ಹೊರನಾಡ ಕನ್ನಡಿಗರಿಂದ ಹರಡಿದ ಕನ್ನಡದ ಕಂಪು
ದುಬೈ: ಜಗತ್ತಿನಾದ್ಯಂತ ಕನ್ನಡಿಗರು ಆಯಾ ನಾಡಿನಲ್ಲಿ ಮನೆಮಾತಾಗುವ ಮೂಲಕ ಕನ್ನಡದ ಸಿರಿಯನ್ನು ಹೆಚ್ಚಿಸಿದ್ದಾರೆ. ಅದೇ ರೀತಿ ದುಬೈಯಲ್ಲಿಯೂ ಸಾಕಷ್ಟು ಕನ್ನಡಿಗರು ನೆಲೆಯೂರುವ ಮೂಲಕ ಕನ್ನಡದ ಕಂಪನ್ನು ಹರಡಿ ಕನ್ನಡಾಭಿಮಾನ ಮೆರೆದಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಮನದಾಳದ ಮಾತನ್ನು ಆಡಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು.ಎ.ಇ. ಘಟಕದ ವತಿಯಿಂದ ವುಡ್‌ಲೆಮ್ ಪಾರ್ಕ್ ಶಾಲಾ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ದುಬೈ ಗಡಿನಾಡ ಉತ್ಸವ ಹಾಗೂ ಗಡಿನಾಡು ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕರ್ನಾಟಕದ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿರುವುದರಿಂದ ಎಲ್ಲರೂ ಕನ್ನಡಗಿರನ್ನು ಪ್ರೀತಿಸಿ ಗೌರವಿಸಿದ್ದನ್ನು ನಾನು ಕಂಡಿದ್ದೇನೆ. ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ೨೫ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿ ಹೋದರೂ ಕನ್ನಡಿಗರು ಸಿಕ್ಕೇ ಸಿಗುತ್ತಾರೆ. ಬೇರೆ ಬೇರೆ ದೇಶದಲ್ಲಿ ವಾಸಿಸಿದರೂ ಕನ್ನಡಾಭಿಮಾನವನ್ನು ಬಿಟ್ಟುಕೊಟ್ಟಿಲ್ಲ ಎಂದರು.
ದುಬೈಯಲ್ಲಿ ವಾಸಿಸುವ ಲಕ್ಷಾಂತರ ಕನ್ನಡಿಗರು ಕನ್ನಡಪರ ಸಂಘಟನೆಗಳನ್ನು ಕಟ್ಟಿಕೊಂಡು ಕನ್ನಡ ನಾಡಿನ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿಗಳುನ್ನು ತಾವಿರುವ ಪ್ರದೇಶವನ್ನು ಕನ್ನಡಮಯವಾಗಿ ಮಾಡಿದ್ದಾರೆ. ಪ್ರತಿ ವರ್ಷ ಗಡಿನಾಡು ಉತ್ಸವ ಮಾಡುವ ಮೂಲಕ ಕನ್ನಡದ ವಾತಾವರಣವನ್ನು ಹೆಚ್ಚೆಚ್ಚು ಈ ಪ್ರದೇಶದಲ್ಲಿ ಬಿತ್ತರಿಸಿ ಕರ್ನಾಟಕದ ಗೌರವ ಹೆಚ್ಚಿಸಿರುವ ಇಲ್ಲಿನ ಕನ್ನಡಿಗರಿಗೆ ಕರ್ನಾಟಕದ ಪರವಾಗಿ ವಿಶೇಷ ಅಭಿನಂದನೆ ಸಲ್ಲಿಸಿದರು.