For the best experience, open
https://m.samyuktakarnataka.in
on your mobile browser.

೧೩ ದಿನದಲ್ಲಿ ೧.೬೨ ಕೋಟಿ ಮೊತ್ತ ಸಂಗ್ರಹ

07:31 PM Mar 12, 2024 IST | Samyukta Karnataka
೧೩ ದಿನದಲ್ಲಿ ೧ ೬೨ ಕೋಟಿ ಮೊತ್ತ ಸಂಗ್ರಹ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನಗದು ರಹಿತ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಸ್ಥೆಯಲ್ಲಿ ಟಿಕೇಟ ವಿತರಣೆಗೆ “ಯುಪಿಐ” ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಈಚೆಗೆ ಅಳವಡಿಸಿಕೊಂಡಿದ್ದು, ಈ ಹೊಸ ವ್ಯವಸ್ಥೆಗೆ ಚಿಕ್ಕೋಡಿ, ಹುಬ್ಬಳ್ಳಿ ಗ್ರಾಮಾಂತರ ಹಾಗೂ ಬಾಗಲಕೋಟೆ ವಿಭಾಗಗಳು ಉತ್ತಮ ಸ್ಪಂದನೆ ಲಭಿಸಿದೆ. ಮೂರು ವಿಭಾಗಗಳು ಅನುಕ್ರಮವಾಗಿ ಪ್ರತಿ ದಿನ ಅತೀ ಹೆಚ್ಚು ವಹಿವಾಟು ಮಾಡುತ್ತಿವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಮಾರ್ಚ್ ೩ ರಿಂದ ೧೬ರ ಅವಧಿಯಲ್ಲಿ ಸಂಸ್ಥೆಯ ಸುಮಾರು ೪೦೦೦ ಬಸ್ಸುಗಳಲ್ಲಿ ಯುಪಿಐ ಪಾವತಿಯ ಮೂಲಕ ಟಿಕೆಟ್ ವಿತರಣಾ ಪಾಕ್ಷಿಕ ಅಭಿಯಾನದಲ್ಲಿ ಈ ಸ್ಪಂದನೆ ಲಭಿಸಿದೆ. ಈ ನೂತನ ವ್ಯವಸ್ಥೆಯಿಂದ ಒಟ್ಟು ೧.೬೨ ಕೋಟಿ ಮೊತ್ತ ಸಂಗ್ರಹವಾಗಿದೆ. ಗೋಕಾಕ, ಹುಬ್ಬಳ್ಳಿ ಗ್ರಾಮಾಂತರ ಘಟಕ-೩, ಬೆಳಗಾವಿ ೧ನೇ ಘಟಕ, ಹುಬ್ಬಳ್ಳಿ ಗ್ರಾಮಾಂತರ ಘಟಕ-೨ ಹಾಗೂ ಮುಧೋಳ ಘಟಕಗಳು ಅನುಕ್ರಮವಾಗಿ ಪ್ರತಿ ದಿನ ಅತೀ ಹೆಚ್ಚು ವಹಿವಾಟು ಮಾಡುವ ಘಟಕಗಳಾಗಿವೆ ಎಂದು ಹೇಳಿದ್ದಾರೆ.
ಪ್ರತಿ ದಿನ ಅತೀ ಹೆಚ್ಚು ವಹಿವಾಟು ಮಾಡಿದ ನಿರ್ವಾಹಕರಿಗೆ ನಗದು ಪುರಸ್ಕಾರ ಮತ್ತು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಹ ಇದೇ ರೀತಿ ಅತೀ ಹೆಚ್ಚು ವಹಿವಾಟು ಮಾಡುವ ವಿಭಾಗ, ಘಟಕ ಹಾಗೂ ನಿರ್ವಾಹಕರನ್ನು ಗುರುತಿಸಿ, ಅಭಿನಂದಿಸಿ ಪ್ರೋತ್ಸಾಹಿಸಲಾಗುವುದು. ಸಾರ್ವಜನಿಕ ಪ್ರಯಾಣಿಕರು ಯುಪಿಐ ಪಾವತಿ ಮೂಲಕ ಟಿಕೇಟು ಪಡೆಯುವ ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನೂತನ ವ್ಯವಸ್ಥೆ ಪ್ರೋತ್ಸಾಹಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.