For the best experience, open
https://m.samyuktakarnataka.in
on your mobile browser.

ಹೋರಾಟದ ನೆನಪಾಗಿ ಒಮ್ಮೆಗೆ ಕಣ್ಣಲ್ಲಿ ನೀರು ತುಂಬಿ ಬಂತು...

03:51 PM Feb 13, 2024 IST | Samyukta Karnataka
ಹೋರಾಟದ ನೆನಪಾಗಿ ಒಮ್ಮೆಗೆ ಕಣ್ಣಲ್ಲಿ ನೀರು ತುಂಬಿ ಬಂತು

ಅಯೋಧ್ಯಾ: 500 ವರ್ಷಗಳ ಹೋರಾಟದ ನೆನಪಾಗಿ ಒಮ್ಮೆಗೆ ಕಣ್ಣಲ್ಲಿ ನೀರು ತುಂಬಿ ಬಂತು ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯ ಶ್ರೀರಾಮ ಚಂದ್ರನ ದರ್ಶನ ಮಾಡಿದ ಚಿತ್ರಗಳನ್ನು ಹಂಚಿಕೊಂಡು ಪೋಸ್ಟ್‌ ಮಾಡಿರುವ ಅವರು "ಭವ್ಯ ಮಂದಿರದ ಮುಂದೆ ನಿಂತುಕೊಂಡವನಿಗೆ ಮೈಯೆಲ್ಲಾ ರೋಮಾಂಚನ, ಜೀವನ ಪಾವನವಾದ ಭಾವ. ಅಯೋಧ್ಯಾ ರಾಮ ಜನ್ಮಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಹೋರಾಟದ ನೆನಪಾಗಿ ಒಮ್ಮೆಗೆ ಕಣ್ಣಲ್ಲಿ ನೀರು ತುಂಬಿ ಬಂತು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿರುವ ಸಂತೋಷಕ್ಕೋ? ಅಥವಾ ಮಂದಿರ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದ ಲಕ್ಷಾಂತರ ಜನರಿಗಾಗಿ ಮೂಡಿದ ಅಶ್ರುತರ್ಪಣವೋ ನಾನರಿಯೆ.

ಯಾವ ಸರಯೂ ತೀರದಲ್ಲಿ ಗುಲಾಮಗಿರಿಯ ಪ್ರತೀಕವಾಗಿ ನಿಂತಿದ್ದ ವಿವಾದಿತ ಕಟ್ಟಡವನ್ನು ಕೆಡವಲು, ರಾಷ್ಟ್ರ ಪುರುಷ ರಾಮನಿಗೆ ಭವ್ಯ ರಾಷ್ಟ್ರ ಮಂದಿರವನ್ನು ಕಟ್ಟಲು ನಡೆಸಿದ ಎರಡು ಕರಸೇವೆ, ಜೊತೆಗಿದ್ದ ಕರಸೇವಕರು, ಸರಯೂ ನದಿಯಿಂದ ತಂದ ಮರಳಿನ ರಾಶಿ, ಮೈ ಮೇಲಿದ್ದ ಲಾಠಿಯೇಟಿನ ಬಾಸುಂಡೆಗಳು, ಗುಮ್ಮಟ ಪತನ, ತಾತ್ಕಾಲಿಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಹೊತ್ತದ್ದು, ಹುತಾತ್ಮ ಕರಸೇವಕರ ದೇಹಗಳು, ನೋವಿನಿಂದ ನರಳುತ್ತಿದ್ದ ಕರಸೇವಕರು, ಕರಸೇವಕರನ್ನು ಮಕ್ಕಳ ಹಾಗೆ ನೋಡಿಕೊಂಡ ದೇಶದ ಮಾತೆಯರು, ಇವರೆಲ್ಲರೂ ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋದರು.

ಇಂದು ಸಪತ್ನಿಕನಾಗಿ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಪ್ರಭು ಶ್ರೀರಾಮ ಚಂದ್ರನ ದರ್ಶನ ಮಾಡುವಂತಾಗಿದ್ದು ನನ್ನ ಪಾಲಿನ ಸೌಭಾಗ್ಯ" ಎಂದು ಬರೆದುಕೊಂಡಿದ್ದಾರೆ.