ಹೆರಿಗೆಯಾಗಿ ೨ ದಿನಗಳು ಕಳೆದರೂ ಸೂಕ್ತ ಮಾಹಿತಿ ನೀಡದ ವೈದ್ಯಾಧಿಕಾರಿಗಳು: ಜಿಲ್ಲಾಧಿಕಾರಿಗಳಿಗೆ ಪೋಷಕರು ದೂರು
ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಆ.೧೮ರಂದು ಹೆರಿಗೆಯಾಗಿದ್ದರೂ ಎರಡು ದಿನಗಳ ಕಾಲ ಸೂಕ್ತ ಮಾಹಿತಿ ನೀಡದೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಮೂಲಕ ತಮ್ಮ ಮಗುವಿಗೆ ಅನ್ಯಾಯವಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಉನ್ನತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮಗುವಿನ ಪೋಷಕರು ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಪಾಣೆಮಂಗಳೂರಿನ ನಿವಾಸಿ ಹಾಗೂ ಸಂತ್ರಸ್ತೆ ಭವ್ಯ ಎಂಬವರು ತಮಗೆ ಅನ್ಯಾಯ ಆಗಿರುವುದಾಗಿ ಪೊಲೀಸರಿಗೆ ದೂರು ನೀಡಿರುವುದಲ್ಲದೆ, ಸಹೋದರ ಸಂತೋಷ್ ಕುಮಾರ್ ಎಂಬವರು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಭವ್ಯ ಅವರು ತಮ್ಮ ಎರಡನೆ ಹೆರಿಗೆಗಾಗಿ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಆ. ೧೭ರಂದು ತೆರಳಿದ್ದರು. ಈ ಸಂದರ್ಭ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರು ಇಲ್ಲದ ಕಾರಣ ಅವರನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಆ.೧೮ರ ಬೆಳಗ್ಗೆ ೨ ಗಂಟೆಯ ವೇಳೆಗೆ ದಾಖಲಿಸಲಾಗಿತ್ತು. ಬೆಳಗ್ಗೆ ೯.೫೦ರ ಸುಮಾರಿಗೆ ಭವ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್ ಆಗಿದೆ ಎಂದು ತಿಳಿಸಿದ್ದರು.
ಮಗುವಿಗೆ ಉಸಿರಾಟದ ತೊಂದರೆ ಇರುವುದಾಗಿ ಹೇಳಿ ಮಗುವನ್ನು ಎನ್‌ಎಸ್‌ಯುಐಗೆ ದಾಖಲಿಸಲಾಗಿತ್ತು. ಆ ಬಳಿಕ ಮಂಗಳವಾರ ಸಂಜೆ ಬಂದು ಮಗುವಿಗೆ ಒಂದು ಕಣ್ಣಿನ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಇದರಿಂದ ಆಘಾತವಾಗಿದೆ. ಈ ಬಗ್ಗೆ ವೈದ್ಯರು ಹಾಗೂ ಮೇಲಾಧಿಕಾರಿಗಳು ಕಾರಣ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ವೈದ್ಯಕೀಯ ವರದಿಗಳನ್ನು ನೀಡದಿರುವುದು ಕೂಡಾ ಸಂಶಯಗಳಿಗೆ ಕಾರಣವಾಗಿದ್ದು, ಮಗವಿಗೆ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಂತೋಷ್‌ರವರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.