ಹೈಕಮಾಂಡ್‌ನಿಂದ ಸಚಿವರ ಕಾರ್ಯವೈಖರಿ ಪರಿಶೀಲನೆ
ಹುಬ್ಬಳ್ಳಿ: ಸಚಿವ ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ ಆದರೆ, ಸಚಿವರ ಕಾರ್ಯವೈಖರಿಯ ವರದಿಯನ್ನು ಪಕ್ಷದ ವರಿಷ್ಠರು ಕೇಳಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ತಮ್ಮ ಇಲಾಖೆಯಲ್ಲಿ ಯಾವೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ? ಅವರ ಕಾರ್ಯವೈಖರಿ ಹೇಗಿದೆ ಎಂಬ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚಿಸಿದೆ. ಸಚಿವರ ಕಾರ್ಯವೈಖರಿ ಪರಿಶೀಲನೆ ಮಾಡುವುದು ಕಾಂಗ್ರೆಸ್‌ನಲ್ಲಿ ಈ ಹಿಂದಿನಿಂದಲೂ ಪಾಲಿಸುತ್ತಾ ಬಂದಿರುವ ಪದ್ಧತಿಯಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ಸುದ್ದಿ ಮಾಧ್ಯಮಗಳ ಸೃಷ್ಟಿ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾವನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ ನಡೆಸಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಈ ಹಿಂದೆ ರಾಜ್ಯಪಾಲರಿಗೆ ದೂರು ನೀಡಿದ್ದರು. ರಾಜ್ಯಪಾಲರು ಆ ದೂರನ್ನು ತಿರಸ್ಕರಿಸಿದ್ದರು. ಅವು ಅತ್ಯಂತ ಗಂಭೀರ ದೂರುಗಳಾಗಿವೆ. ರಾಜ್ಯಪಾಲರು ದೂರು ತಿರಸ್ಕರಿಸಿದ್ದು ಸರಿಯಲ್ಲ. ನಿರ್ಣಯವನ್ನು ಪುನರ್ ಪರಿಶೀಲಿಸಿ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.