ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹೆಣ್ಣೆಂದರೆ ಜಗದ ಕಣ್ಣು

03:00 AM Aug 29, 2024 IST | Samyukta Karnataka

ಪ್ರಾಚೀನ ಪರಂಪರೆಯ ಸರ್ವಶ್ರೇಷ್ಠ ಜೀವನಮೌಲ್ಯ ಗ್ರಂಥವಾದ ಮನುಸ್ಮೃತಿಯು ಸಾರಿದ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:' ಸೂಕ್ತಿಯು ಭಾರತೀಯ ಸಮಾಜದ ಬೌದ್ಧಿಕ ಮತ್ತು ಸಾಂಸ್ಕೃತಿಕ ಔನ್ನತ್ಯಕ್ಕೆ ಸಾಕ್ಷಿ. ನಮ್ಮ ಜೀವನದಲ್ಲಿ ಪ್ರತಿದಿನವೂ ವಿವಿಧ ಸ್ಥಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮನೆ ಮತ್ತು ರಾಷ್ಟçದ ಕೊಂಡಿಯಾಗುವ ಸ್ತ್ರೀಯನ್ನು ನಾರಾಯಣಿಯೆಂದು ಪೂಜಿಸಿ, ಗೌರವಿಸಿ, ಸತ್ಕರಿಸಿದ ಸಭ್ಯ ಸಂಸ್ಕೃತಿ ನಮ್ಮದು. ತೊಟ್ಟಿಲು ತೂಗಿ ಶುಚಿ ರುಚಿಯಾದ ಆಹಾರ ತಯಾರಿಸಿ ಕುಟುಂಬದ ಯೋಗಕ್ಷೇಮ ವಿಚಾರಿಸುವ ಮಹಾಲಕ್ಷ್ಮೀರೂಪದ ಷಾಡ್ಗುಣ್ಯಪೂರ್ಣೆ ಹೆಣ್ಣು, ದೇಶಧರ್ಮಕ್ಕೆ ಆಪತ್ತೆದುರಾದಾಗ ಖಡ್ಗ ಹಿಡಿದು ರಣಭೂಮಿಗಿಳಿದು ಶತ್ರುಗಳ ರುಂಡ ಚೆಂಡಾಡಿ ಮಹಾಕಾಳಿಯಾಗಿ ವಿಜೃಂಭಿಸಿದ ಚರಿತ್ರೆಗೆ ಭರತವರ್ಷವೇ ಸಾಕ್ಷಿ. ಪ್ರೀತ್ಯಾದರಕ್ಕೆ ಬದುಕನ್ನೇ ಧಾರೆಯೆರೆಯುವ, ಕಪಟತನಕ್ಕೆ ಸಿಡಿದು ಹೂಂಕರಿಸುವ ಲಲನೆ ಶಾಂತೆಯೂ ಹೌದು, ಸಮರದಂಗಣದ ದುರ್ಗೆಯೂ ಹೌದು. ಭಾರತದ ಮಣ್ಣಿನ ಕಣಕಣದಲ್ಲೂ ಇರುವ ಕ್ಷಾತ್ರಶಕ್ತಿಯನ್ನು ಸಹಜವಾಗಿಯೇ ಧರಿಸಿರುವ ಮಹಿಳೆಯರ ತ್ಯಾಗ, ಬಲಿದಾನ, ಹೋರಾಟ, ಆತ್ಮಾಹುತಿಯ ಇತಿಹಾಸ ಇಂದು ನಿನ್ನೆಯದಲ್ಲ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಡೆದ ಹೋರಾಟದಲ್ಲಿ ಬಹುದೊಡ್ಡ ಪ್ರಮಾಣದ ದಾಯಿತ್ವ ವಹಿಸಿದ ಮಹಿಳಾಸಮೂಹ, ಕ್ರಾಂತಿಕಾರಿ ನಾಯಕರಿಗೆ ಬೆಂಗಾವಲಾಗಿ ನಿಂತದ್ದಷ್ಟೇ ಅಲ್ಲದೆ ಸ್ವಯಂ ಪಿಸ್ತೂಲು ಹಿಡಿದು ಕಾದಾಡಿದ ಘಟನೆಗಳೂ ಸಾವಿರಾರು. ಎಪ್ಪತ್ತೆರಡರ ವೃದ್ಧಾಪ್ಯದಲ್ಲೂ, ದೈಹಿಕ ಕ್ಲೇಶವನ್ನು ಪರಿಗಣಿಸದೆ ಮುನ್ನುಗ್ಗಿ ಹುತಾತ್ಮರಾದ ಮಾತಂಗಿನಿ ಹಜ್ರಾ ಮತ್ತು ಲಂಡನ್ ಸಿಂಹಾಸನವನ್ನೂ ಆಳುವ ಸಾಮರ್ಥ್ಯ ತನಗಿದೆಯೆಂದು ಕಂಪನಿ ಸರಕಾರವನ್ನು ಎಚ್ಚರಿಸಿದ ಲೀಲಾವತಿ ಮುನ್ಶಿ ಹಿಂದುಸ್ಥಾನದ ಸ್ವಾತಂತ್ರ್ಯ ಚಳವಳಿಯ ಮುಕುಟಮಣಿಗಳು. ವ್ಯಾಪಾರಕ್ಕಾಗಿ ಬಂದು ದಬ್ಬಾಳಿಕೆ ನಡೆಸುವ ನಿಮ್ಮ ಅನೀತಿಯನ್ನು ಚರಿತ್ರೆ ಎಂದಿಗೂ ಕ್ಷಮಿಸದು. ಭಾರತೀಯರ ನಡುವೆ ಒಡಕು ಮೂಡಿಸಿ, ಸಂಪತ್ತನ್ನೆಲ್ಲ ದೋಚಿ ರಾಜ್ಯಭಾರ ಮಾಡುವ ಹೀನಪ್ರವೃತ್ತಿಗೆ ಪಶ್ಚಾತ್ತಾಪ ಪಡುವ ಕಾಲ ದೂರವಿಲ್ಲ. ಬೇರೆ ದೇಶಗಳು ಇಂಗ್ಲೆಂಡ್‌ನ್ನು ಕಬಳಿಸುವುದನ್ನು ಒಪ್ಪದ ನಿಮಗೆ ಭಾರತದ ಮಣ್ಣಿನ ಮೇಲೆ ಯಾವ ಅಧಿಕಾರವೂ ಇಲ್ಲ. ಬಳೆತೊಟ್ಟ ಕೈಗಳಿಂದ ಒದೆ ಬೀಳುವ ಮೊದಲು ಭಾರತ ಬಿಟ್ಟು ತೊಲಗಿ' ಎಂಬ ಧೀರವಾಣಿಯಿಂದ ದೇಶದಾದ್ಯಂತ ವಿದ್ಯುತ್ ಸಂಚಲನಗೈದ ವೃದ್ಧತರುಣಿ' ಮಾತಂಗಿನಿ ಹಜ್ರಾ, ಚಲೇ ಜಾವ್ ಚಳವಳಿಯನ್ನು ಮುನ್ನಡೆಸಿದ ಶಿಸ್ತುಬದ್ಧ ರೀತಿಗೆ ಬ್ರಿಟಿಷ್ ಮೇಲಧಿಕಾರಿಗಳೇ ದಂಗಾಗಿದ್ದರು. ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ಮೈಲುಗಲ್ಲು ನೆಟ್ಟು ಯುವಸಮುದಾಯದ ನಿರಂತರ ಪ್ರೇರಣೆಯಂತಿರುವ ಮಾತಂಗಿನಿ ಬಂಗಾಲದ ಹೋಗ್ಲಾದ ಬಡಕುಟುಂಬದಲ್ಲಿ ಜನಿಸಿದರು. ಶಾಲಾಮೆಟ್ಟಿಲು ಹತ್ತದ ಮಾತಂಗಿನಿ ಸ್ವಾತಂತ್ರ‍್ಯ ಸಂಗ್ರಾಮದ ಪ್ರತ್ಯಕ್ಷದರ್ಶಿಗಳ ಅನುಭವಕಥನಗಳನ್ನು ಕೇಳಿ ಲೋಕಜ್ಞಾನ ಸಂಪಾದಿಸಿದರು. ಹನ್ನೆರಡನೆಯ ವಯಸ್ಸಿಗೆ ವೃದ್ಧ ತ್ರಿಲೋಚನ ಹಜ್ರಾರ ಕೈಹಿಡಿದು ಆರೇ ವರ್ಷಗಳಲ್ಲಿ ವಿಧವೆಯಾದ ಮಾತಂಗಿನಿ ಎದುರಿದ್ದುದು ಶೂನ್ಯಬದುಕು. ಅದೇ ಸಮಯಕ್ಕೆ ಬಂಗಾಲದಲ್ಲಿ ಬೀಸಿದ ರಾಷ್ಟ್ರೀಯತೆಯ ಗಾಳಿಯೊಳಗೊಂದಾದ ಮಾತಂಗಿನಿ ಕೊನೆಯುಸಿರಿರುವವರೆಗೂ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲಿಲ್ಲ. ಮಹಿಳಾ ಸಂಘಟನೆಯ ಮುಂದಾಳುವಾಗಿ ಸ್ವಾತಂತ್ರ‍್ಯ ಚಳವಳಿಗೆ ಸ್ತ್ರೀಯರ ಅಗತ್ಯ ಹಾಗೂ ಅನಿವಾರ್ಯತೆಯ ಬಗೆಗೆ ಗಮನ ಸೆಳೆದರು. ಕ್ರಾಂತಿಕಾರಿಗಳು, ದೇಶಭಕ್ತ ಕವಿಗಳು, ಸ್ವಾತಂತ್ರ್ಯವಾಹಕ ಹರಿದಾಸರ ಆಶ್ರಯತಾಣ ಮೇದಿನೀಪುರವನ್ನು ಕಾರ್ಯಶಾಲೆಯಾಗಿಸಿ ವಂಗಭಂಗ ವಿರೋಧೀ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸ್ವದೇಶೀ ಆಂದೋಲನ,ವಂದೇ ಮಾತರಂ' ಸ್ತ್ರೀಸಭಾ ಮೂಲಕ ಮನೆಮನಗಳನ್ನು ತಲುಪಿ ಬಾಲಕಿಯರಿಗೆಂದೇ ಶಾರೀರಿಕ, ಬೌದ್ಧಿಕ ಪ್ರಶಿಕ್ಷಣ ಶಿಬಿರಗಳನ್ನು ಆಯೋಜಿಸಿದರು. ಹೆಣ್ಣಿಗೆ ಶಾಲಾಶಿಕ್ಷಣದ ಜೊತೆಜೊತೆಗೆ ಆತ್ಮರಕ್ಷಣೆಯ ವಿದ್ಯೆಯ ಪಾಠವೂ ಅಗತ್ಯವೆಂದು ಮೊಟ್ಟಮೊದಲ ಬಾರಿ ಸಾರಿದ ಅವರ ದೂರದೃಷ್ಟಿ ವಿಶಿಷ್ಟ. ಗಾಂಧೀಜಿ ವೈಚಾರಿಕತೆ, ಗ್ರಾಮಸ್ವರಾಜ್ಯಗಳಿಂದ ಪ್ರಭಾವಿತರಾಗಿ ಅವರ ಕಟ್ಟಾ ಅನುಯಾಯಿಯಾಗಿ ಗಾಂಧಿಚಿಂತನೆಗಳನ್ನು ಊರೂರಿಗೂ ಪಸರಿಸಿ 'ಮಹಿಳಾ ಗಾಂಧಿ' ಎಂದೇ ಖ್ಯಾತರಾದರು. ಶಾಲೆ, ಆರೋಗ್ಯಕೇಂದ್ರ, ಆಹಾರ - ತರಕಾರಿ, ಕೃಷಿ, ಹೈನುಗಾರಿಕೆಯ ಸೌಲಭ್ಯದ ಸ್ವಾವಲಂಬನೆ ಪ್ರತಿಗ್ರಾಮಕ್ಕೂ ದೊರಕಿ ನಗರದ ಜನತೆ ಗ್ರಾಮವನ್ನು ಅವಲಂಬಿಸಬೇಕು ಎಂಬ ಹಜ್ರಾ ಕನಸು ಇಂದಿಗೂ ಕನಸಾಗಿಯೇ ಉಳಿದಿರುವುದು ವಿಷಾದದ ಸಂಗತಿ. ಜನ ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಕಾನೂನುಭಂಗ ಚಳವಳಿ, ಕರ ನಿರಾಕರಣೆ ಮೊದಲಾದ ಹಲವು ಮಹತ್ವದ ಹೋರಾಟದಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸಕ್ಕೀಡಾದ ಮಾತಂಗಿನಿ, ಜೈಲಿನ ಚಿತ್ರಹಿಂಸೆ, ಬ್ರಿಟಿಷರ ಪೈಶಾಚಿಕ ಕೃತ್ಯಗಳನ್ನು ಜನರೆದುರು ತೆರೆದಿಟ್ಟು ಬಂಗಾಲದ ಸ್ಫೂರ್ತಿಚಿಲುಮೆಯಾದರು. ತನ್ನ ಉಪಯೋಗದ ಬಟ್ಟೆಯನ್ನು ತಾವೇ ನೇಯ್ದು ಹಳ್ಳಿ ಹೆಣ್ಮಕ್ಕಳಿಗೂ ಖಾದಿ ಉದ್ಯಮಕ್ಕೆ ಪ್ರೋತ್ಸಾಹವಿತ್ತು ಬ್ರಿಟಿಷ್ ವ್ಯಾವಹಾರಿಕ ಮುಕ್ತ ಬಂಗಾಲ' ಕನಸಿಗೆ ನೀರೆರೆದರು. ನಿರ್ಣಾಯಕ ಕ್ವಿಟ್ ಇಂಡಿಯಾ ಆಂದೋಲನದಲ್ಲಿ ಆರುಸಹಸ್ರ ಜನರ ಪ್ರತಿಭಟನಾ ಮೆರವಣಿಗೆಯ ನಾಯಕತ್ವ ವಹಿಸಿದ್ದ ವೃದ್ಧೆ ಮಾತಂಗಿನಿಯವರ ಮೇಲೆ ಬ್ರಿಟಿಷ್ ಅಧಿಕಾರಿಯೋರ್ವ ಗುಂಡು ಹಾರಿಸಿದ. ಅಸಾಧ್ಯ ನೋವಿನ ನಡುವೆಯೂ ಸಾವರಿಸಿ, ಧ್ವಜವನ್ನು ಮೇಲೆತ್ತಿ, ಜನರತ್ತ ಗುಂಡು ಹಾರಿಸಬಾರದೆಂದು ಎಚ್ಚರಿಸಲು ಮುನ್ನುಗ್ಗಿದ ಧೀರವನಿತೆಯ ಮೇಲೆ ಮತ್ತೆ ಪಿಸ್ತೂಲು ಪ್ರಯೋಗಿಸಿದ ಹೇಡಿ ಪೋಲೀಸರ ಕೃತ್ಯಕ್ಕೆ ಹಿರಿಜೀವ ಧರೆಗುರುಳಿತು. ಧ್ವಜವನ್ನು ಕೈಯಲ್ಲಿ ಭದ್ರವಾಗಿ ಹಿಡಿದು ಆಗಸದತ್ತ ಹಾರಾಡಿಸಿ ವಂದೇ ಮಾತರಂ ವೀರಘೋಷದೊಂದಿಗೆ ಹುತಾತ್ಮರಾದ ಮಹಾಮಾತೆಯ ಜೀವನೋತ್ಸಾಹ, ಸಾಟಿಯಿಲ್ಲದ ದೇಶಭಕ್ತಿ ಎಂದೆಂದಿಗೂ ಆದರ್ಶ. ಭಾರತೀಯರನ್ನು ನಿಮ್ಮ ದಾಸರಂತೆ ಕಂಡು ಮನಬಂದಂತೆ ಹಿಂಸಿಸುವ ಪ್ರವೃತ್ತಿ ಆಂಗ್ಲ ಸಾಮ್ರಾಜ್ಯಕ್ಕೆ ಶೋಭೆಯಲ್ಲ. ಕಡಿಮೆ ಬೆಲೆಗೆ ಇಲ್ಲಿಯ ವಸ್ತುಗಳನ್ನು ಖರೀದಿಸಿ, ಸಂಸ್ಕರಿಸಿ, ನೂರಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಭಾರತವನ್ನು ಕೊಳ್ಳೆ ಹೊಡೆಯುವ ಅಮಾನವೀಯ ವರ್ತನೆಗೆ ಕಡಿವಾಣ ಹಾಕಿ. ದೇಶ ಬಿಟ್ಟು ತೊಲಗದಿದ್ದರೆ ಲಂಡನ್‌ನ ಹೆಬ್ಬಾಗಿಲು ಮುರಿದು ಸ್ವಾತಂತ್ರ‍್ಯದ ಕಿಚ್ಚನ್ನು ಅಲ್ಲಿ ಹೊತ್ತಿಸಲು ಭಾರತದ ನಾರಿಶಕ್ತಿ ಹಿಂದೆ ಮುಂದೆ ನೋಡದೆಂಬುದನ್ನು ಶೀಘ್ರವಾಗಿ ಅರಿಯುವುದರಲ್ಲಿ ನಿಮ್ಮ ಕ್ಷೇಮವಿದೆ' ಎಂಬ ಕಟುನುಡಿಗಳಿಂದ ಬ್ರಿಟಿಷ್ ಆಡಳಿತದ ಅಹಮ್ಮಿನ ಕೋಟೆ ಕೆಡವಿದ ಸ್ವಾತಂತ್ರ‍್ಯ ಹೋರಾಟಗಾರ್ತಿ ಲೀಲಾವತಿ ಮುನ್ಶಿ, ಹೋರಾಟ - ಸಾಹಿತ್ಯ - ರಾಜಕಾರಣದಲ್ಲಿ ತೊಡಗಿಸಿ ಭಾರತೀಯ ಸಂಸ್ಕೃತಿಯ ಮೇಲಾಗುತ್ತಿದ್ದ ದಬ್ಬಾಳಿಕೆಯನ್ನು ಪ್ರಬಲವಾಗಿ ವಿರೋಧಿಸಿದ ಮಹಿಳಾ ನಾಯಕಿ. ಗುಜರಾತಿನ ಕೇಶವಲಾಲ್ ದಂಪತಿಗಳಿಗೆ ಜನಿಸಿದ ಲೀಲಾವತಿ, ಶಾಲಾ ದಿನಗಳಲ್ಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿದರು. ತಾರುಣ್ಯದ ಮೆಟ್ಟಲೇರುತ್ತಲೇ ದಾಸ್ಯಮುಕ್ತಿ ಆಂದೋಲನದಲ್ಲಿ ಭಾಗಿಯಾಗಿ ಅಸಹಕಾರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಲೀಲಾವತಿಯವರು ಗಾಂಧೀಜಿಯ ವಿಚಾರಗಳನ್ನು ಚಾಚೂತಪ್ಪದೆ ಪಾಲಿಸುವ ದೀಕ್ಷೆತೊಟ್ಟರು. ಮಹಿಳೆಯರೆಂದರೆ ನಾಲ್ಕು ಗೋಡೆಗಳ ನಡುವೆ ಇರುವವರೆಂಬ ಭಾವ ಜೀವಂತವಾಗಿದ್ದ ಕಾಲಘಟ್ಟದಲ್ಲಿ ಯಾವ ಅಂಜಿಕೆಯೂ ಇಲ್ಲದೆ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡ ಚುರುಕುಮಾತಿನ ಯುವತಿಯ ತೀಕ್ಷ÷್ಣ ಭಾಷಣಗಳು ಜನಸಾಮಾನ್ಯರನ್ನು, ವಿಶೇಷವಾಗಿ ಯುವತಿಯರ ಮನಸೆಳೆಯಿತು. ಲಾಲ್‌ಭಾಯಿ ಸೇಠ್ ಜೊತೆಗಿನ ವೈವಾಹಿಕ ಜೀವನ ವೈಧವ್ಯದಲ್ಲಿ ಅಂತ್ಯವಾದರೂ ವಿಧವಾ ವಿವಾಹದ ದಿಟ್ಟ ನಿರ್ಣಯ ಕೈಗೊಂಡು ಕನ್ನಯ್ಯಲಾಲ್ ಮುನ್ಶಿಯವರನ್ನು ವರಿಸಿದ ಲೀಲಾವತಿ, ಮನೆಕೆಲಸ, ಕುಟುಂಬ ನಿರ್ವಹಣೆಯ ಒಟ್ಟಿಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸಿದರು. ಹೆಣ್ಣು ಮನಸ್ಸು ಮಾಡಿದರೆ ಎಲ್ಲಾ ಕಾರ್ಯಗಳೂ ಕೈಗೂಡುತ್ತವೆಯೆಂದು ಘೋಷಿಸಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಸಂಯೋಜಿಸಿದರು.
ಉಪ್ಪಿನ ಸತ್ಯಾಗ್ರಹ, ಜನ ಅಸಹಕಾರ ಆಂದೋಲನಗಳ ಯಶಸ್ಸಿಗೆ ಮಹಿಳೆಯರ ಅನನ್ಯ ಪಾತ್ರದ ಬಗ್ಗೆ ಯೋಚಿಸಿ ಆ ದಿಶೆಯಲ್ಲೂ ಕಾರ್ಯಪ್ರವೃತ್ತರಾಗಿ ತರುಣಿ ಸಭಾ, ಮಹಿಳಾ ಸಭಾಗಳನ್ನು ಸ್ಥಾಪಿಸಿದರು. ದೇಸೀ ವಸ್ತುಗಳ ಬಳಕೆ ಮತ್ತು ವ್ಯವಹಾರಕ್ಕೆ ಉತ್ತೇಜಿಸಿ `ಸ್ವದೇಶೀ ಭಂಡಾರ' ಸ್ಥಾಪಿಸಿ ಆಂಗ್ಲರ ವಿರುದ್ಧ ಆರ್ಥಿಕ ಸಮರಕ್ಕಿಳಿದು ದಾಖಲೆ ಮೆರೆದರು. ಕಟ್ಟುಪಾಡು, ಸಂಪ್ರದಾಯಗಳ ಒತ್ತಡದ ನಡುವೆಯೂ ಸೇರುತ್ತಿದ್ದ ಮಾನಿನಿಯರಿಗೆ ದೇಶದ ಪರಿಸ್ಥಿತಿಯನ್ನು ವಿವರಿಸಿದ ಪರಿಣಾಮ ಅತಿಹೆಚ್ಚು ಸಂಖ್ಯೆಯಲ್ಲಿ ಸ್ತ್ರೀಯರ ಬೆಂಬಲ ದೊರೆಯಿತು. ಜೈಲುಶಿಕ್ಷೆಯನ್ನು ಪ್ರಸಾದವೆಂದೇ ಭಾವಿಸಿ ಅನೇಕ ಬಾರಿ ಬಂಧಿತರಾದರೂ ಧೃತಿಗೆಡಲಿಲ್ಲ. ಮುಂಬೈ ಶಾಸನಸಭೆಯ ಸದಸ್ಯರಾಗಿ ಒಂಬತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಲೀಲಾವತಿಯವರು ಸಾಹಿತ್ಯಿಕ ಚಟುವಟಿಕೆಗಳಿಂದ ವಿಮುಖರಾಗಲಿಲ್ಲ.
ಜೀವನರೇಖಾಚಿತ್ರ, ಪ್ರಬಂಧ, ಪೌರಾಣಿಕ-ಸಾಮಾಜಿಕ-ಐತಿಹಾಸಿಕ-ಸಾಹಿತ್ಯಿಕ ವ್ಯಕ್ತಿಗಳ ಜೀವನಗಾಥೆ, ಲಘುಕಥೆ, ಲಘುನಾಟಕ ಬರಹಗಳಲ್ಲೂ ತಮ್ಮನ್ನು ತಾವು ಗುರುತಿಸಿ ಸ್ವತಂತ್ರ ಭಾರತದಲ್ಲಿ ಒಂದವಧಿಗೆ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾದರು. ಚಲನಚಿತ್ರಗಳ ಅಶ್ಲೀಲ ದೃಶ್ಯಗಳು, ಸಂಭಾಷಣೆಗಳಿಗೆ ಕತ್ತರಿ ಹಾಕಬೇಕೆಂದು ಹೋರಾಟ ನಡೆಸಿ ಕಾಯ್ದೆ ರೂಪಿಗೂ ಕಾರಣರಾದರು. ಜೀವನದ ಸಂಧ್ಯಾಕಾಲದಲ್ಲಿ ಎಲೆಮರೆಯ ಕಾಯಿಯಂತೆ ಬಾಳಿ ಅಸ್ತಂಗತರಾದ ಲೀಲಾವತಿ ಮುನ್ಶಿಯವರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಲ್ಲಿಸಿದ ಕೊಡುಗೆ ಸದಾ ಸ್ಮರಣೀಯ. ನಿರ್ಭಯಾ ಪ್ರಕರಣದ ತರುವಾಯ ದೇಶದಾದ್ಯಂತ ಭುಗಿಲೆದ್ದ ಆಕ್ರೋಶವು ಇತ್ತೀಚೆಗೆ ಕೇವಲ ಕ್ಯಾಂಡಲ್ ಉರಿಸುವುದಕ್ಕೆ ಸೀಮಿತಗೊಳ್ಳುತ್ತಿರುವುದು ವಿಷಾದನೀಯ ವಿಚಾರ. ಹೆಣ್ಣಿನ ಮಾನಕ್ಕಾಗಿ ರಾಮಾಯಣ, ಮಹಾಭಾರತ ಯುದ್ಧವೇ ನಡೆದಿರುವ ನಾಡಿನಲ್ಲಿ
ಸ್ತ್ರೀ ಸ್ವಾತಂತ್ರ‍್ಯವೆಂಬುದು ಮರೀಚಿಕೆಯಾಗಕೂಡದು. ನಾಡಿನ ಹೆಣ್ಮಕ್ಕಳು ತಮ್ಮೊಳಗೆ ತಾವು ಮಾತಂಗಿನಿ ಮತ್ತು ಲೀಲಾವತಿಯವರ ಕ್ಷಾತ್ರವರ್ಚಸ್ಸನ್ನು ಹುಡುಕಿ ಕಾರ್ಯಾಚರಿಸುವುದು ಕಾಲದ ಅನಿವಾರ್ಯತೆ ಮತ್ತು ಉಭಯಸಾಧಕರ ಜನ್ಮೋತ್ಸವಕ್ಕೆ ಸಲ್ಲಿಸುವ ಗೌರವ.

Next Article