For the best experience, open
https://m.samyuktakarnataka.in
on your mobile browser.

೧೭ನೇ ಲೋಕಸಭೆ: ಒಂದೇ ದಿನ ೪೫ ಮಸೂದೆಗೆ ಒಪ್ಪಿಗೆ

11:03 PM Mar 27, 2024 IST | Samyukta Karnataka
೧೭ನೇ ಲೋಕಸಭೆ  ಒಂದೇ ದಿನ ೪೫ ಮಸೂದೆಗೆ ಒಪ್ಪಿಗೆ

ನವದೆಹಲಿ: ೧೭ನೇ ಲೋಕಸಭೆಯಲ್ಲಿ ೨೨೨ ಮಸೂದೆಗಳು ಅಂಗೀಕಾರಗೊಂಡಿದ್ದು ಅವುಗಳಲ್ಲಿ ೪೫ ಮಸೂದೆಗಳು ಸದನದಲ್ಲಿ ಮುಂದಿಟ್ಟ ಒಂದೇ ದಿನದಲ್ಲಿ ಒಪ್ಪಿಗೆ ಪಡೆದಿವೆ.
ಆ ಮಸೂದೆಗಳಲ್ಲಿ ಧನವಿನಿಯೋಗ(ಲೇಖಾನುದಾನ) ಮಸೂದೆ, ಧನವಿನಿಯೋಗ ಮಸೂದೆ, ಜಮ್ಮು-ಕಾಶ್ಮೀರ ಧನವಿನಿಯೋಗ(ಸಂಖ್ಯೆ ೨)ಮಸೂದೆ, ೨೦೨೩ರ ಕೇಂದ್ರೀಯ ಸರಕು ಹಾಗೂ ಸೇವಾ ತೆರಿಗೆ(ತಿದ್ದುಪಡಿ)ಮಸೂದೆ, ೨೦೨೧ರ ಚುನಾವಣಾ ಕಾನೂನು(ತಿದ್ದುಪಡಿ)ಮಸೂದೆ ಪ್ರಮುಖವಾದವು.
ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಎನ್ನುವ ಎರಡು ಸಂಸ್ಥೆಗಳು ೧೭ನೇ ಲೋಕಸಭೆ ಮತ್ತು ಅದರ ಸದಸ್ಯರ ಬಗ್ಗೆ ವಿಶ್ಲೇಷಣೆ ಮಾಡಿ ಹೊರಡಿಸಿದ ವರದಿಯು ಸಂಸತ್‌ಸದಸ್ಯರ ಕಾರ್ಯಕ್ಷಮತೆಯತ್ತ ಬೆಳಕು ಚೆಲ್ಲಿದೆ.
ಸದನದಲ್ಲಿ ಪ್ರಶ್ನೆಗಳನ್ನು ಕೇಳುವುದರಲ್ಲಿ ಮಹಾರಾಷ್ಟ್ರದ ಸಂಸದರೇ ಮುಂದಿದ್ದಾರೆ. ಈ ರಾಜ್ಯದ ೪೯ ಸಂಸದರು ಸರಾಸರಿ ೩೧೯ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ದಿಸೆಯಲ್ಲಿ ಮಣಿಪುರದ ಸಂಸದರು ಕನಿಷ್ಠ ಸಾಧನೆ ಮಾಡಿದ್ದು ಸರಾಸರಿ ೨೫ ಪ್ರಶ್ನೆಗಳನ್ನು ಕೇಳಿದ್ದಾರೆ.
ಪಕ್ಷಗಳ ಪೈಕಿ ಎನ್‌ಸಿಪಿಯ ಐವರು ಸಂಸದರು ತಲಾ ೪೧೦ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅಪ್ನಾದಳ(ಸೋನ್ಯಾಲ್)ದ ಇಬ್ಬರು ಸಂಸದರು ತಲಾ ೫ ಪ್ರಶ್ನೆಗಳನ್ನು ಕೇಳುವ ಮೂಲಕ ಕನಿಷ್ಠ ಸಾಧನೆ ಮಾಡಿದ್ದಾರೆ.
ತೆಲುಗುದೇಶಂನ ಸದಸ್ಯರು ೨೭೩ ಸಿಟ್ಟಿಂಗ್‌ಗಳಲ್ಲಿ ೨೨೯ರಲ್ಲಿ ಪಾಲ್ಗೊಂಡಿರುವುದು ಗರಿಷ್ಠ ಸಾಧನೆ ಮಾಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಸಂಸದರು ಕೇವಲ ೫೭ ಸಿಟ್ಟಿಂಗ್‌ಗಳಲ್ಲಿ ಮಾತ್ರ ಭಾಗವಹಿಸುವುದರೊಂದಿಗೆ ಕನಿಷ್ಠ ಸಾಧನೆ ಮಾಡಿದ್ದಾರೆ.
೧೦ ಸಂಸದರು ಸಂಸದೀಯ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗರಿಷ್ಠ ಪ್ರಶ್ನೆಗಳನ್ನು ಕೇಳಿದ್ದಾರೆ. ಅಂತಹವರಲ್ಲಿ ಬಿಜೆಪಿಯ ಬಲುರ್‌ಘಾಟ್ ಸಂಸದ ಸುಕಾಂತ ಮಜುಂದಾರ್ ೫೯೮ ಪ್ರಶ್ನೆಗಳನ್ನು ಕೇಳುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.