For the best experience, open
https://m.samyuktakarnataka.in
on your mobile browser.

೧೦ರಂದು ಟ್ರಾಮ್ ಸೆಂಟರ್ ಉದ್ಘಾಟನೆ

04:06 PM Feb 04, 2024 IST | Samyukta Karnataka
೧೦ರಂದು ಟ್ರಾಮ್ ಸೆಂಟರ್ ಉದ್ಘಾಟನೆ

ಕಲಬುರಗಿ: ಅಪಘಾತ, ದೈಹಿಕ ಗಾಯ ಮತ್ತು ತುರ್ತು ಚಿಕಿತ್ಸಾ ಘಟಕಗಳ ಕೇಂದ್ರ (ಟ್ರಾಮಾ ಸೆಂಟರ್) ದಿ. ೧೦ರಂದು ಲೋಕಾರ್ಪಣೆಗೊಳ್ಳಲಿದೆ. ಇದಕ್ಕಾಗಿ ಭರದ ಸಿದ್ಧತೆ ಸಹ ನಡೆದಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಟ್ರಾಮ್ ಸೆಂಟರ್‌ನಲ್ಲಿ ಭಾನುವಾರ ವೈದ್ಯಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೧೦ ಹಾಸಿಗೆವುಳ್ಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಅತ್ಯಾಧುನಿಕ ಸುಸಜ್ಜಿತ ವೈದ್ಯ ಉಪಕರಣಗಳು, ಸಲಕರಣೆಗಳನ್ನು ಒದಗಿಸಿಕೊಡಲಾಗಿದೆ. ಬಿಪಿಎಲ್ ಕುಟುಂಬದಾರರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಅಲ್ಲದೆ, ಕೆಲವೊಂದು ನಿಗದಿತ ಶುಲ್ಕ ಭರಿಸಿದರೆ ಉಳಿದವರಿಗೂ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಆಂಬುಲೆನ್ಸ್ ಮೇಲೆ ನಿಗಾ
ಅಪಘಾತಕ್ಕೊಳಗಾದ ರೋಗಿಗಳಿಗೆ ತಪ್ಪು ಮಾಹಿತಿ ನೀಡಿ ಬೇರೆ ಖಾಸಗಿ ಆಸ್ಪತ್ರೆಗಳಿಗೆ ಕರದೊಯ್ದರೆ ಅಂಬುಲೆನ್ಸ್ ಚಾಲಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಅಂಬುಲೆನ್ಸ್ ಚಾಲಕರ ಮಾತಿಗೆ ಕಿವಿಗೊಡದೆ ನೇರವಾಗಿ ಟ್ರಾಮ್ ಸೆಂಟರ್‌ಗೆ ಬಂದು ದಾಖಲಾಗಬೇಕು. ಸಾರ್ವಜನಿಕರು ಮತ್ತು ರೋಗಿಗಳಿಂದ ದೂರು ಬಂದರೆ ತಪಿತಸ್ಥ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುವಂತಿಲ್ಲ. ಈ ಬಗ್ಗೆ ಜಿಮ್ಸ್ ನಿರ್ದೇಶಕರು ಮತ್ತು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವರು ಎಚ್ಚರಿಸಿದರು.
ಆಸ್ಪತ್ರೆಯಲ್ಲಿ ಏನೇನಿದೆ
ನರರೋಗ ವಿಭಾಗ, ಕೀಲು, ಮೂಳೆ ವಿಭಾಗ, ತಲಾ ೩೦ ಹಾಸಿಗೆಯುಳ್ಳ ರೆಡ್ ಝೋನ್, ಯೆಲ್ಲೋ ಝೋನ್ ಮತ್ತು ಗ್ರೀನ್ ಝೋನ್ ಮೂರು ಪ್ರತ್ಯೇಕ ವಾರ್ಡ್‌ಗಳನ್ನಾಗಿ ವಿಂಗಡಿಸಲಾಗಿದೆ. ಒಂದು ೧೨೪ ಸಾಮರ್ಥ್ಯದ ಸಿಟಿ ಸ್ಕ್ಯಾನ್ ಸಲಕರಣೆ, ೧.೫ ಎಂಆರ್‌ಐ ಯಂತ್ರೋಪಕರಣ, ಸುಸಜ್ಜಿತ ಐಸಿಯು ಘಟಕ, ನಾಲ್ಕು ಮೆಜರ್ ಓಟಿ ಥಿಯೇಟರ್, ಒಂದು ಮೈನಾರ್ ಓಟಿ ಥಿಯೇಟರ್, ಸುಸಜ್ಜಿತ ಐದು ಅಂಬುಲೆನ್ಸ್ ವಾಹನಗಳು ಸಿದ್ಧವಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.
೨೦೦ ಹಾಸಿಗೆವುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ಹಳೆ ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸಿ, ಅಲ್ಲಿಯೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕಿದೆ. ೧೨೬ ಕೋಟಿ ರೂ. ವೆಚ್ಚದ ಬೃಹತ್ ಸುಸಜ್ಜಿತ ಆಸ್ಪತ್ರೆ ತಲೆಯೆತ್ತಲಿದೆ. ಅಲ್ಲದೆ ೧೫ ಕೋಟಿ ರೂ. ವೆಚ್ಚದಲ್ಲಿ ಟ್ರಾಮ್ ಸೆಂಟರ್ ಹಿಂಬದಿಯಲ್ಲಿ ಪ್ರತ್ಯೇಕವಾಗಿ ಸುಟ್ಟ ಗಾಯ ಚಿಕಿತ್ಸಾ ಕೇಂದ್ರ ಸಹ ಸ್ಥಾಪನೆಗೆ ಸಚಿವ ಸಂಪುಟದಿಂದ ಅನುಮೋದನೆ ದೊರೆತಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಟ್ಟಡ ಕಾಮಗಾರಿಗೆ ಚಾಲನೆ ಸಿಗಲಿವೆ ಎಂದು ಮಾಹಿತಿ ನೀಡಿದರು.
ಜಿಮ್ಸ್ ನಿರ್ದೇಶಕ ಡಾ. ಉಮೇಶ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ.ಆರ್, ಡಾ. ಸತೀಶ ಮೇಳಕುಂದಿ, ಜಿಲ್ಲಾ ಶಸ್ತ್ರಜ್ಞ ಡಾ. ಅಂಬಾರಾಯ ರುದ್ರವಾಡಿ, ಸಹಾಯಕ ಆಡಳಿತಾಧಿಕಾರಿ ವೀರಣ್ಣ ಶಿವಪುರ ಮತ್ತಿತರರಿದ್ದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ನಗರದಲ್ಲಿ ೪೦ ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಮಾರ್ಚ್ ತಿಂಗಳಲ್ಲಿ ಅಡಿಗಲ್ಲು ಹಾಕಲು ಮುಹೂರ್ತ ನಿಗದಿಪಡಿಸಲಾಗಿದೆ. ಕಲಬುರಗಿ ಜಿಲ್ಲೆಯ ಜನತೆಗೆ ಇದೊಂದು ಸಿಹಿ ಸುದ್ದಿ.

- ಡಾ. ಶರಣಪ್ರಕಾಶ ಪಾಟೀಲ್, ಸಚಿವ