For the best experience, open
https://m.samyuktakarnataka.in
on your mobile browser.

೧೮ ಜಿಲ್ಲೆಗಳಲ್ಲಿ ತೀವ್ರ ಬಿಸಿಗಾಳಿಯ ಎಚ್ಚರಿಕೆ

01:06 AM May 01, 2024 IST | Samyukta Karnataka
೧೮ ಜಿಲ್ಲೆಗಳಲ್ಲಿ ತೀವ್ರ ಬಿಸಿಗಾಳಿಯ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಿಳಂಬವಾಗುತ್ತಿದ್ದು ಇದರಿಂದ ಬಿಸಿಯ ತಾಪ ಹೆಚ್ಚಳವಾಗುತ್ತಿದೆ. ಇನ್ನು ಕೆಲವು ದಿನಗಳ ಕಾಲ ಮತ್ತಷ್ಟು ತಾಪಮಾನ ಹೆಚ್ಚಳವಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ೧೮ ಜಿಲ್ಲೆಗಳಲ್ಲಿ ಮೇ ೫ರವರೆಗೆ ತೀವ್ರವಾದ ಬಿಸಿ ಗಾಳಿಯ ಎಚ್ಚರಿಕೆ ನೀಡಲಾಗಿದೆ.
ಒಂದು ಕಡೆ ಗರಿಷ್ಠ ತಾಪಮಾನ ಹೆಚ್ಚಳವಾಗುತ್ತಿರುವ ನಡುವೆ ಕನಿಷ್ಠ ತಾಪಮಾನವೂ ಕೂಡಾ ೨೩ ಡಿಗ್ರಿಗಿಂತ ಹೆಚ್ಚಳವಾಗಿ ೨೮ ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇದರಿಂದಾಗಿ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿ ಮತ್ತಷ್ಟು ಬಿಸಿ ಗಾಳಿಯ ಲಕ್ಷಣಗಳು ಕಂಡುಬರುವಂತಾಗಿದೆ.
ಸಾಮಾನ್ಯವಾಗಿ ಗರಿಷ್ಠ ತಾಪಮಾನ ಹೆಚ್ಚಳವಾದ ಸಂದರ್ಭದಲ್ಲಿ ಕನಿಷ್ಠ ತಾಪಮಾನ ಅಷ್ಟಾಗಿ ಹೆಚ್ಚಾಗುತ್ತಿರಲಿಲ್ಲ. ಏಪ್ರಿಲ್ ಮೇ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ೨೨ರಿಂದ ೨೩ ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿತ್ತು. ಆದರೆ, ಗರಿಷ್ಠ ತಾಪಮಾನ ೪೨ ಡಿಗ್ರಿಗಿಂತ ಹೆಚ್ಚಾಗಿ ದಾಖಲಾಗುತ್ತಿತ್ತು. ಹೀಗಿದ್ದರೂ ಸಂಜೆ ವೇಳೆಗೆ ವಾತಾವರಣ ತಂಪಾಗುತ್ತಿತ್ತು. ಈ ಬಾರಿ ಅಂತಹ ವಾತಾವರಣ ಇಲ್ಲ. ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿರುವುದರಿಂದ ಬಿಸಿ ಗಾಳಿ ಹೆಚ್ಚಳವಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ ೬ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆ: ರಾಜ್ಯದಲ್ಲಿ ಪೂರ್ವ ಮುಂಗಾರು ಸಮರ್ಪಕವಾಗಿಲ್ಲ. ಪ್ರತಿ ವರ್ಷ ಮಾರ್ಚ್ನಿಂದಲೇ ಮುಂಗಾರು ಪೂರ್ವ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಕೆಲವು ಜಿಲ್ಲೆಗಳಲ್ಲಿ ಒಂದೆರಡು ದಿನ ಸಾಧಾರಣ ಮಳೆಯಾಗಿದ್ದನ್ನು ಬಿಟ್ಟರೆ ಮತ್ತೆ ಮಳೆಯಾಗಿಲ್ಲ. ಹವಾಮಾನ ಇಲಾಖೆ ಪ್ರಕಾರ ಮೇ ೬ರಿಂದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.

ಯಾವ ಜಿಲ್ಲೆಯಲ್ಲಿ
ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೇ ೫ರವರೆಗೆ ಬಿಸಿ ಗಾಳಿ ಇರಲಿದೆ.