For the best experience, open
https://m.samyuktakarnataka.in
on your mobile browser.

ಹೊಸ ಸವಾಲುಗಳ ಪರ್ವ

02:00 AM May 21, 2024 IST | Samyukta Karnataka
ಹೊಸ ಸವಾಲುಗಳ ಪರ್ವ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಮಾತಿಗೆ ಅನುಗುಣವಾಗಿ ಕಾಲಮಿತಿಯೊಳಗೆ ಐದು ಗ್ಯಾರಂಟಿಗಳ ಜಾರಿ ಪ್ರಕ್ರಿಯೆಗೆ ರತ್ನಗಂಬಳಿಯ ಸ್ವಾಗತದ ಮೆಚ್ಚುಗೆ ನೀಡಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿಶ್ವಾಸಾರ್ಹತೆಯನ್ನು ಮುಂಬರುವ ವರ್ಷಗಳಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸವಾಲುಗಳ ರೂಪದಲ್ಲಿ ಎದುರಾಗುತ್ತಿರುವ ಜನರ ಸಂಕಟಗಳ ನಿವಾರಣೆಯನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಕೌಶಲ್ಯವನ್ನು ಪ್ರದರ್ಶನ ಮಾಡುವುದು ಈಗಿರುವ ದೊಡ್ಡ ಪರೀಕ್ಷೆ. ಏಕೆಂದರೆ, ಐದು ಗ್ಯಾರಂಟಿಗಳ ಜಾರಿ ಮೂಲಕ ಜನಮಾನಸದ ವಿಶ್ವಾಸವನ್ನು ನಿರೀಕ್ಷೆಗೂ ಮೀರಿ ಗಳಿಸಿಕೊಂಡ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಕರ್ನಾಟಕ ಬದಲಾದ ದಿನಮಾನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆಯಂತೂ ಇದೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಆರಂಭವಾಗಲಿರುವ ಹೊಸ ಪರ್ವದಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜನಸ್ನೇಹಿ ವಾತಾವರಣ ರೂಪುಗೊಳ್ಳುವಂತೆ ಮಾಡುವುದು ಆದ್ಯತೆಯ ಮೇಲಿನ ಕೆಲಸವಾಗಬೇಕು. ಸರ್ಕಾರದ ಆಡಳಿತದ ಗುಣಮಟ್ಟ ಅರಿಯಬೇಕಾದರೆ ತಾಲೂಕು ಕಚೇರಿಗಳು ಹಾಗೂ ಪೊಲೀಸ್ ಠಾಣೆಗಳ ಬಳಿ ಸುಳಿದಾಡಿದರೆ ಸಾಕು. ತಾಲೂಕು ಕಚೇರಿಗಳು ಯಥಾ ಪ್ರಕಾರದಲ್ಲಿ ಕೆಲಸ ಮಾಡುತ್ತಿರಬಹುದು. ಪೊಲೀಸ್ ಠಾಣೆಗಳು ಕೂಡಾ ಎಂದಿನಂತೆ ಕಾರ್ಯ ನಿರ್ವಹಿಸುತ್ತಿರಬಹುದು. ಆದರೆ, ಜನಸಾಮಾನ್ಯರಿಗೆ ಈ ವ್ಯವಸ್ಥೆ ಇರುವುದು ನಮ್ಮ ಕಷ್ಟಗಳ ನಿವಾರಣೆಗೆ ಎಂಬ ಅನುಭವ ಬರುವ ವಾತಾವರಣ ಸೃಷ್ಟಿಯಾದರೆ ಸರ್ಕಾರದ ಆಡಳಿತ ಯಶಸ್ಸು ಕಂಡಂತೆ ಎಂಬ ಅನುಭಸ್ಥರ ಮಾತಿನಲ್ಲಿ ಸತ್ಯವಿದೆ. ಯಾವ ಕಚೇರಿಗಳಲ್ಲಿ ಯಥಾಸ್ಥಿತಿ ಮನೆ ಮಾಡುತ್ತದೋ ಅಂತಹ ಸಂದರ್ಭದಲ್ಲಿ ದಲ್ಲಾಳಿಗಳ ಸೃಷ್ಟಿ ಆರಂಭವಾಗುತ್ತದೆ. ಕೆಲವು ಹಂತಗಳಲ್ಲಿ ದಲ್ಲಾಳಿಗಳೇ ಪ್ರಕರಣಗಳ ನಿರ್ಣಾಯಕರೂ ಆಗಿಬಿಡುವ ಎಲ್ಲಾ ಅಪಾಯಗಳು ಇವೆ ಎಂಬುದಕ್ಕೆ ಉತ್ತರದ ರಾಜ್ಯಗಳ ಜೊತೆಗೆ ನೆರೆಯ ಹಲವಾರು ರಾಜ್ಯಗಳಲ್ಲಿ ವರದಿಯಾಗಿರುವ ಪ್ರಕರಣಗಳ ನಿದರ್ಶನ ಸಾಕು. ಬೇರೆ ಊರಿನ ಹೆಮ್ಮಾರಿಯನ್ನು ನಮ್ಮೂರಿಗೆ ಕರೆತರುವ ವಾತಾವರಣ ಸೃಷ್ಟಿಯಾಗದಂತೆ ನೋಡಿಕೊಳ್ಳುವುದರಲ್ಲಿ ಸರ್ಕಾರದ ಆಡಳಿತಗಾರರ ಎಚ್ಚರದ ಕಣ್ಗಾವಲು ಅಗತ್ಯ. ಸಂಪುಟದಲ್ಲಿ ಅನುಭಸ್ಥ ಹಾಗೂ ಉತ್ಸಾಹಿ ಮಂತ್ರಿಗಳು ಇದ್ದಾರೆ. ಅವರಿಗೆ ಜನಕಲ್ಯಾಣದ ಗುರಿಯೂ ಇರುವ ಬಗ್ಗೆ ಸಂಶಯವಿಲ್ಲ. ಆದರೆ, ಕೆಲ ಮಂತ್ರಿಗಳ ಬಗ್ಗೆ ಇದೇ ಮಾತನ್ನು ಹೇಳುವುದು ಕಷ್ಟ. ಇದಕ್ಕೆ ಈ ಮಂತ್ರಿಗಳ ಬಹಿರಂಗ ವರ್ತನೆಯೇ ಆಧಾರ. ಇಂತಹ ಮಂತ್ರಿಗಳನ್ನು ತಿದ್ದಿ ತೀಡಿದರೆ ಆಗ ಸಂಘಟಿತ ರೀತಿಯಲ್ಲಿ ಸರ್ಕಾರದ ನೀತಿ-ನಿಲುವುಗಳು ಏಕರೂಪದಲ್ಲಿ ಕಾರ್ಯಾಚರಣೆಗೆ ಬರಲು ಸಾಧ್ಯವಾಗುತ್ತದೆ.
ಸಂಪುಟದ ಹೊಣೆಗಾರಿಕೆ ಇರುವುದು ನೀತಿ-ನಿಲುವುಗಳನ್ನು ರೂಪಿಸಿ ಅವುಗಳ ಕಾರ್ಯಸೂಚಿ ಜಾರಿಯಾಗುವಂತೆ ನೋಡಿಕೊಳ್ಳುವುದರಲ್ಲಿ. ನೀತಿ-ನಿಲುವು ರೂಪಿಸಿದಾಕ್ಷಣ ಆಡಳಿತ ಸುಧಾರಣೆಯಾಗಲಾರದು. ಈ ನೀತಿಗಳು ಅಧಿಕಾರಶಾಹಿಯ ಮೂಲಕ ಜಾರಿಯಾಗುವಂತೆ ನೋಡಿಕೊಳ್ಳುವುದರಲ್ಲಿ ಯಶಸ್ಸಿನ ಮಾರ್ಗವಿದೆ. ಅಧಿಕಾರಶಾಹಿ ಒಂದು ಕುದುರೆ ಅಷ್ಟೇ. ರಾಜಕೀಯ ನಾಯಕತ್ವವೆಂಬುದು ಈ ಕುದುರೆಯ ಸವಾರ. ಸವಾರನ ದೃಷ್ಟಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕುದುರೆ ಓಡುತ್ತದೆ ಎಂಬ ಮಾತಿನಂತೆ ಅಧಿಕಾರಶಾಹಿ ಕೂಡಾ ತನ್ನ ಕರ್ತವ್ಯಪರತೆಯನ್ನು ಪ್ರದರ್ಶಿಸುತ್ತದೆ. ಈ ಉದ್ದೇಶಕ್ಕಾಗಿ ಅಧಿಕಾರಿಗಳಿಗೆ ಹೊಸ ಉತ್ಸಾಹ ಹಾಗೂ ಉತ್ತೇಜನ ತುಂಬುವ ರೀತಿಯ ಶಿಬಿರಗಳು ಅಗತ್ಯ. ಸುಧಾರಣೆ ಎಂಬುದು ಒಂದುದಿನದ ಮಾತಲ್ಲ. ಅದು ನಿತ್ಯನಿರಂತರ. ಹೀಗಾಗಿ ವ್ಯವಸ್ಥೆಗೆ ಆಗಿಂದಾಗ್ಗೆ ಇಂತಹ ಸುಧಾರಣೆಯ ಅರಿವು ಮೂಡಿಸುವ ಅಗತ್ಯವಂತೂ ಇದ್ದೇ ಇದೆ.
ಕರ್ನಾಟಕ ಒಂದು ಪ್ರಗತಿಶೀಲ ರಾಜ್ಯ. ಯಾವುದೇ ದೃಷ್ಟಿಕೋನದಿಂದ ನೋಡಿದರೂ ದೇಶದಲ್ಲಿ ಮೊದಲ ಐದು ಸ್ಥಾನಗಳ ಪೈಕಿ ಕರ್ನಾಟಕದ ಹೆಸರು ಇದ್ದೇ ಇರುತ್ತದೆ. ವಿಜ್ಞಾನ ತಂತ್ರಜ್ಞಾನ, ಶಿಕ್ಷಣ ಕ್ಷೇತ್ರಗಳಲ್ಲಿ ರಾಜ್ಯದ ಸಾಧನೆಯ ಮುಂದೆ ಬೇರೆ ರಾಜ್ಯಗಳು ಗೌಣ. ಇದೇ ಸ್ಥಿತಿಯನ್ನು ಪರಿಸ್ಥಿತಿಗೆ ಅನುಗುಣವಾಗಿ ಇನ್ನಷ್ಟು ಸುಧಾರಿಸಲು ಶಿಕ್ಷಣ ಕ್ಷೇತ್ರವನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಅಗತ್ಯ ಬಹಳವಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಈ ಸುಧಾರಣೆ ಪ್ರಕ್ರಿಯೆ ಆರಂಭವಾದರೆ ಹೊಸ ತಲೆಮಾರನ್ನು ಸೃಷ್ಟಿಸುವುದು ಸುಲಭ. ಅಡಿಯಿಂದ ಮುಡಿಗೆ ಹೋಗುವುದು ಯಾವತ್ತಿಗೂ ರಾಜಮಾರ್ಗ. ಮುಡಿಯಿಂದ ಅಡಿಗೆ ಬರುವುದು ಒಪ್ಪದ ಮಾರ್ಗ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಸುಧಾರಣಾ ಪ್ರಕ್ರಿಯೆ ಆರಂಭಿಸಿ ಗುಣಮಟ್ಟದ ಬೋಧನೆ ಹಾಗೂ ಸೌಲಭ್ಯಗಳ ಸೃಷ್ಟಿಯ ಮೂಲಕ ಇಡೀ ಜಗತ್ತು ಕರ್ನಾಟಕದ ಕಡೆ ತಿರುಗಿನೋಡುವ ವಾತಾವರಣವನ್ನು ಸೃಷ್ಟಿಸಬಹುದು. ತೆರಿಗೆ ಪಾವತಿಯಲ್ಲಿ ಕರ್ನಾಟಕದ್ದು ಸಿಂಹಪಾಲು. ಏಕೆಂದರೆ, ರಾಜ್ಯದಲ್ಲಿ ಲವಲವಿಕೆಯ ಆರ್ಥಿಕ ಚಟುವಟಿಕೆ. ಸಂಪನ್ಮೂಲ ಸಂಗ್ರಹಣೆಗೆ ತೆರಿಗೆ ವಸೂಲಿ ಪ್ರಕ್ರಿಯೆ ರಾಜಮಾರ್ಗವೇ. ಕೇಂದ್ರದ ಜೊತೆ ಸೌಹಾರ್ದ ಮಾತುಕತೆಯೊಂದಿಗೆ ಅನುದಾನ ನ್ಯಾಯಸಮ್ಮತವಾಗಿ ದೊರೆಯುವ ವಾತಾವರಣ ನಿರ್ಮಿಸಿಕೊಳ್ಳುವುದು ಕೂಡಾ ಒಂದು ಸವಾಲು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮುಂಬರುವ ವರ್ಷಗಳು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಸತ್ವಪರೀಕ್ಷೆಯೂ ಹೌದು-ಜನರ ವಿಶ್ವಾಸಾರ್ಹತೆ ಗಳಿಸುವ ಮಾರ್ಗವೂ ಹೌದು.