ಹೆಸ್ಕಾಂ ನಿವೃತ್ತ ಇಂಜಿನಿಯರ್ ಮನೆಯಲ್ಲಿ 97 ಲಕ್ಷ ನಗದು ಪತ್ತೆ
ರಾಣೇಬೆನ್ನೂರು: ಇಲ್ಲಿಯ ಈಶ್ವರ ನಗರದ ಹೆಸ್ಕಾಂ ನಿವೃತ್ತ ಕಿರಿಯ ಇಂಜಿನಿಯರ್ ಬಸವರಾಜ ಮಳೇಮಠ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ೯೭ ಲಕ್ಷ ರೂ. ನಗದು ಹಣ ಪತ್ತೆಯಾಗಿದೆ.
ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗಿನ ಜಾವದವರೆಗೂ ಶೋಧಕಾರ್ಯ ನಡೆಸಿ ಅಪಾರ ಪ್ರಮಾಣದ ಹಣ, ಆಸ್ತಿ ಜಪ್ತಿ ಮಾಡಿದ್ದಾರೆ.
೯೭ ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ ೩೦ ಲಕ್ಷ ಸೇರಿ ೧.೨೭ ಕೋಟಿ ಹಣ ಪತ್ತೆಯಾಗಿದೆ. ಜತೆಗೆ ೩೧೭ ಗ್ರಾಂ ಚಿನ್ನ, ೨೬೦ ಗ್ರಾಂ ಬೆಳ್ಳಿ ಹಾಗೂ ವಿಮೆ ಪಾಲಿಸಿಗಳಿಗೆ ಸಂಬಂಧಿಸಿದಂತೆ ಕೆಲ ದಾಖಲೆಗಳು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಮಾ ಪಾಲಿಸಿಗಳ ಮೌಲ್ಯ ಸುಮಾರು ೧ ಕೋಟಿ ಎಂದು ಅಂದಾಜಿಸಲಾಗಿದೆ.
ರಾಣೇಬೆನ್ನೂರು ನಗರ ಹಾಗೂ ದಾವಣಗೆರೆಯಲ್ಲಿ ೩ ಭವ್ಯ ಮನೆಗಳು. ರಾಣೇಬೆನ್ನೂರಿನ ಸುವರ್ಣ ಪಾರ್ಕ್ ಬಳಿ ೪ ಖಾಲಿ ನಿವೇಶನದಲ್ಲಿ ಭವ್ಯ ಭಂಗಲೆ ಹಾಗೂ ಗಾರ್ಡ್ನ್, ೨೬ ಖಾಲಿ ನಿವೇಶನಗಳು ಮತ್ತು ಚಿದಂಬರ ನಗರದಲ್ಲಿ ವಾಣಿಜ್ಯ ಕಟ್ಟಡ ಹಾಗೂ ಮನೆ ಇರುವುದು ಪತ್ತೆಯಾಗಿದೆ. ಹೆಸ್ಕಾಂನಲ್ಲಿ ಸ್ಟೋರ್ ಕೀಪರ್ ಆಗಿದ್ದಾಗ ಟ್ರಾನ್ಸ್ಫಾರ್ಮರ್ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆಸಿದ ಆರೋಪ ಇವರ ಮೇಲಿತ್ತು. ಕಿರಿಯ ಇಂಜಿನಿಯರ್ ಆಗಿ ಬಡ್ತಿ ಹೊಂದಿದ್ದ ಇವರು ೨೦೨೩ರ ಮೇ ತಿಂಗಳಲ್ಲಿ ನಿವೃತ್ತರಾಗಿದ್ದರು.
ಧಾರವಾಡ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿಗಳಾದ ವಿಜಯ ಬಿರಾದಾರ, ಶಂಕರ ರಾಗಿ, ವೆಂಕನಗೌಡ ಪಾಟೀಲ, ಸಿಪಿಐಗಳಾದ ಬಸವರಾಜ, ಕೆ.ಬಿ.ಬಿನ್ನ ನೇತೃತ್ವದಲ್ಲಿ ದಾಳಿ ನಡೆದಿದೆ.