೨೦೨೨ರಲ್ಲಿ ಹುಬ್ಬಳ್ಳಿಗೆ ಬಂದಿದ್ದ ಮಾಜಿ ಪ್ರಧಾನಿ ಕುಟುಂಬ
ಹುಬ್ಬಳ್ಳಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಕಂಬನಿ ವ್ಯಕ್ತಪಡಿಸಿರುವ ಮನಮೋಹನ ಸಿಂಗ್ ಪತ್ನಿಯ ಸಹೋದರಿಯ ಪುತ್ರ ಪರಮಿಂದರ್ ಸಿಂಗ್ ಕೊಹ್ಲಿ ಅವರು ದೊಡ್ಡಪ್ಪ ಮನಮೋಹನ ಸಿಂಗ್ ಅವರೊಟ್ಟಿಗಿನ ಒಡನಾಟವನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಕುಂದಗೋಳ ಕ್ರಾಸ್ ಬಳಿ ಮಿನಿ ಪಂಜಾಬಿ ಧಾಬಾ ಹಾಗೂ ಆಟೋಮೊಬೈಲ್ ಉದ್ಯಮದಲ್ಲಿ ತೊಡಗಿಕೊಂಡಿರುವ ಮನಮೋಹನ ಸಿಂಗ್ ಅವರ ಸಂಬಂಧಿ ಪರಮಿಂದರ್ ಸಿಂಗ್ ಕೊಹ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಜೊತೆಗೆ ದುಖಃ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ೨೦೨೨ರಲ್ಲಿ ಕುಟುಂಬ ಸಮೇತ ದೆಹಲಿಗೆ ತೆರಳಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದೆವು. ನಮ್ಮೊಡನೆ ಲವಲವಿಕೆಯಿಂದಲೇ ಅವರು ಮಾತನಾಡಿದ್ದರು. ಒಬ್ಬರನ್ನೂ ಬಿಡದೇ ಅವರ ಹೆಸರು ಸಮೇತ ಆರೋಗ್ಯದ ಬಗ್ಗೆ ವಿಚಾರಿಸಿದ್ದರು ಎಂದು ಭಾವುಕರಾದರು.
ಮನಮೋಹನ ಸಿಂಗ್ ಅವರೊಂದಿಗೆ ನಮ್ಮ ಕುಟುಂಬದ ಒಡನಾಟ ಮೊದಲಿನಿಂದಲೂ ಚನ್ನಾಗಿದೆ. ಮನಮೋಹನ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಹಾಗೂ ನಮ್ಮ ತಾಯಿ ಸ್ವಂತ ಅಕ್ಕ ತಂಗಿಯರು. ಹೀಗಾಗಿ ಬಾಲ್ಯದಿಂದಲೂ ನಾವು ಅವರ ಮನೆಗೆ ಹೋಗಿ ಬಂದು ಮಾಡುತ್ತಿದ್ದೆವು. ಹೀಗಾಗಿ ದೊಡ್ಡಪ್ಪನ ಜೊತೆಗೆ ಉತ್ತಮ ಬಾಂಧವ್ಯ ಇತ್ತು. ಕನಿಷ್ಟ ೩-೪ ತಿಂಗಳಿಗಾದರೂ ಒಮ್ಮೆ ದೂರವಾಣಿಯ ಮುಖಾಂತರ ಉಭಯ ಕುಷಲೋಪರಿ ಮಾತನಾಡುತ್ತಿದ್ದೆವು ಎಂದು ತಿಳಿಸಿದರು.
೨೦೧೦ರ ಜನೆವರಿ ೭ ರಂದು ನಮ್ಮ ವಿದ್ಯಾನಗರದ ನಿವಾಸಕ್ಕೆ ದೊಡ್ಡಮ್ಮ (ಮನಮೋಹನ ಸಿಂಗ್ ಪತ್ನಿ) ಗುರುಶರಣ್ ಕೌರ್ ಹಾಗೂ ಮಗಳು ಧಮನ್ ಸಿಂಗ್ ಆಗಮಿಸಿದ್ದರು. ಒಂದು ದಿನ ನಮ್ಮ ನನೆಯಲ್ಲೇ ತಂಗಿ ಮಾರನೆ ದಿನ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ರಜೆ ದಿನಗಳಲ್ಲಿ ಅವರ ದೆಹಲಿಯ ನಿವಾಸಕ್ಕೆ ನಾವೆಲ್ಲ ತೆರಳಿದಾಗ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಮನಮೋಹನ್ ಸಿಂಗ್ ಅವರ ನಿಧನ ತೀವೃ ಆಘಾತವನ್ನು ಉಂಟುಮಾಡಿದೆ. ಅವರ ಅಂತಿಮ ದರ್ಶನ ಪಡೆಯಲು ದೆಹಲಿಗೆ ತೆರಳುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.