For the best experience, open
https://m.samyuktakarnataka.in
on your mobile browser.

ಹೊಸ ವರ್ಷ-೨೦೨೪ಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ

04:11 AM Jan 01, 2024 IST | Samyukta Karnataka
ಹೊಸ ವರ್ಷ ೨೦೨೪ಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ

ಹುಬ್ಬಳ್ಳಿ: ನಗರದಲ್ಲಿ ನೂತನ ವರ್ಷವನ್ನು (೨೦೨೪)ನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮನೆಮನೆಯಲ್ಲಿ ರಾತ್ರಿ ೧೧.೫೯ರವರೆಗೆ ಕಾದ ಜನ ಪರಸ್ಪರ ಶುಭಾಯ ಕೋರಿ, ಸಿಹಿ ಹಂಚಿ ಸಂಭ್ರಮಿಸಿದರೆ, ಕೆಲವೆಡೆ ಯುವಕರು ಪಟಾಕಿ ಸಿಡಿಸಿ ಹೊಸ ವರ್ಷವನ್ನು ಅದ್ಧೂರಿಯಾಗಿ ಗೆಳೆಯರೊಂದಿಗೆ ಸ್ವಾಗತಿಸಿದರು.
ಈ ವರ್ಷ ವೀಕೆಂಡ್ ಡಿ.೩೧ ಬಂದಿದ್ದರಿಂದ ಶನಿವಾರ ಮತ್ತು ರವಿವಾರ ಎರಡು ದಿನ ರಜೆ ಸಿಕ್ಕಂತಾಗಿದ್ದು, ಹೆಚ್ಚಿನ ಜನರು ತಮ್ಮಿಷ್ಟದ ಸ್ಥಳಗಳಿಗೆ ಪ್ರಯಾಣ ಬೆಳೆಸಿದ್ದು ಕಂಡು ಬಂತು. ನಗರದಲ್ಲಿ ಕೆಲ ಹೋಟೆಲ್‌ಗಳು, ಗಲ್ಲಿಗಳಲ್ಲಿ ಸಂಭ್ರಮಾಚರಣೆ ನಡೆಯಿತು. ರಾತ್ರಿ ೧೦ ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು ಎಂಬ ನಿಯಮದಿಂದ ಸಾಮೂಹಿಕ ಪಾರ್ಟಿಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದವು. ಇದರ ಜೊತೆಗೆ ಸಾರ್ವಜನಿಕರಿಗೆ ೧೨.೩೦ ಗಂಟೆಯವರೆಗೆ ಆಚರಣೆಗೆ ಅವಕಾಶ ನೀಡಲಾಗಿತ್ತು. ಇದರಿಂದ ಹೋಟೆಲ್‌ಗಳಲ್ಲೂ ಕೂಡ ಅಷ್ಟೇನೂ ರಶ್ ಕಂಡು ಬರಲಿಲ್ಲ.
ರಾತ್ರಿ ೧೨ ಗಂಟೆಯ ವೇಳೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಗೋಕುಲ ರಸ್ತೆ ಸೇರಿ ವಿವಿಧೆಡೆ ಯುವಕರು ಗುಂಪು ಗುಂಪಾಗಿ ಬೈಕ್‌ಗಳಲ್ಲಿ ರೌಂಡ್ ಹಾಕಿ ಹೊಸವರ್ಷವನ್ನು ಸ್ವಾಗತಿಸಿದರು. ಕ್ಲಬ್ ರಸ್ತೆ ಸೇರಿದಂತೆ ಹಳೇಹುಬ್ಬಳ್ಳಿ, ವಿದ್ಯಾನಗರ, ಗೋಪನಕೊಪ್ಪ, ನವನಗರದಲ್ಲಿ ರಸ್ತೆಯಲ್ಲಿ ಯುವಕರು ಹ್ಯಾಪಿ ನ್ಯೂ ಇಯರ್ ಎಂದು ಬರೆದು ಶುಭಕೋರಿದರು.
ಎರಡು ದಿನ ರಜೆ ಸಿಕ್ಕ ಹಿನ್ನೆಲೆಯಲ್ಲಿ ಬಹುತೇಕ ವಾಣಿಜ್ಯನಗರಿ ಜನರು ಶಿರಡಿ, ತಿರುಪತಿ, ಉಡುಪಿ ಹೀಗೆ ದೇವರ ದರ್ಶನಕ್ಕೆ ಕೆಲವರು ತೆರಳಿದರೆ, ಉಳಿದವರು ಗೋವಾಕ್ಕೆ ತೆರಳಲು ಮೊದಲೆ ಪ್ಲ್ಯಾನ್ ಮಾಡಿದ್ದರಿಂದ ರವಿವಾರ ಅವಳಿನಗರದ ರಸ್ತೆಗಳು ಹೆಚ್ಚಿನ ಸಂಚಾರವಿರಲಿಲ್ಲ. ಸ್ನೇಹಿತರು ಮತ್ತು ಬಂಧುಗಳೊಂದಿಗೆ ಮನೆಗಳಲ್ಲಿ ಸೇರಿ ಮಧ್ಯರಾತ್ರಿ ಕೇಕ್ ಕತ್ತರಿಸಿದ್ದು, ಹ್ಯಾಪಿ ನ್ಯೂ ಇಯರ್ ಎಂದು ಶುಭ ಕೋರಿಕೊಳ್ಳಲಾಯಿತು.

ಕೇಕ್‌ಗೆ ಬೇಡಿಕೆ:
ಈ ವರ್ಷ ಬೇಕರಿಗಳಲ್ಲಿ ವಿವಿಧ ಸ್ವಾಧದ, ವಿನ್ಯಾಸದ ಕೇಕ್‌ಗಳನ್ನು ತಯಾರಿಸಲಾಗಿತ್ತು. ಹೆಚ್ಚಿನ ಜನರು ಸಂಜೆ ವೇಳೆಗೆ ಬೇಕರಿಗೆ ಆಗಮಿಸಿ ಕೇಕ್ ಖರೀದಿಸಿದ್ದು ಕಂಡು ಬಂತು. ನಗರದ ಜನನ್ಯ ಬೇಕರಿ, ಮಹಾವೀರ ಬೇಕರಿ, ಮಂಜುನಾಥ ಬೇಕರಿ, ಮಿಶ್ರಾಪೇಡಾ ಸೇರಿದಂತೆ ವಿವಿಧ ಕಡೆ ೧ ಕೆ.ಜಿ. ಹಾಗೂ ಅರ್ಧ ಕೆ.ಜಿ. ಕೇಕ್‌ಗಳನ್ನು ತಯಾರಿಸಿ ಇಡಲಾಗಿತ್ತು. ರೆಗ್ಯುಲರ್ ಕೇಕ್ ಕೆ.ಜಿ.ಗೆ ೨೫೦ರವರೆಗೆ, ಫೇಸ್ಟ್ರಿ ಕೆಜಿಗೆ ೩೦೦, ರಸಮಲೈ, ಓರಿಯೋ, ಬ್ಲಾಕ್ ಫಾರೆಸ್ಟ್, ವೈಟ್ ಫಾರೆಸ್ಟ್, ವೆನಿಲ್, ಬಟರ್‌ಸ್ಕಾಚ್ ವಿವಿಧ ಸ್ವಾಧಗಳ ಕೇಕ್ ಖರೀದಿಸಿದ್ದು ಕಂಡು ಬಂತು. ವಿಶೇಷ ವಿನ್ಯಾಸದ ಕೇಕ್‌ಗಳಿಗೆ ಆಯಾ ವಿನ್ಯಾಸಕ್ಕೆ ತಕ್ಕಂತೆ ದರ ನಿಗಧಿ ಮಾಡಲಾಗಿತ್ತು.

ಬಿಗಿ ಬಂದೋಬಸ್ತ್:
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು, ಹೊಸ ವರ್ಷ ಆಚರಣೆಗೆ ಎಲ್ಲ ಹೋಟೆಲ್‌ಗಳಿಗೆ ಕೆಲ ನಿಯಮಗಳನ್ನು ಅಳವಡಿಸಿದ್ದರು. ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ಥ್ ಮಾಡಲಾಗಿತ್ತು. ೧೧೨ ರ ಸಿಬ್ಬಂದಿ, ಪೆಟ್ರೋಲಿಂಗ್ ವಾಹನ ಗಸ್ತು ಮಾಡಲಾಗಿತ್ತು. ಕಿತ್ತೂರು ರಾಣಿ ಚನ್ನಮ್ಮ ವೃತ್ತ ಸೇರಿದಂತೆ ಸೂಕ್ಷö್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು.