ಹೈಕೋರ್ಟ್‌ಗೆ ಪವಿತ್ರಾಗೌಡ ಜಾಮೀನು ಅರ್ಜಿ ಸಲ್ಲಿಕೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ೧ ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಹೈಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ೫೭ನೇ ಸಿಸಿಹೆಚ್ ನ್ಯಾಯಾಲಯ ಅ. ೧೪ರಂದು ನಟ ದರ್ಶನ್ ಸೇರಿದಂತೆ ಪವಿತ್ರಾಗೌಡ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಪವಿತ್ರಾಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ಅವರು ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೂ ಮುನ್ನ ಒಮ್ಮೆ ಪವಿತ್ರಾಗೌಡ ಅವರು ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ತಮ್ಮ ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದರು. ರೇಣುಕಾಸ್ವಾಮಿ ಹತ್ಯೆಯಲ್ಲಿ ತಮ್ಮ ಕಕ್ಷಿದಾರರ ಯಾವುದೇ ಪಾತ್ರವಿಲ್ಲ. ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿ ಪವಿತ್ರಾಗೆ ಮಾನಸಿಕ ಕಿರುಕುಳ ನೀಡಿದ್ದರು. ಆ ಕೋಪಕ್ಕೆ ಪವಿತ್ರಾಗೌಡ ಒಂದೆರಡು ಏಟು ರೇಣುಕಾಸ್ವಾಮಿಗೆ ಹೊಡೆದಿದ್ದರು. ಆದರೆ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆ ತಂದ ನಂತರದಲ್ಲಿ ಆದ ಬೆಳವಣಿಗೆಗೆ ಪವಿತ್ರಾಗೌಡ ಕಾರಣರಲ್ಲ. ಹತ್ಯೆ ಕೃತ್ಯದಲ್ಲಿ ಆಕೆಯ ಪಾತ್ರವಿಲ್ಲ. ಅವರು ತೀವ್ರವಾಗಿ ಮಾನಸಿಕವಾಗಿ ನೊಂದಿದ್ದಾರೆ ಎಂದು ಪವಿತ್ರಾಗೌಡ ಪರ ವಕೀಲರು ಈ ಹಿಂದೆ ವಾದಿಸಿದ್ದರು.