೧ ಗಂಟೆಯಲ್ಲಿ ೧೭ ಜನರ ಮೇಲೆ ಬೀದಿ ನಾಯಿ ದಾಳಿ
ಲಖನೌ: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಬೀದಿ ನಾಯಿಯೊಂದು ಆಗಸ್ಟ್ ೧೪ರ ರಾತ್ರಿ ಒಂದು ಗಂಟೆಯೊಳಗೆ ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ ೧೭ ಜನರ ಮೇಲೆ ದಾಳಿ ಮಾಡಿದೆ.
ಶಹಾಪುರದ ಅವಾಸ್ ವಿಕಾಸ್ ಕಾಲೋನಿಯ ಆಶೀಶ್ ಯಾದವರ ಮನೆಯ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿಯನುಸಾರ ೨೨ ವರ್ಷದ ಬಿಬಿಎ ವಿದ್ಯಾರ್ಥಿ ರಾತ್ರಿ ೯.೪೫ರ ಸಮಯದಲ್ಲಿ ಮನೆಯ ಹೊರಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಬೀದಿ ನಾಯಿಯೊಂದು ಏಕಾಏಕಿಯಾಗಿ ಆತನಿದ್ದಲ್ಲಿಗೆ ನುಗ್ಗಿ ದಾಳಿ ಮಾಡಿದ್ದರಿಂದ ಆತನ ಮುಖ, ಬಾಯಿ, ಕಣ್ಣು ಮತ್ತು ತುಟಿಯಿಂದ ರಕ್ತಹರಿದಿದೆ.
ಇದಾದ ನಂತರ ಮತ್ತೊಂದು ಮನೆಯ ಗೇಟ್ ಬಳಿ ನಿಂತಿದ್ದ ಮಹಿಳೆಯ ಮೊಣಕಾಲು ಹಾಗೂ ಕಾಲಿನ ಮೇಲೆ ದಾಳಿ ಮಾಡಿದೆ. ಆ ಬಳಿಕ ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೆಯೂ ದಾಳಿ ಮಾಡಿದೆ. ರೇಬಿಸ್ ಲಸಿಕೆಗಾಗಿ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಕರೆದೊಯ್ದರೆ ಅಲ್ಲಿ ಲಸಿಕೆಗಳೇ ಇಲ್ಲ.
ನಾಯಿ ದಾಳಿಗಳ ಬಗ್ಗೆ ಪದೇಪದೇ ದೂರು ನೀಡುತ್ತಿದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಆದರೆ ಗೋರಖ್‌ಪುರ ಹೆಚ್ಚುವರಿ ಮುನ್ಸಿಫಲ್ ಕಮಿಷನರ್ ದುರ್ಗೆಶ್ ಮಿಶ್ರಾ ಹೇಳುವಂತೆ ಈ ಘಟನೆಗಳ ಬಗ್ಗೆ ಯಾರೂ ನಗರಸಭೆಗೆ ದೂರು ನೀಡಿಲ್ಲ.