For the best experience, open
https://m.samyuktakarnataka.in
on your mobile browser.

೧ ಲಕ್ಷ ಕೋಟಿ ರೂ. ಸಾಲಕ್ಕೆ ಸರ್ಕಾರ ಸಜ್ಜು?

01:30 AM Jan 23, 2025 IST | Samyukta Karnataka
೧ ಲಕ್ಷ ಕೋಟಿ ರೂ  ಸಾಲಕ್ಕೆ ಸರ್ಕಾರ ಸಜ್ಜು

ಬೆಂಗಳೂರು: ೨೦೨೪-೨೫ನೇ ಹಣಕಾಸು ವರ್ಷದ ಡಿಸೆಂಬರ್ ಅಂತ್ಯಕ್ಕೆ ಪ್ರಮುಖ ಇಲಾಖೆಗಳಿಂದ ಸಂಗ್ರಹವಾಗಬೇಕಿದ್ದ ರಾಜಸ್ವ ಪ್ರಮಾಣದಲ್ಲಿ ಭಾರಿ ಕೊರತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಸುಮಾರು ೧ ಲಕ್ಷ ಕೋಟಿ ರೂಪಾಯಿ ಮೊತ್ತದಷ್ಟು ಬೃಹತ್ ಸಾಲಕ್ಕೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಅಧಿಕೃತ ಮೂಲಗಳ ಮಾಹಿತಿಯಂತೆ ಅಂತ್ಯಗೊಳ್ಳಲಿರುವ ಈ ಆರ್ಥಿಕ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಶೇ. ೬೮ರಷ್ಟು ತೆರಿಗೆ ವಸೂಲಾತಿ ಆಗಿದೆ. ಉಳಿದ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ ೬೦ ಸಾವಿರ ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸುವ ಕಠಿಣ ಸವಾಲು ಸರ್ಕಾರದ ಮುಂದಿದೆ. ಹಿಂದಿನ ತಿಂಗಳಿಗೆ ಹೋಲಿಕೆ ಮಾಡಿದರೆ ಮಾಸಿಕ ೧೪ ಸಾವಿರದಂತೆ ಒಟ್ಟಾರೆ ೪೨ ಸಾವಿರ ಕೋಟಿ ಸಂಗ್ರಹವಾಗಲಿದ್ದು, ಅಂದಾಜು ಹತ್ತು ಸಾವಿರ ಕೋಟಿ ರೂ. ಕೊರತೆ ಎದುರಾಗಲಿದೆ.

ಕೈ ಕೊಟ್ಟ ಪ್ರಮುಖ ಇಲಾಖೆಗಳು
ದಾಖಲೆ ಗಾತ್ರದ ಬಜೆಟ್ ಮಂಡಿಸಿದ್ದ ವಿತ್ತ ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಒಟ್ಟಾರೆ ೧.೮೭ ಲಕ್ಷ ಕೋಟಿ ರೂ ಆದಾಯ ಸಂಗ್ರಹಾತಿಯ ಗುರಿ ಹಾಕಿಕೊಂಡಿದ್ದರು. ಈಗಿನ ಸಂಗ್ರಹ ತುಲನೆ ಮಾಡಿದರೆ ಮೂರು ತಿಂಗಳಲ್ಲಿ ೬೦ ಸಾವಿರ ಕೋಟಿ ತೆರಿಗೆ ವಸೂಲಾಗಬೇಕಿದೆ. ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನ ತೆರಿಗೆ ಪ್ರಮುಖ ಸಂಪನ್ಮೂಲ ಮೂಲಗಳಾಗಿದ್ದು ಕೇವಲ ನಾಲ್ಕು ಇಲಾಖೆಗಳಿಂದಲೇ ೫೯ ಸಾವಿರ ಕೋಟಿ ತೆರಿಗೆ ಸಂಗ್ರಹ ಬಾಕಿ ಇದೆ. ಈಗಾಗಲೇ ೨೦೨೫-೨೬ನೇ ಸಾಲಿನ ಬಜೆಟ್‌ಗೆ ಪೂರ್ವಸಿದ್ಧತೆ ನಡೆದಿದ್ದು ನಿರೀಕ್ಷಿತ ತೆರಿಗೆ ಹರಿವು ಅಸಾಧ್ಯ ಎನ್ನಲಾಗಿದೆ.

ಗ್ಯಾರಂಟಿಯೇ ಖಜಾನೆಗೆ ಹೊರೆ
ಒಟ್ಟಾರೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವ ಅನಿವಾರ್ಯತೆ ಇದ್ದು ಸರ್ಕಾರ ಹೊಸದಾಗಿ ಒಂದು ಲಕ್ಷ ಕೋಟಿ ರೂಪಾಯಿ ಸಾಲಕ್ಕೆ ಮುಂದಾಗಿದೆ. ವಿಶ್ವಬ್ಯಾಂಕ್ ಸೇರಿದಂತೆ ಬಡ್ಡಿದರ ಆಧರಿಸಿ ಖಾಸಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುವ ಚಿಂತನೆಯನ್ನೂ ನಡೆಸಿದೆ. ಈ ಬಜೆಟ್‌ನಲ್ಲಿಯೂ ಗ್ಯಾರಂಟಿ ಯೋಜನೆಗಳಿಗೆ ೬೦ ಸಾವಿರ ಕೋಟಿಯಷ್ಟ ಹಣ ಮೀಸಲಿಡಬೇಕಿದೆ. ಜೊತೆಗೆ ಸರ್ಕಾರ ನೌಕರರಿಗೆ ೭ನೇ ವೇತನ ಆಯೋಗದನ್ವಯ ಹೆಚ್ಚುವರಿ ಹಣ ಪಾವತಿಸಬೇಕಿರುವ ಹಿನ್ನೆಲೆಯಲ್ಲಿ ಬೊಕ್ಕಸಕ್ಕೆ ದೊಡ್ಡ ಹೊರೆ ಬೀಳಲಿದೆ.