೨ಎ ಮೀಸಲಾತಿ: ೨೦ರಂದು ವಕೀಲರ ಹೋರಾಟಕ್ಕೆ ನಿರ್ಧಾರ
ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗಾಗಿ ಆಗ್ರಹಿಸಿ ವಕೀಲರ ಮೂಲಕವೇ ಸೆ. ೨೦ರಂದು ಪರಿಷತ್ತು ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ೨ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ವಕೀಲರ ಮೂಲಕ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ. ವಕೀಲರು ಮಹಾ ಪರಿಷತ್ತು ಮಾಡಲು ತೀರ್ಮಾನ ಮಾಡಲಾಗಿದೆ. ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡುತ್ತೇವೆ. ೨ಎ ಮೀಸಲಾತಿ ಚಳುವಳಿ ಹರಿಯುವ ಗಂಗೋತ್ರಿ ಇದ್ದಂತೆ. ಆದೇಶ ಸಿಗುವವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದರು.
ರಾಜ್ಯ ಮಟ್ಟದ ವಕೀಲ ಸಮಾಜ ಸಂಘಟನೆ ಮಾಡುತ್ತಿದ್ದೇವೆ. ೭ನೇ ಹಂತದ ಹೋರಾಟ ಈಗಾಗಲೇ ಆರಂಭ ಮಾಡಿದ್ದೇವೆ. ಸರ್ಕಾರ ರಚನೆಯಾದ ಮೇಲೆ ೨೦ ಜನ ಶಾಸಕರು ಅಧಿವೇಶನದಲ್ಲಿ ಮಾತನಾಡಲಿಲ್ಲ. ಶಾಸಕರ ಮನೆ ಮನೆಗೆ ಹೋಗಿ ಆಗ್ರಹ ಪತ್ರ ಚಳುವಳಿ ಮಾಡಿದ್ದೇವೆ. ೯ ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಶಾಸಕರು ಸ್ಪೀಕರ್‌ಗೆ ಮನವಿ ಕೊಟ್ಟರೂ ಸಹ ಮೂಡಾ, ವಾಲ್ಮೀಕಿ ಹಗರಣಗಳ ನಡುವೆ ಶಾಸಕರ ಧ್ವನಿ ಅಡಗಿಸುವ ಕೆಲಸ ಆಗಿದೆ ಎಂದು ಅವರು ಹೇಳಿದರು.
ನಮ್ಮ ಸಮಾಜದ ಹೆಚ್ಚಿನ ಜನ ವಕೀಲರಾಗಿದ್ದಾರೆ. ವಕೀಲರ ಮೂಲಕ ಹೋರಾಟ ಮಾಡುವ ಉದ್ದೇಶ ಹೊಂದಿದ್ದು, ಬೆಳಗಾವಿ, ಕೊಪ್ಪಳ, ಬೀದರ, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ವಕೀಲರನ್ನ ಸೇರಿಸಿ ಸಿಎಂಗೆ ಮನವಿ ಕೊಡ್ತೇವೆ. ನಮ್ಮ ೨ಎ ಮೀಸಲಾತಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ೧೧ ಜನ ಹಿರಿಯ ವಕೀಲರ ತಂಡ ಮಾಡ್ತಿದ್ದೇವೆ. ಮಂತ್ರಿಗೆ ಮನವಿ ಕೊಡಲಿದ್ದೇವೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ವಕೀಲರನ್ನ ಸೇರಿಸುತ್ತಿದ್ದೇವೆ ಎಂದು ಹೇಳಿದರು.