊತ್ತಿರುವ ಅಂಶಗಳನ್ನು ಸ್ಪಷ್ಟವಾಗಿ ಬರೆಯಿರಿ.
ಎಷ್ಟು ಉತ್ತರ ಬರೆಯಬೇಕು?
ಉತ್ತರ ಬರೆಯುವ ಮೊದಲು ಯಾವ ಪ್ರಶ್ನೆಯನ್ನು ಎಷ್ಟು ಅಂಕಗಳಿಗೆ ಕೇಳಲಾಗಿದೆ, ಎಷ್ಟು ಉತ್ತರ ಬರೆಯಬೇಕು ಎಂದು ಸರಿಯಾಗಿ ನೋಡಿಕೊಂಡು ಪ್ಲ್ಯಾನ್ ಮಾಡಿಕೊಳ್ಳಿ. ಉತ್ತರವನ್ನು ಸರಳವಾಗಿ, ಸ್ಪಷ್ಟವಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಬರೆಯಿರಿ.
ಗೊತ್ತಿರುವುದನ್ನು ಮೊದಲು ಬರೆಯಿರಿ
ಪರೀಕ್ಷೆ ಆರಂಭವಾದ ನಂತರ ಮೊದಲ ೧೫ ನಿಮಿಷಗಳು ಪ್ರಶ್ನೆ ಪತ್ರಿಕೆಯನ್ನು ಓದಲು ಅವಕಾಶ ಇರುತ್ತದೆ. ಈ ಸಮಯವನ್ನು ಪ್ರಶ್ನೆಗಳನ್ನು ಓದುವ ಸಲುವಾಗಿಯೇ ಮೀಸಲಿಡಿ. ನಂತರ ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆಗಳತ್ತ ಗಮನ ಹರಿಸಿ, ಉತ್ತರಿಸಲು ಪ್ರಾರಂಭಿಸಿ. ಇದರಿಂದ ಕೈ ವೇಗವಾಗಿ ಕೆಲಸ ಮಾಡಿ, ಸಮಯ ನಿರ್ವಹಣೆಗೆ ಸಹಕಾರಿಯಾಗುತ್ತದೆ.
ಒಂದೇ ಪ್ರಶ್ನೆಗೆ ಹೆಚ್ಚು ಚಿಂತಿಸದಿರಿ
ಯಾವುದೇ ಪ್ರಶ್ನೆಗೆ ಉತ್ತರ ನೀಡುವ ಮೊದಲು ಯೋಚಿಸಿ ಉತ್ತರ ನೀಡಬೇಕು ನಿಜ. ಆದರೆ ಉತ್ತರ ಬೇಗ ನೆನಪಿಗೆ ಬರದಿದ್ದಲ್ಲಿ, ಗೊತ್ತಿಲ್ಲದಿದ್ದಲ್ಲಿ, ಒಂದೇ ಪ್ರಶ್ನೆಗೆ ಹೆಚ್ಚು ಕಾಲ ಚಿಂತಿಸುತ್ತಾ ಕೂರಬೇಡಿ. ಅಲ್ಲದೇ ಪ್ರಶ್ನೆ ಸುಲಭವಾಗಿದೆ ಎಂದು ಅಂಕಗಳಿಗೆ ಬೇಕಿರುವುದಕ್ಕಿಂತ ಹೆಚ್ಚಿನ ದೀರ್ಘ ಉತ್ತರವನ್ನು ಬರೆಯುವಲ್ಲೂ ಸಮಯ ವ್ಯರ್ಥ ಮಾಡಬೇಡಿ.
ಕೊನೆಯಲ್ಲಿ ಉತ್ತರವನ್ನು ಒಮ್ಮೆ ಪುನರ್‌ಪರಿಶೀಲಿಸಿ
ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ ಮೇಲೆ, ಕೊನೆಯಲ್ಲಿ ಪತ್ರಿಕೆಯನ್ನು ಒಮ್ಮೆ ಪುನರ್ ಪರಿಶೀಲಿಸಿ. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆಯೇ, ಪ್ರಶ್ನೆ ಸಂಖ್ಯೆ ಸರಿಯಾಗಿ ಹಾಕಲಾಗಿದೆಯೇ, ರಿಜಿಸ್ಟರ್ ನಂಬರ್ ಬರೆಯಲಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ. ಹಾಗೆಯೇ ಪ್ರಶ್ನೆ ಪತ್ರಿಕೆಯಲ್ಲಿ ನೀಡಿದ ಸೂಚನೆಯ ಪ್ರಕಾರವೇ ಉತ್ತರ ನೀಡಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಕೆಲವು ವೇಳೆ ಅಂದ ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ತಪ್ಪುಗಳು ಆಗುತ್ತವೆ. ಅದಕ್ಕೆ ಅವಕಾಶ ನೀಡದಿರಿ.
ಹಿಂದಿನ ದಿನ ಚೆನ್ನಾಗಿ ನಿದ್ರೆ ಮಾಡಿ
ಪರೀಕ್ಷೆಯ ಹಿಂದಿನ ದಿನ ರಾತ್ರಿಯೆಲ್ಲಾ ಓದುತ್ತಾ ಕೂರಬೇಡಿ. ಚನ್ನಾಗಿ ನಿದ್ರೆ ಮಾಡಿ. ನಿದ್ರೆ ಸರಿಯಾಗಿ ಆಗದಿದ್ದರೆ ದೇಹ, ಮನಸ್ಸಿನೊಂದಿಗೆ ಸಹಕರಿಸುವುದಿಲ್ಲ. ಹಾಗಾಗಿ ಆಹಾರ, ನಿದ್ರೆಯನ್ನು ತಪ್ಪಿಸಬೇಡಿ.
ಸ್ಪಷ್ಟವಾದ ಅಕ್ಷರ ಹಾಗೂ ವ್ಯಾಕರಣದ ಕಡೆ ಇರಲಿ ಗಮನ
ಪದಗಳ ಸಂಖ್ಯೆ, ಭಾಷಾ ಬಳಕೆ, ವ್ಯಾಕರಣ, ಅಕ್ಷರದ ಕಡೆ ಒತ್ತು ನೀಡಿರಿ. ಕೆಲವೊಂದು ಪ್ರಶ್ನೆಗಳಿಗೆ ಇಂತಿಷ್ಟೇ ಪದಗಳಲ್ಲಿ ಉತ್ತರ ನೀಡಿ ಎಂದು ಹೇಳಲಾಗಿರುತ್ತದೆ. ಅದನ್ನು ಗಮನದಲ್ಲಿ ಇರಿಸಿಕೊಂಡು ಉತ್ತರ ನೀಡಿ. ಹಾಗೆ ಭಾಷಾ ಬಳಕೆಯು ಸರಳ ಹಾಗೂ ಅರ್ಥಪೂರ್ಣವಾಗಿರಲಿ. ಆಡು ಭಾಷೆಯಲ್ಲಿ ಉತ್ತರ ನೀಡುವುದು ಸೂಕ್ತವಲ್ಲ.

Next Article