For the best experience, open
https://m.samyuktakarnataka.in
on your mobile browser.

ಹೆಜ್ಬೊಲ್ಲ ನಾಯಕನ ಹತ್ಯೆಗೆ ನಮ್ಮಲ್ಲಿ ಅನುಕಂಪ ಅನಗತ್ಯ

02:30 AM Oct 01, 2024 IST | Samyukta Karnataka
ಹೆಜ್ಬೊಲ್ಲ ನಾಯಕನ ಹತ್ಯೆಗೆ ನಮ್ಮಲ್ಲಿ ಅನುಕಂಪ ಅನಗತ್ಯ

ಹೆಜ್ಬೊಲ್ಲ ನಾಯಕ ಹಸನ್ ನಸ್ರುಲ್ಲಾ ಹತ್ಯೆಗೆ ಕಾಶ್ಮೀರದಲ್ಲಿ ಕೆಲವು ನಾಯಕರು ಕಣ್ಣೀರು ಸುರಿಸಿ ಚುನಾವಣೆ ಪ್ರಚಾರ ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲ್ಲ ಸಂತಾಪ ವ್ಯಕ್ತಪಡಿಸಿರುವುದನ್ನು ನೋಡಿದರೆ ಇವರ ದೇಶ ನಿಷ್ಠೆಯ ಬಗ್ಗೆ ಸಂದೇಹಪಡುವಂತಾಗಿದೆ. ಹಸನ್ ನಸ್ರುಲ್ಲ ಜೀವನ ಕ್ರಮವನ್ನು ಅವಲೋಕಿಸಿದರೆ ಆತ ಮೊದಲಿನಿಂದಲೂ ಇಸ್ರೇಲ್ ಕಡು ವಿರೋಧಿ. ಪ್ಯಾಲಸ್ಟೀನ್-ಇಸ್ರೇಲ್ ನಡುವೆ ಇರುವ ಘರ್ಷಣೆ ಇಂದು ನಿನ್ನೆಯದಲ್ಲ. ಅದಕ್ಕ್ಕೆ ಶತಮಾನದ ಇತಿಹಾಸವಿದೆ. ನಾವು ಹಿಂಸಾಕೃತ್ಯವನ್ನು ಎಲ್ಲೇ ನಡೆದರೂ ಖಂಡಿಸುತ್ತೇವೆ. ಯುದ್ಧ ಮತ್ತು ಆಕ್ರಮಣವನ್ನು ಒಪ್ಪುವುದಿಲ್ಲ. ಆದರೆ ದೂರದ ಇಸ್ರೇಲ್-ಪ್ಯಾಲಸ್ಟೀನ್ ನಡುವೆ ನಡೆಯುವ ಸಂಘರ್ಷ ನಮಗೆ ಸಂಬಂಧಪಡದ ವಿಷಯ. ನಾವು ಮೊದಲಿನಿಂದಲೂ ಯಾರ ಪರವೂ ಇಲ್ಲ. ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ನಮ್ಮ ನಿಲುವು ಸ್ಷಷ್ಟವಾಗಿದೆ. ನಮ್ಮ ಪ್ರಧಾನಿ ರಷ್ಯಾ-ಉಕ್ರೇನ್ ಎರಡಕ್ಕೂ ಹೋಗಿ ಶಾಂತಿ ಕಾಪಾಡುವಂತೆ ಒತ್ತಾಯಿಸಿ ಬಂದಿದ್ದಾರೆ. ಅದೇ ರೀತಿ ಇಸ್ರೇಲ್ ನಿಲುವನ್ನು ನಾವು ಒಪ್ಪಿಲ್ಲ. ಅದೇರೀತಿ ಇರಾನ್, ಲೆಬನಾನ್ ನಿಲುವನ್ನೂ ಬೆಂಬಲಿಸಿಲ್ಲ. ಹೆಜ್ಬೊಲ್ಲ ಇರಾನ್ ಬೆಂಬಲಿತ ಪ್ಯಾಲಸ್ಟೀನ್ ಪರ ಇರುವ ಸಂಘಟನೆ,. ಇದನ್ನು ಹಲವು ದೇಶಗಳು ಉಗ್ರ ಸಂಘಟನೆ ಎಂದು ಕರೆದಿದೆ. ಇದರ ನಾಯಕ ನಸ್ರುಲ್ಲ ಮೊದಲಿನಿಂದಲೂ ಇಸ್ರೇಲ್ ವಿರೋಧಿಸುತ್ತ ಬಂದವರು. ಇಂಥ ನಾಯಕನನ್ನು ಇಸ್ರೇಲ್ ಹತ್ಯೆ ಮಾಡಿದೆ. ಅದು ಅವರ ನಡುವೆ ಇರುವ ವೈಷಮ್ಯ. ಅದಕ್ಕೆ ನಮ್ಮಲ್ಲಿ ನಡೆಯುತ್ತಿರುವ ಚುನಾವಣೆ ಕಾಲದಲ್ಲಿ ಅವರ ಹೋರಾಟಕ್ಕೆ ಬೆಂಬಲ ನೀಡುವ ಅಗತ್ಯವೇನಿತ್ತು ಎಂಬುದು ಈಗಿನ ಪ್ರಶ್ನೆ. ನಮ್ಮ ಪಂಗಡಕ್ಕೆ ಸೇರಿದವರು ಜನ ವಿರೋಧಿ ನಿಲುವು ತಳೆದರೆ ಅದನ್ನು ಬೆಂಬಲಿಸುವುದು ಸರಿಯಲ್ಲ. ಇದರಿಂದ ನಾವು ಉಗ್ರ ಕೃತ್ಯಗಳಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದಂತೆ. ಈ ವಿಷಯದಲ್ಲಿ ನಾವು ವಿದೇಶಾಂಗ ಸಚಿವಾಲಯಕ್ಕೆ ಬಿಟ್ಟು ಬಿಡುವುದು ಒಳ್ಳೆಯದು. ಇದರಲ್ಲಿ ಪ್ರಜಾತಂತ್ರ, ವಾಕ್ ಸ್ವಾತಂತ್ರ್ಯ ಬರುವುದಿಲ್ಲ. ಕೆಲವರಿಗೆ ನಸ್ರುಲ್ಲ ಚಟುವಟಿಕೆಗಳು ಬಹಳ ಉತ್ತಮ ಎನಿಸಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಯಾವ ರೀತಿ ನೋಡುತ್ತಾರೆ ಎಂಬುದು ಮುಖ್ಯ. ಹಿಂದೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಮಗೆ ತ್ಯಾಗಿಗಳು. ಹುತಾತ್ಮರು. ಆದರೆ ಅವರು ಹಿಂಸಾಕೃತ್ಯವನ್ನು ಕೈಗೊಂಡಿದ್ದರೆ ನಾವು ಒಪ್ಪುತ್ತಿರಲಿಲ್ಲ. ನಸ್ರುಲ್ಲ ಹಿಂಸಾಕೃತ್ಯವನ್ನು ಸ್ವಾತಂತ್ರ್ಯ ಹೋರಾಟ ಎಂದು ತಿಳಿದವರು. ಅವರಿಗೆ ಇಸ್ರೇಲ್ ನಾಶಪಡಿಸುವುದೇ ಗುರಿಯಾಗಿತ್ತು. ಅಂಥವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುವುದು ಜನವಿರೋಧಿಯೇ ಹೊರತು ಉದಾತ್ತ ಜೀವನವಾಗುವುದಿಲ್ಲ. ಬೇರೆ ದೇಶದ ಜನರನ್ನು ಬೆಂಬಲಿಸುವಾಗ ನಾವು ಎಚ್ಚರವಹಿಸುವುದು ಅಗತ್ಯ. ಪಾಕ್ ಉಗ್ರವಾದಿಗಳು ನಮ್ಮ ಮೇಲೆ ದಾಳಿ ನಡೆಸಿದಾಗ ಅದರ ವಿರುದ್ಧ ಹೋರಾಟ ನಡೆಸುವುದು ನಮ್ಮ ಕರ್ತವ್ಯ. ಅವರನ್ನು ನಾವು ಎಂದೂ ಹುತಾತ್ಮರು ಎಂದು ಕರೆಯಲು ಬರುವುದಿಲ್ಲ. ನಸ್ರುಲ್ಲ ಕೂಡ ಇದೇ ವರ್ಗಕ್ಕೆ ಸೇರಿದವರು. ಸಮಾಜದ ಒಳಿತಿಗಾಗಿ ಅವರು ಎಂದೂ ಚಿಂತಿಸಿದವರಲ್ಲ. ಅವರ ಜೀವನ ಮಂತ್ರವೇ ಹಿಂಸಾಕೃತ್ಯ ಎಂದ ಮೇಲೆ ಅವರನ್ನು ಆರಾಧಿಸುವುದೇ ತಪ್ಪು. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ಬೆಂಬಲಿಸಿದವರ ಮೂಲ ಬಂಡವಾಳ ಈಗ ಬಯಲಾಗಿದೆ. ಉಗ್ರವಾದಕ್ಕೆ ಬೆಂಬಲ ಕೊಡುವುದು ಎಂದರೆ ಜನವಿರೋಧಿ ನಿಲುವು ತಳೆದಂತೆ. ನಕ್ಸಲೀಯ ಚಟುವಟಿಕೆಗಳು ನಿಂತುಹೋಗಲು ಇದೇ ಪ್ರಮುಖ ಕಾರಣ. ಹಿಂಸೆಯ ಮೂಲಕ ನಾವು ಸಮಾನತೆ ತರುತ್ತೇವೆ ಎಂದು ಯಾರಾದರೂ ಭಾವಿಸಿದರೆ ಅದು ಮೂರ್ಖತನವಾಗುತ್ತದೆಯೇ ಹೊರತು ಜನಪರ ಕೃತ್ಯವಾಗುವುದಿಲ್ಲ.
ಒಸಾಮಾ ಬಿನ್ ಲಾಡೆನ್, ಕಸಬ್ ಕೃತ್ಯಗಳನ್ನು ಯಾವ ದೇಶದವರೂ ಒಪ್ಪುವುದಿಲ್ಲ. ಒಪ್ಪಬಾರದು. ಅವರ ಉದ್ದೇಶಗಳು ಎಷ್ಟೇ ದೊಡ್ಡದಿದ್ದರೂ ಅವರ ಕೃತ್ಯಗಳನ್ನು ಯಾರೂ ಒಪ್ಪುವುದಿಲ್ಲ. ಅದೇರೀತಿ ನಸ್ರುಲ್ಲ ಕೃತ್ಯಗಳ ಒಳಿತು-ಕೆಡುಕುಗಳನ್ನು ಅಲ್ಲಿಯ ಜನ ತೀರ್ಮಾನಿಸುತ್ತಾರೆ. ಅದರ ಬಗ್ಗೆ ನಾವು ಇಲ್ಲಿ ಪ್ರತಿಕ್ರಿಯಿಸುವುದು ಸರಿಯಾದ ಕ್ರಮವಲ್ಲ. ಅದರಿಂದ ನಮ್ಮ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರುತ್ತವೆ. ಅಲ್ಲದೆ ಸರ್ಕಾರವನ್ನು ಮುಜುಗರ ಸಿಲುಕಿಸುತ್ತವೆ ಎಂಬುದನ್ನು ಮರೆಯಬಾರದು. ಈಗ ಕಾಶ್ಮೀರದ ನಾಯಕರು ಮಾಡುತ್ತಿರುವ ಕೃತ್ಯಗಳು ಪರೋಕ್ಷವಾಗಿ ಹಿಂದಿನ ಸಮಸ್ಯೆಗಳಿಂದ ಉಂಟಾಗಿದ್ದ ಗಾಯದ ಮೇಲೆ ಉಪ್ಪು ಹಚ್ಚುವ ಪ್ರಯತ್ನ. ಇದರಿಂದ ಮತಗಳಿಸಬಹುದು ಎಂಬುದು ಕೂಡ ಕೇವಲ ಭ್ರಮೆ.
ಹೊಸ ಪೀಳಿಗೆಯ ಮತದಾರರು ಇವುಗಳಿಗೆ ಸೊಪ್ಪು ಹಾಕುವುದಿಲ್ಲ. ಈಗಾಗಲೇ ಎರಡು ಹಂತಗಳ ಮತದಾನ ಮುಕ್ತಾಯಗೊಂಡಿದೆ. ಕೊನೆಯ ಹಂತದ ಮತದಾನ ಸಮೀಪದಲ್ಲಿದೆ. ಇಂಥ ಸಮಯದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ಸೂಕ್ತ. ಯಾವುದೇ ಕಾರಣಕ್ಕೂ ಶಾಂತಿ ಕದಡುವ ಕೆಲಸ ನಡೆಯಬಾರದು.