For the best experience, open
https://m.samyuktakarnataka.in
on your mobile browser.

ಹೆಣ್ಣು ಮಕ್ಕಳ ಬದುಕಿಗೆ ಮೊದಲು ಗ್ಯಾರೆಂಟಿ ನೀಡಿ

03:06 PM Jan 10, 2024 IST | Samyukta Karnataka
ಹೆಣ್ಣು ಮಕ್ಕಳ ಬದುಕಿಗೆ ಮೊದಲು ಗ್ಯಾರೆಂಟಿ ನೀಡಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ? ಎಂದು ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ ಮಾಡಿರುವ ಅವರು "ಸಾವಿರಾರು ಹೆಣ್ಣು ಕಂದಮ್ಮಗಳ ಹತ್ಯೆಯ ಹಿಂದಿರುವ ಭ್ರೂಣ ಲಿಂಗ ಪತ್ತೆ ಜಾಲವನ್ನ ಬೇಧಿಸಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ? ಕಳೆದ ತಿಂಗಳು ಈ ಜಾಲ ಬೆಳಕಿಗೆ ಬಂದಾಗ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಜಾಲವನ್ನ ಪತ್ತೆ ಹಚ್ಚಿ ದುಷ್ಕರ್ಮಿಗಳನ್ನು ಬಂಧಿಸಲು SIT ರಚನೆ ಮಾಡಬೇಕು, ಆರೋಪಿಗಳನ್ನು ತ್ವರಿತವಾಗಿ ವಿಚಾರಣೆ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ವಿಶೇಷ ಕೋರ್ಟ್ ರಚಿಸಬೇಕು ಎಂದು ಬೆಳಗಾವಿ ಅಧಿವೇಶದಲ್ಲಿ ಕರ್ನಾಟಕ ಬಿಜೆಪಿ ಎಷ್ಟೇ ಒತ್ತಡ ಹೇರಿದರೂ ಸರ್ಕಾರ ಈ ಪ್ರಕರಣವನ್ನ ಸಿಐಡಿ ತನಿಖೆಗೆ ಒಪ್ಪಿಸಿತು.
ಭ್ರೂಣ ಪತ್ತೆ - ಹತ್ಯೆಯ ಜಾಲ ಸಿಐಡಿ ತನಿಖೆಗೆ ಒಪ್ಪಿಸಿ ಈಗ ಒಂದು ತಿಂಗಳು ಕಳೆದರೂ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲದಿರುವುದನ್ನು ಗಮನಿಸಿದರೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಯಾರನ್ನೋ ರಕ್ಷಣೆ ಮಾಡಲು, ಪ್ರಕರಣವನ್ನು ಮುಚ್ಚಿ ಹಾಕಲು ಹೊಂಚು ಹಾಕುತ್ತಿರುವಂತಿದೆ.
ಮಹಿಳಾ ಸಬಲೀಕರಣ ಅಂದರೆ ಚುನಾವಣೆ ಗೆಲ್ಲಲು, ಮಹಿಳೆಯರ ವೋಟು ಪಡೆಯಲು ಹೆಣ್ಣು ಮಕ್ಕಳ ಮೂಗಿಗೆ ತುಪ್ಪ ಸವರುವ ಗ್ಯಾರೆಂಟಿ ನೀಡುವುದಲ್ಲ ಸಿಎಂ ಸಿದ್ದರಾಮಯ್ಯನವರೇ, ಹೆಣ್ಣು ಮಕ್ಕಳ ಬದುಕಿಗೆ ಮೊದಲು ಗ್ಯಾರೆಂಟಿ ನೀಡಿ. ಹೆಣ್ಣು ಕಂದಮ್ಮಗಳು ಭೂಮಿಗೆ ಕಾಲಿಡುವ ಮುನ್ನವೇ ಜೀವ ತೆಗೆಯುವ, ಕಣ್ಣು ಬಿಡುವ ಮುನ್ನವೇ ಪ್ರಾಣ ಕಸಿಯುವ ಭ್ರೂಣ ಪತ್ತೆ-ಹತ್ಯೆ ಜಾಲವನ್ನ ಬೇಧಿಸಿ ಈ ದಂಧೆಯನ್ನ ನಿಲ್ಲಿಸುವ ಕೆಲಸ ಮಾಡಿ ಎಂದಿದ್ದಾರೆ.