For the best experience, open
https://m.samyuktakarnataka.in
on your mobile browser.

2029ಕ್ಕೆ ಏಕ ಚುನಾವಣೆ: ಸಲಹೆ

11:15 PM Mar 14, 2024 IST | Samyukta Karnataka
2029ಕ್ಕೆ ಏಕ ಚುನಾವಣೆ  ಸಲಹೆ

ನವದೆಹಲಿ: ದೇಶದೆಲ್ಲೆಡೆ ಒಂದೇ ಬಾರಿ ಚುನಾವಣೆ ಕುರಿತು ನೇಮಿಸ­ಲಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿಯನ್ನು ಸಲ್ಲಿಸಿದೆ.
೨೦೨೩ರ ಸೆಪ್ಟೆಂಬರ್ ೨ರಿಂದ ಒಟ್ಟು ೧೯೧ ದಿನಗಳ ಕಾಲ ಸಂಶೋಧನೆ, ಸಮಾ­ಲೋಚನೆ ಮಾಡಿದ ಬಳಿಕ ಸಮಿತಿಯ ೧೮,೬೨೬ ಪುಟಗಳ ವರದಿಯನ್ನು ಸಲ್ಲಿಸಿದೆ. ವರದಿ ಸಲ್ಲಿಕೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವರದಿಯಲ್ಲಿ ಲೋಕಸಭೆ-ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಿ ಮುಂದಿನ ೧೦೦ ದಿನಗಳ ಅಂತರದಲ್ಲಿ ಪುರಸಭೆ ಚುನಾ­ವಣೆ ನಡೆಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ.
ತಿದ್ದುಪಡಿ ಆಗತ್ಯ ಕಾನೂ­ನು: ಭಾರತದ ಸಂವಿಧಾನದ ೩೨೪ಎ ವಿಧಿ, ಪ್ರಜಾಪ್ರಾತಿನಿಧ್ಯ ಕಾಯ್ದೆ, ೧೯೫೦, ಜನ ಪ್ರತಿನಿಧಿ ಕಾಯ್ದೆ, ೧೯೫೧, ಇನ್ನಿತರ ಸಂಬಂಧಿತ ಕಾನೂನುಗಳು.

ಶಿಫಾರಸುಗಳೇನು?
ಲೋಕ ಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನ ಸಭೆ ಚುನಾವಣೆಗಳು ಒಟ್ಟಿಗೇ ನಡೆಯಬೇಕು. ಮುನಿಸಿಪಾಲಿಟಿ, ಪಂಚಾಯತ್‌ಗಳ ಚುನಾ­ವಣೆ ಸಾರ್ವಜನಿಕ ಚುನಾವಣೆ ನಂತರ ೧೦೦ ದಿನದೊಳಗೆ ಒಟ್ಟಿಗೇ ನಡೆಯಬೇಕು.

ತ್ರಿಶಂಕು ಫಲಿತಾಂಶ ಬಂದರೆ…
ತ್ರಿಶಂಕು ಫಲಿತಾಂಶ ಬಂದಲ್ಲಿ ಅಥವಾ ಸರ್ಕಾರ ವಿಶ್ವಾಸಮತ ಕಳೆದುಕೊಂಡಲ್ಲಿ ಹೊಸ ಚುನಾವಣೆ ನಡೆಸಬಹುದು. ಆದರೆ ಅದರ ಅವಧಿ ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೆ ಮಾತ್ರ ಇರಬೇಕು. ಈ ನಿಟ್ಟಿನಲ್ಲಿ ಸಂವಿಧಾನದ ವಿಧಿ ೮೩ ಮತ್ತು ೧೭೨ನ್ನು ತಿದ್ದುಪಡಿ ಮಾಡಬೇಕಾಗುತ್ತದೆ.

ಹೊಂದಾಣಿಕೆ ಹೇಗೆ?
೨೦೨೯ರಲ್ಲಿ ಮತ್ತೆ ಲೋಕಸಭೆ ಚುನಾವಣೆ ನಡೆಯುತ್ತದೆ. ಆ ಹೊತ್ತಿಗೆ ವಿವಿಧ ಅವಧಿಯಲ್ಲಿ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದರೂ, ಅದರ ಮುಕ್ತಾಯ ಅವಧಿ ೨೦೨೯ಕ್ಕೆ ಆಗಬೇಕು. ಉದಾಹರಣೆಗೆ ೨೦೨೮ರಲ್ಲಿ ಅಸ್ತಿತ್ವಕ್ಕೆ ಬರುವ ವಿಧಾನಸಭೆಗಳು, ೨೦೨೯ಕ್ಕೆ ವಿಸರ್ಜನೆಯಾಗುತ್ತವೆ.