ಹೆಸ್ಕಾಂ ಅಧ್ಯಕ್ಷರಾಗಿ ಖಾದ್ರಿ ಅಧಿಕಾರ ಸ್ವೀಕಾರ
ಹುಬ್ಬಳ್ಳಿ: ರೈತರು ಉತ್ತಿ, ಬಿತ್ತಿದಾಗ ಮಾತ್ರ ನಾವೆಲ್ಲ ಅನ್ನಾಹಾರ ಕಾಣಲು ಸಾಧ್ಯ. ಅಂತಹ ಅನ್ನದಾತನ ಹಿತ ಕಾಯುವ ದೃಷ್ಠಿಯಿಂದ ನಿರಂತರ ವಿದ್ಯುತ್ ಪೂರೈಕೆಯೇ ನನ್ನ ಮೊದಲ ಆದ್ಯತೆ ಎಂದು ಹೆಸ್ಕಾಂ ನೂತನ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು.
ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು, ಗುರುತರ ಜವಾಬ್ದಾರಿ ನೀಡಿದ್ದಾರೆ. ಮನೆ ಮನೆಗೂ ಉಚಿತ ವಿದ್ಯುತ್ ಕಲ್ಪಿಸುವ ಮೂಲಕ ಕಾಂಗ್ರೆಸ್ ಬಡವರ ಪಾಲಿನ ಕಲ್ಪವೃಕ್ಷವಾಗಿದೆ. ಆ ಯೋಜನೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಇಲಾಖೆಯಲ್ಲಿನ ಸೋರಿಕೆಯನ್ನು ತಡೆಗಟ್ಟುವಲ್ಲಿ ಹೆಚ್ಚಿನ ಮುತವರ್ಜಿ ವಹಿಸಲಾಗುವುದು. ಅನಾಚಾರ, ಅವ್ಯವಹಾರ ಎಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೆಸ್ಕಾಂ ವ್ಯಾಪ್ತಿಯ ೭ ಜಿಲ್ಲೆಗಳಲ್ಲೂ ಸಂಚರಿಸಿ, ಅಲ್ಲಿನ ಕುಂದು ಕೊರತೆಗಳನ್ನು ನೀಗಿಸುವುದರ ಜೊತೆಗೆ ಪಕ್ಷಕ್ಕೆ ಹೆಸರು ತಂದುಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತೇನೆ. ಅಲ್ಲದೇ, ನನ್ನ ಆಡಳಿತಾವಧಿಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ದೊಡ್ಡ ಹುಣಸೆ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಅವರು ಯಾವತ್ತೂ ಜಾತಿ ಧರ್ಮಕ್ಕೆ ಅಂಟಿಕೊಂಡವರಲ್ಲ. ಜಾತ್ಯಾತೀತವಾಗಿ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ಕತ್ತಲಾದ ಮನೆಗೆ ಬೆಳಕನ್ನು ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರಲದಲಿ ಅವರು ಯಶಸ್ವಿಯೂ ಆಗಲಿದ್ದಾರೆ ಎಂದು ಆಶೀರ್ವದಿಸಿದರು.
ಶಿಗ್ಗಾಂವಿ ವಿರಕ್ತಿಮಠದ ಸ್ವಾಮೀಜಿ ಮಾತನಾಡಿದರು. ವಿವಿಧ ಧರ್ಮಗಳ ಧರ್ಮಗುರುಗಳು ಆಶೀರ್ವಚನ ನೀಡಿದರು. ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಜಮೀರ್ ಅಹ್ಮದ ಖಾನ್, ಶಾಸಕರಾದ ಶ್ರೀನಿವಾಸ ಮಾನೆ, ಯಾಸಿರ್ ಖಾನ್ ಪಠಾಣ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಪ್ರೊ. ಐ.ಜಿ.ಸನದಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಧರ್ಮ ಗುರುಗಳಾದ ಸದಾಶಿವಪೇಟೆಯ ಸ್ವಾಮೀಜಿ, ಶಹಜಾದೇ ಪೀರಾ ಖಾದ್ರಿ, ಸಯ್ಯದ್ ಅಜ್ಮತ್, ಮೌಲಾನಾ ಸೈಯ್ಯದ್ ನಿಸಾರ ಅಹ್ಮದ, ಅಲ್ಲಿಮುದ್ದೀನ್, ಸೈಯ್ಯದ್ ತಾಜುದ್ದೀನ್ ಖಾದ್ರಿ, ನಾಸಿರ್ ಅಹ್ಮದ್ ಹಾಗೂ ಹೆಸ್ಕಾಂ ಅಧಿಕಾರಿಗಳು ಇದ್ದರು.